ಜಿಲ್ಲೆ

ಜೂ.28ರಿಂದ ಬೆಂಗಳೂರಿನಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ; ಧರ್ಮಜಾಗೃತಿ ಕಾರ್ಯಕ್ರಮ

ಬೆಂಗಳೂರು: ಆಷಾಡ ಮಾಸದ ಅಂಗವಾಗಿ ಪ್ರತಿವರ್ಷದಂತೆ ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಜಾಗೃತಿ ಸಮಾರಂಭವು ಬೆಂಗಳೂರಿನಲ್ಲಿ ಜೂ.28ರಿಂದ ಜು.04ರವರೆಗೆ ನಡೆಯಲಿದೆ.

ಜೂ.28ರಂದು ಜೆ.ಪಿ.ನಗರದ ಪುಟ್ಟೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀಸೋಮೇಶ್ವರ ಭವನದಲ್ಲಿ ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ಹಾಗೂ ಸಂಜೆ ಧರ್ಮೋತ್ತೇಜಕ ಸಮಾರಂಭ ನಡೆಯಲಿದೆ.

ಜೂ.29ರಂದು ಭಾನುವಾರ ಮಾಗಡಿ ರಸ್ತೆಯ ಭಾರತ್‌ನಗರದ ಬಿಇಎಲ್ ಲೇಔಟ್‌ನ ಆರ್.ವಿ.ಭದ್ರಯ್ಯ ಗ್ರಂಧಿಗೆ ಸ್ಟೋರ್ ಮುಂಭಾಗದಲ್ಲಿ ‘ಸಮಸ್ತ ವೀರಶೈವ ಲಿಂಗವಂತ ಮಹಾ ಸಂಘಟನೆ’ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬೆಳಗ್ಗೆ 8 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ, ಸಂಜೆ 4 ಗಂಟೆಗೆ ಜಗದ್ಗುರುಗಳ ಸಾರೋಟು ಉತ್ಸವ ನಂತರ ಸಂಜೆ 6 ಗಂಟೆಗೆ ಧರ್ಮ ಜಾಗೃತಿ ಸಮಾರಂಭ ನಡೆಯಲಿದೆ.

ಜೂ.30 ರಂದು ಹೊಸಕೋಟೆಯ ವೀರಶೈವ ಸಮಾಜದವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಇಷ್ಟಲಿಂಗ ಮಹಾಪೂಜೆ ಮತ್ತು ಧರ್ಮ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಜು.2 ರಿಂದ 4 ರವರೆಗೆ ವಿಜಯನಗರದ ಹೊಸಹಳ್ಳಿ ಮೆಟ್ರೋ ಸ್ಟೇಷನ್ ಮುಂಭಾಗದಲ್ಲಿರುವ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀಮದ್ವೀರಶೈವ ಸದ್ಭೋದನಾ ಸಂಸ್ಥೆಯ ಆಶ್ರಯದಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಜಾಗೃತಿ ಸಮಾರಂಭ ಏರ್ಪಡಿಸಿದ್ದು, ಈ ಎಲ್ಲ ಕಾರ್ಯಕ್ರಮಗಳಲ್ಲಿ ವಿವಿಧ ಮಠಾಧೀಶರು, ರಾಜಕೀಯ ಮುಖಂಡರು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ಆಯಾ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.