ಶೃಂಗೇರಿ: ಮಲೆನಾಡ ಸಾಂಸ್ಕೃತಿಕ ಅಸ್ಮಿತೆಯಾದ ಪ್ರಸಿದ್ಧ ಮತ್ತು ಬಹು ಕ್ಷೇತ್ರಗಳ ನಿರಂತರ ಸಾಧಕ ಶೃಂಗೇರಿಯ ರಮೇಶ್ ಬೇಗಾರ್‌ಗೆ ಹೊನ್ನಾವರ ಗುಣವಂತೆಯಲ್ಲಿ ನಡೆದ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯ ಉತ್ಸವದಲ್ಲಿ ಸಾಂಸ್ಕೃತಿಕ ಸಂಘಟನಾ ಕ್ಷೇತ್ರದಿಂದ ಸಾಧಕ ಸನ್ಮಾನದ ಗೌರವ ಲಭಿಸಿದೆ.
ಒಂಭತ್ತು ದಿನಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಲಾವಿದರ ವಿವಿಧ ಕಲಾಪ್ರದರ್ಶನದ ಈ ವೇದಿಕೆಯಲ್ಲಿ ಪ್ರತಿದಿನ ಕಲಾ ಕ್ಷೇತ್ರದಲ್ಲಿ ದುಡಿದ ಮಹನೀಯರನ್ನು ಗೌರವ ಸನ್ಮಾನ ಮಾಡುವ ಮೂಲಕ ಕೆರೆಮನೆ ಶಂಭು ಹೆಗಡೆ ಸ್ಮಾರಕವಾಗಿ ಗೌರವಿಸಲಾಗಿತ್ತು.
ರಂಗಭೂಮಿ, ಯಕ್ಷಗಾನ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ 38 ವರ್ಷಗಳಿಂದ ಅನನ್ಯವಾಗಿ ತೊಡಗಿಸಿಕೊಂಡಿರುವ ರಮೇಶ್ ಬೇಗಾರು ತಾನು ಕೈಯಾಡಿಸಿದ ಎಲ್ಲ ಪ್ರಕಾರಗಳಲ್ಲೂ ಮೈಲಿಗಲ್ಲು ನೆಟ್ಟ ಪ್ರತಿಭಾಶಾಲಿ. ಆ ಎಲ್ಲ ಕ್ಷೇತ್ರದ ಸಾಧನೆಗಾಗಿ ರಾಜ್ಯ ಮತ್ತು ವಿದೇಶದಲ್ಲೂ ವಿವಿಧ ಗೌರವಕ್ಕೆ ಪಾತ್ರರಾಗಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿರುವ ಅವರು ಯಕ್ಷಗಾನ ಅಕಾಡೆಮಿಗೆ ಎರಡು ಅವಧಿಯಲ್ಲಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಯಕ್ಷಗಾನದ ಮೇರು ಸಾಧಕರು ಮತ್ತು ಯಕ್ಷಗಾನ ಕಲೆಗೆ ಅಕಾಡೆಮಿಕ್ ಸ್ಪರ್ಶ ನೀಡಿದ ಪ್ರಯೋಗಶೀಲ ದಿಗ್ಗಜ ಶಂಭು ಹೆಗಡೆ ಅವರ ಕರ್ಮ ಕ್ಷೇತ್ರದಲ್ಲಿ ಅವರ ಸ್ಮರಣೀಯ ಪ್ರಶಸ್ತಿ ಸ್ವೀಕರಿಸುವುದು ಅಪಾರ ಹೆಮ್ಮೆ ತಂದಿದೆ ಎಂದಿದ್ದಾರೆ.