ಬೀರೂರಿನ ಮಹಾನವಮಿ ಬಯಲಿನಲ್ಲಿ ಶ್ರೀ ಮೈಲಾರಲಿಂಗಸ್ವಾಮಿಯ ಕಾರ್ಣಿಕ ಮಹೋತ್ಸವದಲ್ಲಿ ಅರ್ಚಕ ದಶರಥ ಪೂಜಾರ ದೊಡ್ಡಬಿಲ್ಲಪ್ಪನನ್ನು ಏರಿ ಕಾರ್ಣಿಕ ನುಡಿಗಳನ್ನು ನುಡಿದರು. 
ಜಿಲ್ಲೆ

ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ…

ಎಸ್.ಎನ್.ರವೀಂದ್ರ

ಬೀರೂರು: ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ, ನ್ಯಾಯದ ತಕ್ಕಡಿ ಜರುಗಿತು, ಜ್ಞಾನದ ಹಣತೆ ಹಚ್ಚಿದರು, ಜೀವರಾಶಿ ಸಂಪಾಯಿತಲೇ ಪರಾಕ್, ಸರ್ವರೂ ಎಚ್ಚರದಿಂದರಬೇಕು.

ಇವು ಪಟ್ಟಣದ ಸರಸ್ವತಿಪುರಂ ಬಡಾವಣೆ ಇತಿಹಾಸ ಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕದ ನುಡಿಮುತ್ತುಗಳು. ಭಾನುವಾರ ಮುಂಜಾನೆ 4.40ಕ್ಕೆ ಮಹಾನವಮಿ ಬಯಲಿನಲ್ಲಿ ದಶರಥ ಪೂಜಾರ್ ಅವರ ಕಾರ್ಣಿಕದ ನುಡಿಗಳು.
ವಿಜಯದಶಮಿ ಸಂಭ್ರಮದ ನಡುವೆ ಸಂಪ್ರದಾಯದಂತೆ ಸರಸ್ವತಿಪುರಂ ಬಡಾವಣೆಯಲ್ಲಿ ಪ್ರತಿವರ್ಷವೂ ಕಾರ್ಣಿಕ ಮಹೋತ್ಸವ ನಡೆಯುತ್ತದೆ. ಕಾರ್ಣಿಕದ ಆರಾಧ್ಯ ದೈವ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ಉತ್ಸವಮೂರ್ತಿಯನ್ನು ರಾತ್ರಿ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಶನಿವಾರ ರಾತ್ರಿ 10 ಗಂಟೆಯ ಸುಮಾರಿಗೆ ಹೊರಟು ಮೂಲ ಸ್ಥಾನವಾದ ಪಟ್ಟಣ ಸಮೀಪದ ಗಾಳಿಹಳ್ಳಿ ಬಳಿಯ ಪಾದದಕೆರೆಗೆ ತಲುಪಿತು. ಅಲ್ಲಿ ಸ್ವಾಮಿಯ ಪಾದಪೂಜೆ ನೆರವೇರಿಸಿದ ಭಕ್ತರು ಗಣಂಗಳ ಸೇವೆ, 101 ಎಡೆ ಹಾಗೂ ದೋಣಿ ಸೇವೆ ನೆರವೇರಿಸಿ ಸ್ವಾಮಿಯ ದಶರಥ ಪೂಜಾರಿಗೆ ಮೈದುಂಬಿಸಲಾಯಿತು. ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಪಿ.ವಿಶ್ವೇಶ್ವರಾಚಾರ್ ಅವರ ಮನೆ ಬಳಿಗೆ ಆಗಮಿಸಿ ಅವರಿಂದ ದೋಣಿ ಸೇವೆ ಸ್ವೀಕರಿಸಲಾಯಿತು. ನಂತರ ವಾದ್ಯಗೋಷ್ಠಿಗಳು, ಗೊರವಯ್ಯನವರ ಢಮರುಗದ ಸದ್ದಿನೊಂದಿಗೆ ಮೆರವಣಿಗೆಯಲ್ಲಿ ಮಹಾನವಮಿ ಬಯಲಿಗೆ ಆಗಮಿಸಲಾಯಿತು.
ಈ ಸಂದರ್ಭದಲ್ಲಿ ಆಗಮಿಸಿದ್ದ ಅಧಿದೈವ ಶ್ರೀ ವೀರಭದ್ರಸ್ವಾಮಿ, ಶ್ರೀ ಹುಲುಬೆಂಕಿ ಬೀರಲಿಂಗೇಶ್ವರಸ್ವಾಮಿ ಹಾಗೂ ಹಿರಿಯಂಗಳ ಶ್ರೀ ವೀರಭದ್ರಸ್ವಾಮಿ ಉತ್ಸವಮೂರ್ತಿಗಳು ಮಹಾನವಮಿ ಬಯಲಿನಲ್ಲಿ ಸ್ಥಾಪಿತಗೊಂಡಿದ್ದವು. ಮೈಲಾರಲಿಂಗಸ್ವಾಮಿಯನ್ನು ಕಾರ್ಣಿಕದ ನುಡಿಮುತ್ತುಗಳನ್ನು ನುಡಿಯಲು ಅನುವು ಮಾಡಿಕೊಡುವಂತೆ ಗೊರವಯ್ಯನವರು ಮತ್ತು ಗೌಡರು ಸ್ವಾಮಿಯ ಅಪ್ಪಣೆ ಕೋರಿದಾಗ ನೆರೆದಿದ್ದ ಭಕ್ತರನ್ನೆಲ್ಲ ಕಂಡು ಸಂತಸದಿಂದ ಒಪ್ಪಿ ಕಾರ್ಣಿಕ ನುಡಿಯಲು ತೆರಳುವ ದೃಶ್ಯ ವಿಶೇಷವಾಗಿತ್ತು. ಬಾಳೆ ಅಂಬನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಕಾರ್ಣಿಕ ನುಡಿಯುವ ಸ್ಥಳವನ್ನು ಸ್ವಾಮಿ ಗುರುತಿಸಿ ಆ ಜಾಗದಲ್ಲಿ ದೊಡ್ಡಬಿಲ್ಲಪ್ಪನನ್ನು ನಿಲ್ಲಿಸುವಂತೆ ಸೂಚಿಸಿತು.
ಶ್ರೀ ಮೈಲಾರಲಿಂಗಸ್ವಾಮಿಯ ಪ್ರಧಾನ ಅರ್ಚಕ ದಶರಥ ಪೂಜಾರರು ಉತ್ಸವದಲ್ಲಿ ಬಂದು ಬೆಣ್ಣೆ ಮೆತ್ತಿದ್ದ ದೊಡ್ಡಬಿಲ್ಲಪ್ಪನನ್ನು ಬೆಳಗಿನ ಜಾವ 4.42ಕ್ಕೆ ಏರಿ ಕೈಯಲ್ಲಿದ್ದ ಗಂಟೆಯ ಸದ್ದನ್ನು ಬಾರಿಸಿದ ಕೂಡಲೇ ಸ್ಥಳದಲ್ಲಿ ಗಾಢ ಮೌನ ಆವರಿಸಿತು. ತ್ರಿಶೂಲದಲ್ಲಿ ಸ್ವಾಮಿಯು ಮುಂದಿನ ಭವಿಷ್ಯದ ನುಡಿಗಳನ್ನು ಧರ್ಮ ಮತ್ತು ಅಧರ್ಮಗಳನ್ನು ತೂಗಿಸಿ ನಂತರ ಕಾರ್ಣಿಕದ ನುಡಿಗಳನ್ನು ನುಡಿದು ಜಾರಿದರು. ಸ್ಥಳದಲ್ಲಿ ಗೊರವರು ಗಂಟೆ ಮತ್ತು ಢಮರುಗದ ಸದ್ದಿನಲ್ಲಿ ಏಳುಕೋಟಿ ಏಳುಕೋಟಿ ಗ್ಯೋ ಚಾಂಗಮಲೋ ಎಂಬ ಘೋಷಣೆಗಳೊಡನೆ ಕಾರ್ಣಿಕ ನುಡಿಯುವ ದಶರಥ ಪೂಜಾರರನ್ನು ಕರೆದುಕೊಂಡು ಹೋದರು. ಕಾರ್ಣಿಕ ಮುಕ್ತಾಯದ ಧ್ಯೋತಕವಾಗಿ ಸಿಡಿಮದ್ದಿನ ಪ್ರದರ್ಶನ ನಡೆಯಿತು.
ನಂತರ ಶ್ರೀ ವೀರಭದ್ರಸ್ವಾಮಿ ಗುರಿಕಾರ ಗುರುಮೂರ್ತಿ ಬಾಣಗಳಿಂದ ಬಾಳೆ ಕಂದನ್ನು ಕತ್ತರಿಸಿದರು. ನಂತರ ಉತ್ಸವದಲ್ಲಿ ಪಾಲ್ಗೊಂಡಿದ್ದ ದೇವರುಗಳು ಮೆರವಣಿಗೆಯಲ್ಲಿ ಸ್ವಸ್ಥಾನಕ್ಕೆ ತೆರಳಿದವು.
ಶಾಸಕ ಕೆ.ಎಸ್.ಆನಂದ್ ಮತ್ತು ಸಂಸದ ಶ್ರೇಯಸ್ ಪಟೇಲ್ ಅವರು ಮೈಲಾರಲಿಂಗಸ್ವಾಮಿ ದರ್ಶನ ಪಡೆದರು. ಕಾರ್ಣಿಕ ಮಹೋತ್ಸವಕ್ಕೆ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು, ಬೇರೆ ಊರುಗಳಿಂದ ಸಂಬಂಧಿಕರೂ ಆಗಮಿಸಿದ್ದರು.
ಇದೊಂದು ರೋಮಂಚನಕಾರಿ ಅನುಭವ. ನಾಡಿನ ಆಗುಹೋಗುಗಳ ಬೆಳಕು ಚೆಲ್ಲುವ ಲಕ್ಷಾಂತರ ಜನರ ನಂಬಿಕೆಯ ಕಾರ್ಯಕ್ರಮ. ಇಲ್ಲಿ ನುಡಿಯಲಾದ ಕಾರ್ಣಿಕ ನುಡಿಮುತ್ತುಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನ್ಯಾಯ ದೊರೆತು ಅವರ ಆಡಳಿತದಲ್ಲಿ ನಾಡಿಗೆ ಸಮೃದ್ಧಿ ದೊರೆಯುವ ಸಂಕೇತ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.