ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಾಮೇಗೌಡರು ತಮ್ಮ ನರ್ಸರಿಯಲ್ಲಿ ಕಾಡಿನ ಅಪರೂಪದ ಸಸಿಗಳನ್ನು ಆರೈಕೆ ಮಾಡುತ್ತಿರುವುದು. 
ಜಿಲ್ಲೆ

ಅಪರೂಪದ ಕಾಡು ಜಾತಿಯ ಸಸ್ಯ ಸಂರಕ್ಷಕ ರಾಮೇಗೌಡ

ಯಳಂದೂರು: ಅಪರೂಪದ ಕಾಡುಗಿಡಗಳ ಬೀಜ, ಕಡ್ಡಿ, ಗಡ್ಡೆಗಳನ್ನು ಕಾಡಿನಿಂದ ಆಯ್ದು ತಂದು ಇದನ್ನು ಗಿಡಗಳಾಗಿ ಬೆಳೆಸಿ, ನರ್ಸರಿ ಮೂಲಕ 26 ವರ್ಷಗಳಿಂದ ಕಾಡಿನ ಸಂರಕ್ಷಣೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಸೋಲಿಗ ಸಮುದಾಯದ ರಾಮೇಗೌಡ ಅವರಿಗೆ ಈ ಬಾರಿ ಪರಿಸರ ವಿಭಾಗದಲ್ಲಿ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಕಾಡು ಇದ್ದರೆ ಮಾತ್ರ ಪ್ರಾಣಿ, ಸಸ್ಯ ಸಂಕುಲಗಳು ಉಳಿಯುತ್ತವೆ. ಅಲ್ಲದೆ ಇದು ಜೀವ ಜಗತ್ತಿಗೆ ಅನಿವಾರ್ಯವಾಗಿದೆ. ಕಾಡು ಸಸ್ಯಗಳಲ್ಲಿ ಅನೇಕ ಜೀವಾಮೃತಗಳಿವೆ. ಇದನ್ನು ಸಂರಕ್ಷಿಸಿಸುವ ಕೆಲಸಕ್ಕೆ ಅತ್ಯಗತ್ಯವಾಗಿದೆ. ಜಾಗತಿಕ ತಾಪಮಾನದ ನಿಯಂತ್ರಣದಲ್ಲಿ ಕಾಡಿನ ಪಾತ್ರ ಮಹತ್ವ ಪಾತ್ರ ವಹಿಸಿದೆ. ಮಾನವ, ಅಭಿವೃದ್ಧಿ ನೆಪದಲ್ಲಿ ಕಾಡು ನಾಶ ಮಾಡಿ ನಗರ ನಿರ್ಮಾಣ ಮಾಡುತ್ತಿದ್ದಾರೆ. ಕಾಡು, ಮರಗಳು ಕಣ್ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಪರಿಸರ ಸಂರಕ್ಷಣೆ ಕಾಯಕದಲ್ಲಿ ರಾಮೇಗೌಡರು ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ.

47 ವರ್ಷ ಪ್ರಾಯದ ರಾಮೇಗೌಡ ಅವರು ಬೆಟ್ಟದ ಕಾಡಿನ ಪರಿಸರದಲ್ಲೇ ಬೆಳೆದವರು. ರಾಮಿ ನಂಜೇಗೌಡ-ಕೇತಮ್ಮ ದಂಪತಿ ಪುತ್ರರಾದ ಇವರು ತಂದೆ ಔಷಧೀಯ ಸಸ್ಯಗಳನ್ನು ಬೆಳೆಯುತ್ತಿದ್ದು ನಾಟಿ ಔಷಧವನ್ನು ನೀಡುತ್ತಿದ್ದನ್ನು ನೋಡಿ ಬೆಳೆದ ಇವರಿಗೆ ಔಷಧ ಗಿಡಗಳು ಹಾಗೂ ಕಾಡು ಜಾತಿ ಗಿಡಗಳೆಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಇತ್ತೀಚೆಗೆ ಈ ಸಸಿಗಳ ಸಂತತಿ ನಶಿಸಿ ಹೋಗುತ್ತಿದ್ದು ಇದನ್ನು ಸಂರಕ್ಷಿಸಬೇಕೆಂಬ ಉದ್ದೇಶದಿಂದ ಇವರು ತಮ್ಮ ನರ್ಸರಿಯಲ್ಲಿ ಅಪರೂಪದ ಕಾಡು ಹಾಗೂ ಔಷಧ ಸಸ್ಯಗಳ ವನ ಮಾಡಿದ್ದಾರೆ. ಇದಕ್ಕೆ ಇವರ ಮಡದಿ ಕೇತಮ್ಮ, ಮೂವರು ಹೆಣ್ಣು ಮಕ್ಕಳು ಸಾಥ್ ನೀಡುತ್ತಿದ್ದಾರೆ.

ಈಗ ಈ ಸಸ್ಯಗಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿರುವ ವಿರಳರಲ್ಲಿ ಇಲ್ಲಿನ ಸೋಲಿಗ ಸಮುದಾಯದ ರಾಮೇಗೌಡ ಹಲವು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದಾರೆ. ಇವರು ಅಪರೂಪದ ಕಾಡು ಸಸ್ಯಗಳನ್ನು ಬೆಂಗಳೂರು ನಗರ, ಬನ್ನೇರುಘಟ್ಟ, ಮಾಕಳಿಬೆಟ್ಟ ಸೇರಿದಂತೆ ನಾಡಿನ ಉದ್ದಗಲಕ್ಕೆ ನೀಡಿದ್ದಾರೆ. ಇವರ ಬಳಿ ಅತಿ ಅಪರೂಪದ ಜಾಲ, ಆಳಲೆ, ನೀಳಲು, ಸಾಗಡೆ, ಮಾಕಳಿ ಬೇರು, ನರವಲು ಸೇರಿದಂತೆ ವಿಭಿನ್ನ ಪ್ರಭೇದ ಗಿಡಗಳನ್ನು ಕಾಡಿನಿಂದ ಬೀಜವನ್ನು ತಂದು ಇದನ್ನು ತಮ್ಮ ನರ್ಸರಿಯಲ್ಲಿ ಬೆಳೆಸಿ ಈ ಗಿಡಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅತ್ಯಂತ ಖುಷಿಯಾಗಿದೆ. ನನ್ನ ಕೆಲಸದಲ್ಲಿ ನನಗೆ ಹೆಚ್ಚು ಆಸಕ್ತಿ. ಅಪರೂಪದ ಗಿಡಗಳನ್ನು ಬೆಂಗಳೂರು, ಮೈಸೂರು, ಮಂಗಳೂರಿಗೂ ಮಾರಿದ್ದೇನೆ. ಈ ಗಿಡಗಳನ್ನು ಮಕ್ಕಳಂತೆ ಪೋಷಿಸುತ್ತಿದ್ದೇನೆ. ಕಾಡು ಎಂದರೆ ಪಂಚಪ್ರಾಣ. ಇಲ್ಲೇ ಹುಟ್ಟಿರುವ ನಾವು ಕಾಡಿನ ಮಕ್ಕಳು, ಇಂಥ ಗಿಡಗಳ ಪೋಷಣೆಗೆ ನನ್ನ ಕುಟುಂಬ ನನ್ನ ಸಹಕಾರಕ್ಕಿದೆ. ನನ್ನ ಜೀವನವೂ ಇದರಿಂದ ನಡೆಯುತ್ತಿದೆ. ಈಗ ಪ್ರಶಸ್ತಿ ಲಭಿಸಿರುವುದು ಅತೀವ ಸಂತಸ ತಂದಿದ್ದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ರಾಮೇಗೌಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು