ವಿಜಯವಾಣಿ ಸುದ್ದಿಜಾಲ ಗದಗ
ಬಾಳಿನ ಉನ್ನತಿ ಅವನತಿಗಳಿಗೆ ಮನಸ್ಸು ಮೂಲ. ಸುಖ ಬಯಸುವುದು ಮನುಷ್ಯನ ಸಹಜ ಗುಣ. ಅಂತರಂಗ ಮತ್ತು ಬಹಿರಂಗ ಇವೆರಡನ್ನು ಶುದ್ಧಿಗೊಳಿಸುವುದೇ ನಿಜವಾದ ಗುರುವಿನ ಧರ್ಮ ಎಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶನಿವಾರ ಭದ್ರಾವತಿ ತಾಲೂಕಿನ ಬಿಳಕಿ ಹಿರೇಮಠದಲ್ಲಿ ಲಿಂ.ಗುರುಸಿದ್ಧ ಶ್ರೀಗಳವರ ಮತ್ತು ರಾಚೋಟೇಶ್ವರ ಶ್ರೀಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಅರಿವಿನ ಜನ್ಮದಲ್ಲಿ ಹುಟ್ಟಿ ಆದರ್ಶ ಬದುಕನ್ನು ಕಟ್ಟಿಕೊಳ್ಳದಿದ್ದರೆ ಜೀವನ ವ್ಯರ್ಥವಾಗುತ್ತದೆ. ವ್ಯಕ್ತಿ ಜೀವನದಲ್ಲಿ ಸಂಪತ್ತು ಗಳಿಸದಿದ್ದರೂ ಪರವಾಯಿಲ್ಲ. ಆದರೆ ಸದ್ಗುಣಗಳನ್ನು ಬೆಳೆಸಿಕೊಂಡು ಬಾಳುವುದನ್ನು ಕಲಿಯಬೇಕಾಗುತ್ತದೆ. ವೀರಶೈವ ಧರ್ಮದಲ್ಲಿ ಅಂತರಂಗ ಮತ್ತು ಬಹಿರಂಗ ಶುದ್ಧಿಯಿಂದ ಜೀವನ ಉಜ್ವಲಗೊಳ್ಳವುದು. ಜೀವನ ಸಮೃದ್ಧಿಗೆ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶಧರ್ಮ ಸೂತ್ರಗಳ ಪರಿಪಾಲನೆಯ ಅಗತ್ಯವಿದೆ. ಪೂರ್ವಜರ ಆದರ್ಶಗಳನ್ನು ಅನುಸರಿಸಿ ಇಂದಿನ ಪಟ್ಟಾಧ್ಯರಾದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಮಠದ ಅಭಿವೃದ್ಧಿ ಮತ್ತು ಭಕ್ತರಿಗೆ ಸನ್ಮಾರ್ಗ ದರ್ಶನ ಕೊಡುತ್ತಿರುವುದು ಸಂತಸ ತಂದಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ. ರಾವೇಂದ್ರ ಮಾತನಾಡಿ, ಮನುಷ್ಯ ಅಧಿಕಾರ ಅಂತಸ್ತು ಬೆನ್ನು ಹತ್ತಿ ಮನಸ್ಸಿನ ಶಾಂತಿ ಕಳೆದುಕೊಳ್ಳುತ್ತಿದ್ದಾನೆ. ಜೀವನ ಸಂವರ್ಧನೆಗೆ ಕಾರಣವಾಗಿರುವ ಪರಮ ಶಿವಜ್ಞಾನದ ಅರಿವನ್ನು ಅರಿತು ಜೀವನ ನಡೆಸಿದರೆ ಸಾರ್ಥಕಗೊಳ್ಳುವುದು. ಸತ್ಯ ಧರ್ಮದತ್ತ ಕೊಂಡೊಯ್ಯುವ ಬಹು ದೊಡ್ಡ ಕಾರ್ಯವನ್ನು ಮಠಾಧೀಶರು ಮಾಡುತ್ತ ಬಂದಿದ್ದಾರೆ. ಆರೋಗ್ಯರ್ಪೂಣ ಸಮಾಜ ನಿರ್ಮಾಣಕ್ಕೆ ಗುರುವಿನ ಮಾರ್ಗದರ್ಶನ ನಮ್ಮೆಲ್ಲರಿಗೆ ಆಶಾ ಕಿರಣವಾಗಿದೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಬಿಳಕಿ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಇಂದಿನ ಕಲಿಕಾಲದಲ್ಲಿ ಅನ್ಯಾಯ ಅಸತ್ಯ ಹೇಳುವ ಜನರು ಹೆಚ್ಚಾಗುತ್ತಿದ್ದಾರೆ. ಹೀಗಾಗಿ ಸತ್ಯವಂತರು ಸುಮ್ಮನಿರುವ ಕಾಲ ಇದಾಗಿದೆ. ವಿಚಾರ ವಿಮರ್ಶೆಗಳು ಮಾನವ ಜೀವನದ ಉನ್ನತಿಗೆ ಕಾರಣವಾಗಬೇಕಲ್ಲದೇ ವಿನಾಶಕ್ಕಾಗಿ ಆಗಬಾರದು ಎಂದರು.
ಎಡೆಯೂರು ರೇಣುಕ ಶಿವಾಚಾರ್ಯ ಶ್ರೀಗಳು, ಹುಲಿಕೆರೆ ವಿರೂಪಾಲಿಂಗ ಶಿವಾಚಾರ್ಯ ಶ್ರೀಗಳು ಸಮ್ಮುಖ ವಹಿಸಿದ್ದರು.
ಶಾಸಕ ಬಿ. ಕೆ. ಸಂಗಮೇಶ ಅಧ್ಯತೆ ವಹಿಸಿದ್ದರು. ವಿ.ಈಶ್ವರಯ್ಯ, ಎನ್. ಜೆ. ರಾಜಶೇಖರ, ರುದ್ರೇಶ್, ಸಿದ್ಧಲಿಂಗಯ್ಯ, ಬಿ. ಕೆ. ಮೋಹನ್ ಹಲವರು ಇದ್ದರು.