ramdevnahlli problem 
ಜಿಲ್ಲೆ

ರಾಮದೇವನಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆ

ಶಿವರಾಜ.ಎಂ

ಚರಂಡಿಗಳ ನಿರ್ವಹಣೆ ಕೊರತೆ

ಮೂಲಸೌಕರ್ಯವಿಲ್ಲದೆ ಪರದಾಟ

ವಿಜಯವಾಣಿ ಸುದ್ದಿಜಾಲ ದೊಡ್ಡಬೆಳವಂಗಲ
ಮಧುರೆ ಹೋಬಳಿ ಕನಸವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಮದೇವನಹಳ್ಳಿಯಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇಲ್ಲಿನ ಚರಂಡಿಗಳು ನಿರ್ವಹಣೆ ಇಲ್ಲದೆ ಗಬ್ಬುನಾರುತ್ತಿದೆ, ಸೊಳ್ಳೆ, ನೊಣಗಳ ಕಾಟದಿಂದ ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.
ಪಂಚಾಯಿತಿಯಿಂದ ಚರಂಡಿಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಗುತ್ತಿಗೆ ನೀಡಲಾಗಿದೆ, ಆದರೆ ಗುತ್ತಿಗೆ ಪಡೆದವರು ಚರಂಡಿಗಳ ನಿರ್ವಹಣೆಗೆ ನಿರ್ಲಕ್ಷ್ಯ ಮಾಡಿದ್ದಾರೆ. ಪಂಚಾಯಿತಿ ಸಿಬ್ಬಂದಿ ಸಹ ಗುತ್ತಿಗೆದಾರ ಬಗ್ಗೆ ಮೃದುಧೋರಣೆ ಅನುಸರಿಸುವುದರಿಂದ ಚರಂಡಿಗಳು ನಿರ್ವಹಣೆ ಕಾಣದಂತಾಗಿವೆ. ಚರಂಡಿಗಳಲ್ಲಿ ಕಸಕಡ್ಡಿ ಕಟ್ಟಿಕೊಂಡು ನೀರು ಹರಿಯುತ್ತಿಲ್ಲ. ಕೆಲವು ಕಡೆಗಳಲ್ಲಿ ಚರಂಡಿ ತುಂಬಿ ಮಲಿನ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಆದರೂ ಗುತ್ತಿಗೆದಾರರಾಗಲಿ ಪಂಚಾಯಿತಿ ಸಿಬ್ಬಂದಿಯಾಗಲಿ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಸಾಂಕ್ರಾಮಿಕ ರೋಗ ಭೀತಿ: ಕೊಳಚೆ ದುರ್ವಾಸನೆ ಬೀರುತ್ತಿದೆ, ಸೊಳ್ಳೆ ನೊಣಗಳ ಹಾವಳಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಭಾಗದ ಕೆಲ ಜನರಿಗೆ ಶ್ವಾಸಕೋಶ ಸಂಬಂಧಿತ ಕಾಯಿಲೆ ಕಾಣಿಸಿಕೊಂಡಿದೆ, ಡೆಂಘೆ, ಮಲೇರಿಯಾ ದಾಂಗುಡಿ ಇಡುತ್ತಿವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಕುಡಿವ ನೀರಿಗೂ ಪರದಾಟ: ರಾಮದೇವನಹಳ್ಳಿ ಗ್ರಾಮದಲ್ಲಿ ಚರಂಡಿ ಅವ್ಯವಸ್ಥೆ ದೊಡ್ಡ ಸಂಕಷ್ಟವಾಗಿ ಕಾಡುತ್ತಿರುವ ನಡುವೆ ಅನೇಕ ಮೂಲಸೌಕರ್ಯ ಸಮಸ್ಯೆಗಳಿಂದ ಗ್ರಾಮಸ್ಥರು ಪರದಾಡುವಂತಾಗಿದೆ. ಈಗಾಗಲೇ ಈ ಗ್ರಾಮದ ಜನರು ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ 200 ಕ್ಕೂ ಹೆಚ್ಚು ಮನೆಗಳಿದ್ದು 2 ಕುಡಿಯುವ ನೀರಿನ ಘಟಕಗಳಿದ್ದರೂ ಬಳಕೆಗೆ ಬಾರದಂತಿವೆ. ಜನರು ಕುಡಿಯುವ ನೀರಿಗಾಗಿ ಕಿ.ಮೀ.ಗಟ್ಟಲೇ ದೂರ ಹೋಗಿ ಬರುವ ಪರಿಸ್ಥಿತಿ ಇದೆ. ಗಾಡಿಗಳ ವ್ಯವಸ್ಥೆ ಇಲ್ಲದವರು ಕೊಳವೆಬಾವಿಗಳ ನೀರನ್ನೇ ಅವಲಂಬಿಸಿದ್ದಾರೆ. ಒಂದು ಗ್ರಾಮಕ್ಕೆ ಪ್ರಮುಖವಾಗಿ ಬೇಕಾಗಿರುವ ಶುದ್ಧ ಕುಡಿವ ನೀರು ದೊರಕಿಸಿಕೊಡುವಲ್ಲಿ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಅಲವತ್ತುಗೊಂಡಿದ್ದಾರೆ.