ಜಿಲ್ಲೆ

ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ರಮೇಶ್ ಆಯ್ಕೆ

ಬೇಲೂರು: ಬೇಲೂರು ತಾಲೂಕಿನಲ್ಲಿ ಛಲವಾದಿ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ತೆಂಡೇಕೆರೆ ರಮೇಶ್ ಅವರನ್ನು ಛಲವಾದಿ ಮಹಾಸಭಾದ ನೂತನ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಲೋಕೇಶ್ ಕುಮಾರ್ ಹೇಳಿದರು.

ಈ ಹಿಂದೆ ಚಿಕ್ಕಬ್ಯಾಡಗೆರೆ ಮಂಜುನಾಥ್ ಅಧ್ಯಕ್ಷರಾಗಿದ್ದರು. ಬೇರೆಯವರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ತೆಂಡೇಕೆರೆ ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಛಲವಾದಿ ಸಂಘಟನೆಯ ಎಲ್ಲ ಮುಖಂಡರ ಸಲಹೆ ಸಹಕಾರ ಪಡೆದು ಮುನ್ನಡೆಸಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೆ.ಶಿವರಾಮ್ ನೇತೃತ್ವದಲ್ಲಿ ಪ್ರಾರಂಭವಾದ ಛಲವಾದಿ ಮಹಾಸಭಾವೇ ನಿಜವಾದ ಸಮಿತಿ. ಕೆಲವರು ಗೊಂದಲ ಸೃಷ್ಟಿಸಲು ಸಮಿತಿ ಹುಟ್ಟು ಹಾಕುತ್ತಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದ ಮಂಜುನಾಥ್ ಅವರನ್ನು ಜಿಲ್ಲಾ ಗೌರವಾಧ್ಯಕ್ಷರನ್ನಾಗಿ ಮಾಡಲಾಗುವುದು. ಹಾಗೂ ರಾಜ್ಯದಲ್ಲಿ ಜಾತಿ ಜನಗಣತಿ ನಡೆಯುತ್ತಿದ್ದು, ಛಲವಾದಿ ಸಮುದಾಯವನ್ನು ಗುರುತಿಸಿ ಸರಿಯಾದ ಮಾಹಿತಿ ನೀಡಿ ನೋಂದಾಯಿಸಲು ಹೊಸ ಸಮಿತಿ ಕೆಲಸ ಮಾಡಬೇಕಿದೆ. ಈಗಿನ ಸಮೀಕ್ಷೆಯಲ್ಲಿ ಕೆಲ ಗೊಂದಲವಿದ್ದು, ಸರಿಯಾದ ಗಣತಿಗಾಗಿ ಹೆಚ್ಚಿನ ಸಮಯಾವಕಾಶ ಬೇಕಿರುವುದರಿಂದ ಸರ್ಕಾರ ಗಣತಿ ಕಾರ್ಯವನ್ನು ಮತ್ತಷ್ಟು ದಿನಕ್ಕೆ ಮುಂದುವರಿಸಬೇಕು ಎಂದರು.

ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ತೆಂಡೇಕೆರೆ ರಮೇಶ್ ಮಾತನಾಡಿ, ಸಾಕಷ್ಟು ವರ್ಷಗಳಿಂದ ಸಮುದಾಯಕ್ಕೆ ಕೆಲಸ ಮಾಡಿದ್ದನ್ನು ಗುರುತಿಸಿ ತಾಲೂಕು ಅಧ್ಯಕ್ಷನ ಜವಾಬ್ದಾರಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿರುವ ಸಮುದಾಯವನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು. ಹಿರಿಯರ ಸಲಹೆ ಪಡೆದು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.

ಛಲವಾದಿ ಮುಖಂಡರಾದ ಸೋಮಶೇಖರ್, ಸಿದ್ದಮಂಜು, ಬಸವರಾಜ್, ಸತೀಶ್ ಇದ್ದರು.