ಗುಡಿಬಂಡೆ: ಸಂಚಾರಕ್ಕೆ ಹರಸಾಹಸ ಪಡಬೇಕಾಗಿದ್ದ ಪಟ್ಟಣದ ರಾಮಪಟ್ಟಣ ಮುಖ್ಯರಸ್ತೆ ವಿಸ್ತರಣೆಗೆ ಕಡೆಗೂ ಕಾಲಕೂಡಿಬಂದಿದೆ. ಕೆಲವೇ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದ್ದು, ಈ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ದಿನಾಂಕ ನಿಗದಿ ಕುರಿತು ಚರ್ಚೆ ನಡೆಸಿದ್ದಾರೆ.
ರಾಮಪಟ್ಟಣ ರಸ್ತೆಯಲ್ಲಿ ವಾಹನ ದಟ್ಟಣೆಯಿಂದಾಗಿ ಕಿರಿಕಿರಿ ಉಂಟಾಗಿದ್ದು, ಸಾರ್ವಜನಿಕರ ಒತ್ತಾಯದ ಮೇರೆಗೆ ಹಾಗೂ ಪಟ್ಟಣ ಅಭಿವೃದ್ದಿ ಉದ್ದೇಶದಿಂದ ಅಧಿಕಾರಿಗಳು ವಿಸ್ತರಣೆಗೆ ಮುಂದಾಗಿದ್ದಾರೆ.
ಜನದಟ್ಟಣೆಗೆ ಕಾರಣವೇನು?
ಈ ರಸ್ತೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು, ಶ್ರೀ ಸಾಯಿ ವಿದ್ಯಾನಿಕೇತನ ಶಾಲೆ, ಅರವಿಂದ ಶಾಲೆ ಸೇರಿ ಇಂಡಿಯನ್ ಗ್ಯಾಸ್ ಕಚೇರಿ ಮತ್ತು ದಾಸ್ತಾನು ಕೇಂದ್ರ ಸೇರಿ 20ಕ್ಕೂ ಹೆಚ್ಚು ಹಳ್ಳಿಗಳ ಜನರು ಇದೇ ರಸ್ತೆ ಬಳಸುತ್ತಾರೆ. ಹಾಗಾಗಿ ಈ ರಸ್ತೆಯಲ್ಲಿ ಜನದಟ್ಟಣೆ ಜತೆಗೆ ವಾಹನ ದಟ್ಟನೆಯೂ ಹೆಚ್ಚಾಗಿದ್ದು, ರಸ್ತೆಯನ್ನು ವಿಸ್ತರಣೆ ಮಾಡಬೇಕೆಂದು ಹಲವು ವರ್ಷಗಳಿಂದ ಕೂಗು ಕೇಳಿಬರುತ್ತಿತ್ತು.
ಮನೆಗಳೆಷ್ಟು, ಅಂಗಡಿಗಳೆಷ್ಟು?
ರಾಮಪಟ್ಟಣ ರಸ್ತೆಯಲ್ಲಿ ಈಗಾಗಲೇ ಸರ್ವೇ ಮಾಡಿದ್ದು, ಎರಡು ಕಡೆ ಸೇರಿ 66 ಮನೆ ಮತ್ತು ಅಂಗಡಿಗಳಿವೆ. ಶೇ.80 ಮನೆ ಮತ್ತು ಅಂಗಡಿಗಳು ರಸ್ತೆ ವಿಸ್ತರಣೆಗೆ ಸೇರುತ್ತವೆ. ಈಗಾಗಲೇ ಒಮ್ಮೆ ಸರ್ವೇ ಕಾರ್ಯ ಮುಗಿದಿದ್ದು, ಲೋಕೋಪಯೋಗಿ ಇಲಾಖೆಯೊಂದಿಗೆ ಮತ್ತೊಮ್ಮೆ ಸರ್ವೇ ನಡೆಸಿ ವಿಸ್ತರಣೆ ಆರಂಭಿಸಲಾಗುತ್ತದೆ ಎಂಬ ಮಾಹಿತಿ ಅಧಿಕಾರಿಗಳಿಂದ ಲಭ್ಯವಾಗಿದೆ.
ಪರ-ವಿರೋಧ
ರಸ್ತೆ ವಿಸ್ತರಣೆ ಕೆಲವರಿಗೆ ಖುಷಿ ತಂದರೆ, ಮನೆಗಳ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪಟ್ಟಣದ ಮುಖ್ಯರಸ್ತೆ ವಿಸ್ತರಣೆ ವೇಳೆ ಮನೆಗಳನ್ನು ಕಳೆದುಕೊಂಡವರಿಗೆ ಇದುವರೆಗೂ ನಿವೇಶನ ನೀಡಿಲ್ಲ, ಇನ್ನು ನಮಗೆ ಯಾವಾಗ ನೀಡುತ್ತಾರೇ? ನಮ್ಮ ಮನೆಗಳನ್ನು ಧ್ವಂಸ ಮಾಡಿದರೆ ಎಲ್ಲಿಗೆ ಹೋಗಬೇಕು ಎನ್ನುವುದು ನಿವಾಸಿಗಳ ಅಳಲಾಗಿದೆ.
"ಈಗಾಗಲೇ ಸರ್ವೇ ನಡೆದಿದೆ. ರಾಮಪಟ್ಟಣ ರಸ್ತೆಯ ಒಂದು ಬದಿ 23 ಅಂಗಡಿಗಳು ಮತ್ತೊಂದು ಬದಿ 43 ಅಂಗಡಿಗಳು ಸೇರಿ ಒಟ್ಟು 66 ಅಂಗಡಿ ಮತ್ತು ಮನೆಗಳು ತೆರವಾಗುತ್ತವೆ ಎಂಬ ಮಾಹಿತಿಯಿದೆ. ಈ ಬಗ್ಗೆ ಶಾಸಕರೊಂದಿಗೆ ಮಾತನಾಡಿದ್ದು, 40 ಅಡಿ ರಸ್ತೆ ಚಿಸ್ತರಣೆ ಮಾಡುವಂತೆ ತಿಳಿಸಿದ್ದಾರೆ. ಮತ್ತೊಮ್ಮೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸರ್ವೇ ಮಾಡಿಕೊಡುವಂತೆ ಪತ್ರ ವ್ಯವಹಾರ ಮಾಡಿದ್ದು, ಅವರು ಸರ್ವೇ ಮುಗಿಸಿದ ಮುಗಿದ ಕೂಡಲೇ ಮನೆ ಮಾಲೀಕರಿಗೆ ನೋಟಿಸ್ ನೀಡಿ ಬಳಿಕ ವಿಸ್ತರಣೆ ಕಾರ್ಯ ಆರಂಭಿಸಲಾಗುವುದು." - ಸಬಾ ಶಿರೀನ್, ಮುಖ್ಯಾಧಿಕಾರಿ, ಪಪಂ, ಗುಡಿಬಂಡೆ "ರಾಮಪಟ್ಟಣ ರಸ್ತೆ ವಿಸ್ತರಣೆ ಮಾಡುವಂತೆ ಈಗಾಗಲೇ ಸಾಮಾನ್ಯಸಭೆಯಲ್ಲಿ ಎಲ್ಲ ಸದಸ್ಯರು ಮನವಿ ಮಾಡಿದ್ದು, ಅದರಂತೆ ಗೊತ್ತುವಳಿ ಮಂಡಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಕೊಡುವಂತೆ ತಿಳಿಸಲಾಗಿದೆ. ಸಾರ್ವಜನಿಕರಿಂದಲೂ ರಸ್ತೆ ಕಿರಿಕಿರಿ ಬಗ್ಗೆ ದೂರುಗಳು ಬಂದಿದೆ. ರಸ್ತೆ ವಿಸ್ತರಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾಮಗಾರಿ ಆರಂಭಸಿಲಾಗುವುದು." - ಎ.ವಿಕಾಸ್, ಅಧ್ಯಕ್ಷ, ಪಪಂ, ಗುಡಿಬಂಡೆ