ಮುಂಡರಗಿ: ಎಲ್ಲರಿಗೂ ಶ್ರೀ ರಾಮನ ಬಗ್ಗೆ ತಿಳಿಸಿಕೊಟ್ಟವರು ಶ್ರೀ ಮಹರ್ಷಿ ವಾಲ್ಮೀಕಿಯವರು. ಇಡೀ ಭಾರತವನ್ನು ಜಾಗೃತಗೊಳಿಸುವಂತ ರೀತಿಯಲ್ಲಿ ವಾಲ್ಮೀಕಿ ರಾಮಾಯಣ ಬರೆದಿದ್ದಾರೆ. ಈ ಗ್ರಂಥದಲ್ಲಿ ಬದುಕಿನ ಮೌಲ್ಯ ತಿಳಿಸಿದ್ದಾರೆ. ಅಂಥಹ ಮೇಧಾವಿ ಮಹರ್ಷಿ ವಾಲ್ಮೀಕಿ ಅವರನ್ನು ಎಲ್ಲರೂ ಪೂಜಿಸುವ ಕೆಲಸವಾಗಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪಟ್ಟಣದ ಪುರಸಭೆ ಮೈದಾನದಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಂಘ, ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್ಸಿ, ಎಸ್ಟಿಗೆ ಮೀಸಲಿಟ್ಟ 25 ಸಾವಿರ ಕೋಟಿ ರೂ. ಹಣವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಸರ್ಕಾರ ಎಸ್ಸಿ, ಎಸ್ಟಿಗೆ ಸದುಪಯೋಗವಾಗಬೇಕಿದ್ದ ಹಣವನ್ನು ದುರುಪಯೋಗ ಮಾಡುವುದನ್ನು ನಿಲ್ಲಿಸಬೇಕು. ಆ ಹಣವನ್ನು ಪುನಃ ಸಮುದಾಯದ ಅಭಿವೃದ್ಧಿ ಪರ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಡಾ. ಪ್ರಸನ್ನಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿ, ಹುಟ್ಟು ಮತ್ತು ಸಾವಿನ ನಡುವೆ ಮಾನವನ ಬದುಕು ಸುಂದರವಾಗಬೇಕು. ಬೇರೆ, ಬೇರೆ ಪಕ್ಷಗಳಲ್ಲಿ ಅವಕಾಶವಿದ್ದರೆ ಬೆಳೆಯಿರಿ. ಆದರೆ, ಸಮುದಾಯದ ಹಿತಾಶಕ್ತಿಗೆ ಎಲ್ಲರೂ ಒಗ್ಗಟ್ಟಾಗಬೇಕು. ಮಾನವನ ಉದ್ಧಾರಕ್ಕಾಗಿ, ಧರ್ಮದ ಮಾರ್ಗ ಅನುಸರಿಸುವಲ್ಲಿ ಸನ್ಮಾರ್ಗ ತೋರಿಸುವಲ್ಲಿ ಮಹಾತ್ಮರು ದಾರಿದೀಪ. ಜಯಂತಿ ನೆಪ ಮಾಡಿಕೊಂಡು ಎಲ್ಲರೂ ಜಾಗೃತರಾಗಬೇಕು ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಮಾಜಿ ಉಪಾಧ್ಯಕ್ಷ ಸಣ್ಣವೀರಪ್ಪ ಹಳ್ಳೆಪ್ಪನವರ ಮತ್ತಿತರರು ಮಾತನಾಡಿದರು.
ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಮಣ್ಣ ಕೋಳಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕ ಎ.ವೈ. ನವಲಗುಂದ ಉಪನ್ಯಾಸ ನೀಡಿದರು. ಡಿವೈಎಸ್ಪಿ ಡಾ. ವೆಂಕಟಪ್ಪ ನಾಯ್್ಕ ಉದಯಕುಮಾರ ಯಲಿವಾಳ, ಗರಡಪ್ಪ ಜಂತ್ಲಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ, ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಹೇಮಗಿರೀಶ ಹಾವಿನಾಳ, ಡಾ. ಲಕ್ಷ್ಮಣ ಪೂಜಾರ, ಕವಿತಾ ಉಳ್ಳಾಗಡ್ಡಿ, ನಾಗರಾಜ ಹೊಂಬಳಗಟ್ಟಿ, ಪ್ರಕಾಶ ಹಲವಾಗಲಿ, ರಾಜಾಭಕ್ಷಿ ಬೆಟಗೇರಿ, ಮೈಲಾರಪ್ಪ ಕಲಕೇರಿ, ಕುಮಾರಸ್ವಾಮಿ ಹಿರೇಮಠ, ಮಂಜುನಾಥ ಮುಂಡವಾಡ, ಸುರೇಶ ಮಾಗಡಿ, ಅರುಣಾ ಸೋರಾಗಂವಿ, ತಾಲೂಕು ವಾಲ್ಮೀಕಿ ನಾಯಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕರಾದ ಚಂದ್ರಶೇಖರ ಪೂಜಾರ ಸ್ವಾಗತಿಸಿದರು. ಸುರೇಶ ಕಲ್ಲಕುಟಗರ ನಿರೂಪಿಸಿದರು. ಸುರೇಶ ಬಣಕಾರ ವಂದಿಸಿದರು.'
ಭಾವಚಿತ್ರ ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕೋಟೆಭಾಗದ ಆಂಜನೇಯಸ್ವಾಮಿ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ವೈ.ಎನ್. ಗೌಡರ, ಕರಬಸಪ್ಪ ಹಂಚಿನಾಳ, ಇತರರಿದ್ದರು.