ಜಿಲ್ಲೆ

ರಾಮಾಯಣ ಭಾರತೀಯರ ಜೀವನಚರಿತ್ರೆ ಸಂಸ್ಕೃತಿ ಪ್ರತಿಬಿಂಬ : ಡಾ.ಎಚ್.ಸಿ. ಮಹದೇವಪ್ಪ

ಮೈಸೂರು: ರಾಮಾಯಣ, ಮಹಾಭಾರತ ಮಹಾಕಾವ್ಯಗಳು ಎಲ್ಲ ಕಾಲಘಟ್ಟ, ಪೀಳಿಗೆಗೆ ಅನ್ವಯ. ರಾಮಾಯಣವು ಭಾರತೀಯರ ಜೀವನಚರಿತ್ರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಬಣ್ಣಿಸಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಮೈಸೂರು ನಗರ ಮತ್ತು ತಾಲೂಕು ನಾಯಕ ಜನಾಂಗದ ಸಂಘಗಳ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಿಸಲು ಶಂಕು ಸ್ಥಾಪನೆ ನೆರವೇರಿಸಿರುವುದು ಸಂತಸ ತಂದಿದೆ. ವಾಲ್ಮಿಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಮತ್ತು ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಪ್ರಪಂಚದಲ್ಲಿರುವ ಎಲ್ಲ ದೇಶಗಳಲ್ಲೂ ಮಹಾಕಾವ್ಯಗಳು ಸೃಷ್ಟಿಯಾಗಿಲ್ಲ. ಗ್ರೀಕ್, ರೋಮ್ ಬಿಟ್ಟರೆ ನಮ್ಮ ದೇಶದಲ್ಲಿ ಮಾತ್ರ ಮಹಾಕಾವ್ಯಗಳು ಕಾಣಿಸಿಕೊಳ್ಳಲು ಸಾಧ್ಯ. ರಾಮಾಯಣ, ಮಹಾಭಾರತ ಕಾವ್ಯಗಳು ಕಟ್ಟಿಕೊಡುವ ದೃಷ್ಟಿಕೋನಗಳೇ ಬೇರೆ. ಈ ಮಹಾಕಾವ್ಯಗಳು ಸಾರ್ವಕಾಲಿಕ ಮೌಲ್ಯಗಳನ್ನು ಪ್ರತಿನಿಧಿಸುವ ಕೃತಿಗಳಾಗಿವೆ. ರಾಮಾಯಣದ ಪಾತ್ರಗಳು, ದೃಶ್ಯಗಳು ಇವತ್ತಿಗೂ ನಮ್ಮನ್ನು ಕಾಡುತ್ತವೆ ಎಂದರು.

ವಾಲ್ಮೀಕಿ ಸಮುದಾಯದಲ್ಲಿ ಅನೇಕರು ತಮ್ಮ ಭೂಮಿಗಳನ್ನು ಮಾರಿಕೊಳ್ಳುತ್ತಿದಾರೆ. ವ್ಯವಸಾಯ ಮತ್ತು ವ್ಯವಸಾಯೇತರ ಚಟುವಟಿಕೆಗಳು ಕ್ಷಿಣಿಸುತ್ತಿದೆ. ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, 9 ಸಾವಿರ ಕೋಟಿ ರೂ.ಗಳನ್ನು ವಾಲ್ಮೀಕಿ ಸಮುದಾಯದ ಅಭಿವೃದ್ಧಿಗೆ ನೀಡಲಾಗಿದೆ. ಎಸ್‌ಸಿ, ಎಸ್‌ಟಿ, ಅಲ್ಪ ಸಂಖ್ಯಾತರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿ ಶೋಷಿತ ಸಮಾಜವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ನಮ್ಮ ಸಂವಿಧಾನವನ್ನು ಬಲಪಡಿಸುವಂತಹ ಕಾರ್ಯ ನಮ್ಮ ಸರ್ಕಾರದಲ್ಲಿ ಆಗುತ್ತಿದೆ ಎಂದು ಹೇಳಿದರು.

ಮಹರ್ಷಿ ವಾಲ್ಮೀಕಿ ರಾಮಾಯಣ ಮಹಾಕಾವ್ಯದಲ್ಲಿ ಮನುಷ್ಯನ ಬದುಕಿನ ಎಲ್ಲ ಪರಿಪಾಲನೆಯನ್ನು ವಿಸ್ತಾರವಾಗಿ ತಿಳಿಸಿಕೊ ಟ್ಟಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿಯೂ ರಾಮಾಯಣ ಕೃತಿ ಇರಬೇಕು. ರಾಮಾಯಣದ ಒಟ್ಟಾರೆ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದು ಕೊಳ್ಳಬೇಕು. ರಾಮಾಯಣ ಕೃತಿ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ರಾಮಾಯಣದಂತಹ ಮಹಾಕಾವ್ಯ ಮತ್ತು ವಾಲ್ಮಿಕಿಯಂತಹ ಮಹಾಕವಿ ನಮಗೆ ದೊರೆತ್ತದ್ದು ಭಾಗ್ಯ. ಹಾಗಾಗಿ, ಮನುಷ್ಯ ಅಳಿದರೂ ಈ ಮಹಾಕಾವ್ಯಗಳು ಅಳಿಯುವುದಿಲ್ಲ ಎಂದರು.

ಶಾಸಕ ಜಿ. ಟಿ ದೇವೇಗೌಡ ಮಾತನಾಡಿ, ಬೇಡ ಕುಲಕ್ಕೆ ಸೇರಿದ ಮಹರ್ಷಿ ವಾಲ್ಮೀಕಿ ರಾಮಾಯಣ ಎಂಬ ಉತ್ಕೃಷ್ಟ ಮಹಾಕಾವ್ಯವನ್ನೇ ಬರೆದರು. ರಾಮನಾಮ ಉಚ್ಛಾರಣೆಯೇ ಬಾರದ ವಾಲ್ಮೀಕಿಯವರು ರಾಮಾಯಣವನ್ನೇ ರಚಿಸಿದರು. ಸೂರ್ಯಚಂದ್ರರಿರುವವರೆಗೂ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಮತ್ತು ಇದನ್ನು ರಚಿಸಿರುವ ಮಹರ್ಷಿ ವಾಲ್ಮಿಕಿಯು ಅಮರಕವಿಯಾಗಿರುತ್ತಾರೆ ಎಂದರು.

ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಈ ಬಾರಿ ಮೈಸೂರಿನಲ್ಲಿ ವಾಲ್ಮೀಕಿ ಪ್ರತಿಮೆಗೆ ಶಂಕು ಸ್ಥಾಪನೆ ಮಾಡಿರುವುದು ನಮ್ಮ ಸೌಭಾಗ್ಯ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಾಲ್ಮೀಕಿಯವರ ತತ್ತ್ವಾದರ್ಶನಗಳನ್ನು ಅನುಸರಿಸುತ್ತಿದ್ದೇವೆ. ವಾಲ್ಮೀಕಿ ನೀಡಿರುವ ರಾಮಾಯಣ ಮಹಾಕಾವ್ಯದ ಸಾರಾಂಶವನ್ನು ಪ್ರತಿಯೊಬ್ಬರೂ ತಿಳಿದುಕೊಂಡು ಅವರ ಸನ್ಮಾರ್ಗಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಮಾತನಾಡಿ, ವಾಲ್ಮಿಕಿ ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ, ಕಾದಂಬರಿ ಮತ್ತು ಕತೆಗಳನ್ನು ಅನೇಕರು ರಚಿಸಿದ್ದಾರೆ. ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ ಎಂದರು.

ರಾಮಾಯಣ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೆಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವಿಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಇಂತಹ ಅನನ್ಯವಾದ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮಿಕಿಯನ್ನು ‘ಕವಿಗಳ ಕವಿ’ ಎಂದು ಮಹಾಕವಿ ಕಾಳಿದಾಸರು ಗೌರವಿಸಿದ್ದಾರೆ ಎಂದು ಹೇಳಿದರು.

ರಾಮಾಯಣ ಕೇವಲ ಕಾವ್ಯವಲ್ಲ. ಇದು ದೇಶದ ಮೊಟ್ಟ ಮೊದಲ ಸಂವಿಧಾನ. ಜಗತ್ತಿಗೆ ಮಹಾಕಾವ್ಯವನ್ನು ಕೊಟ್ಟ ಕೀರ್ತಿ ಮಹರ್ಷಿ ವಾಲ್ಮೀಕಿಗೆ ಸಲ್ಲುತ್ತದೆ. ಇಂದು ಅಯೋಧ್ಯೆಯಲ್ಲಿ ನಿರ್ಮಿತವಾಗಿರುವ ಶ್ರೀ ರಾಮನ ಮೂರ್ತಿಯು ವಾಲ್ಮೀಕಿಯವರ ಇರುವಿಕೆಯನ್ನು ತೋರಿಸುತ್ತಿದೆ. ರಾಮಾಯಣ ಜಗತ್ ಕಾವ್ಯ. ವಾಲ್ಮೀಕಿಯವರನ್ನು ಪೂಜಿಸುವುದಲ್ಲದೆ ಅವರ ತತ್ವಗಳನ್ನು ಪಾಲಿಸಬೇಕು ಎಂದರು.

ಈ ಸಂದರ್ಭ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಾಲ್ಮೀಕಿ ಸಮುದಾಯದ ವಿದ್ಯಾರ್ಥಿ ಲಾವಣ್ಯಗೆ ಸರ್ಕಾರದಿಂದ 1 ಲಕ್ಷ ರೂ. ಪ್ರೋತ್ಸಾಹ ಧನದ ಚೆಕ್ ನೀಡಲಾಯಿತು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಧಿಕಾರಿ ಎಂ.ಕೆ. ಮಲ್ಲೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಿ.ರಂಗೇಗೌಡ ಹಾಗೂ ಇತರರು ಇದ್ದರು.