ಮೂಡಿಗೆರೆ: ಬಿ.ಹೊಸಹಳ್ಳಿಯ ಫಲ್ಗುಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ರಮೇಶ್ ಬಾನಹಳ್ಳಿ ಅವಿರೋಧವಾಗಿ ಆಯ್ಕೆಯಾದರು.
ಸಹಕಾರಿ ಧುರೀಣ ಒ.ಎಸ್.ಗೋಪಾಲಗೌಡ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ರೈತರಿಗೆ ನೆರವಾಗುವಂತಹ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ರೈತರ ಬದುಕು ಕಷ್ಟದ ಪರಿಸ್ಥಿತಿಯಲ್ಲಿದೆ. ಮಳೆಯಿಂದ ಜಮೀನು ನಾಶವಾಗಿ, ಬೆಳೆ ನೆಲಕಚ್ಚಿದೆ. ಕಾಡಾನೆ ಸೇರಿದಂತೆ ಮತ್ತಿತರೆ ಕಾಡುಪ್ರಾಣಿಗಳ ಹಾವಳಿಯಿಂದ ತಮ್ಮ ಜಮೀನಿಗೆ ತೆರಳಲು ಸಾಧ್ಯವಾಗದೆ ತೋಟ, ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಜನರಿಗೆ ಆಹಾರವಿಲ್ಲದೆ ಕಷ್ಟ ಪಡಬೇಕಾಗುತ್ತದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು ಎಂದರು.
ಕಾಡಾನೆ ಇತರೆ ಕಾಡುಪ್ರಾಣಿಗಳ ಹಾವಳಿಗೆ ಮುಕ್ತಿ ದೊರಕಿಸಬೇಕು. ಅತಿವೃಷ್ಟಿಯಿಂದ ಜಮೀನು ಮತ್ತು ಬೆಳೆ ಹಾನಿಗೆ ಪರಿಹಾರ ನೀಡಬೇಕು. ರೈತರಿಗೆ ಮಾರಕವಾಗಿರುವ ಸರ್ಫೇಸಿ ಕಾಯ್ದೆ ಮತ್ತು ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಸಹಕಾರಿ ಕ್ಷೇತ್ರದಲ್ಲಿ ರೈತರು ಕೂಲಿಕಾರ್ಮಿಕರಿಗೆ ಉಪಯುಕ್ತ ಯೋಜನೆ ರೂಪಿಸಬೇಕು. ಹೈನುಗಾರಿಕೆ ಸ್ವ ಉದ್ಯೋಗ ತರಬೇತಿಗೆ ಹೆಚ್ಚಿನ ಅನುದಾನ ಮೀಸಲಿಡಬೇಕು. ವ್ಯಾಪಾರ, ಕೈಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂಥಹ ಉತ್ತಮ ಕೆಲಸ ಮಾಡುವ ಸಹಕಾರ ಸಂಘದ ಗೌರವ ಉನ್ನತಮಟ್ಟಕ್ಕೆ ಏರುತ್ತದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಎಚ್.ಟಿ.ಪ್ರಸನ್ನ, ಕೆ.ಬಿ.ಗೋಪಾಲಗೌಡ, ಓ.ಜಿ.ರವಿ, ಬಿ.ಎಸ್.ರಕ್ಷಿತ್, ಎಚ್.ಅಮೋಘ, ಎಚ್.ಎಂ.ರಚನಾ, ಅರುಣ, ಎಚ್.ಕೆ.ಸಾವಿತ್ರಿ, ಟಿ.ಎ.ಶೇಖರ್ ಪೂಜಾರಿ, ಬಿ.ಎಂ.ರಮೇಶ್, ಎಸ್.ಸುಂದರ, ಬಿ.ಎಲ್.ಉಪೇಂದ್ರ, ಎಚ್.ಎ.ದ್ಯಾವಣ್ಣ ಗೌಡ, ಚುನಾವಣಾಧಿಕಾರಿ ಜ್ಯೋತಿ ಲಕ್ಷ್ಮಿ , ಮೇಲ್ವಿಚಾರಕ ಯು.ಸಿ.ಪ್ರಯಾಗ್, ಸಂಘದ ಸಿಇಒ ಬಿ.ಆರ್.ವೇಣುಗೋಪಾಲ್ ಇದ್ದರು.