ಮೇಲುಕೋಟೆ: ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಸಾಮಾಜಿಕ ಸಾಮರಸ್ಯದ ಹರಿಕಾರ ರಾಮಾನುಜಾಚಾರ್ಯರ 1007ನೇ ಜಯಂತ್ಯುತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು. ಆಚಾರ್ಯರಿಗೆ ನಡೆದ ಮಂಟಪವಾಹನೋತ್ಸವ ಹಾಗೂ ದ್ವಾದಶಾರಾಧನೆಯ ಮಹಾಭಿಷೇಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಆಚಾರ್ಯ ರಾಮಾನುಜರು 11ನೇ ಶತಮಾನದಲ್ಲಿ 12ವರ್ಷಗಳ ಕಾಲ ಮೇಲುಕೋಟೆಯಲ್ಲಿ ನೆಲಸಿ ಕ್ಷೇತ್ರವನ್ನು ಕರ್ಮಭೂಮಿಯನ್ನಾಗಿ ಮಾಡಿಕೊಂಡು ದೊರೆ ಬಿಟ್ಟಿದೇವನಿಗೆ ವೈಷ್ಣವದೀಕ್ಷೆ ನೀಡಿ ಕರ್ನಾಟಕದಲ್ಲಿ ಪಂಚನಾರಾಯಣಸ್ವಾಮಿ ದೇವಾಲಯಗಳ ನಿರ್ಮಾಣದ ಜತೆಗೆ ಹಲವುಕೊಡುಗೆ ನೀಡಿದ್ದರು.
ಶ್ರೀರಂಗಂ, ಕಂಚಿ, ತಿರುಮಲೆ ದಿವ್ಯಕ್ಷೇತ್ರಗಳಂತೆ ಮೇಲುಕೋಟೆಗೆ ವಿಶೇಷಸ್ಥಾನವನ್ನು ತಂದುಕೊಟ್ಟಿದ್ದರು. ಹೀಗಾಗಿ ಯದುಗಿರಿಯಲ್ಲಿ ರಾಮಾನುಜರ ತಿರುನಕ್ಷತ್ರ ಮಹೋತ್ಸವ ಕಾರ್ಯಕ್ರಮಗಳನ್ನು ಹತ್ತು ದಿನಗಳಕಾಲ ವೈಭವದಿಂದ ಆಚರಿಸುತ್ತಾ ಬಂದಿದ್ದು, ಪೇಶುಮ್ ರಾಮಾನುಜರಿಗೆ ಹಲವು ವೈವಿಧ್ಯಮಯ ಅಲಂಕಾರಗಳು, ಅಭಿಷೇಕ-ಮಹಾಭಿಷೇಕಗಳು, ಪುಷ್ಪ ಕೈಂರ್ಯಸೇವೆಗಳು, ವಾಹನೋತ್ಸವ ಮಹಾರಥೋತ್ಸವ ನಡೆದವು.
ಆಚಾರ್ಯರ ಜಯಂತಿಯ ಅಂಗವಾಗಿ ದೇವಾಲಯದ ಆವರಣವನ್ನು ತಳಿರುತೋರಣ ಚಪ್ಪರಗಳಿಂದ ಸಿಂಗಾರಮಾಡಲಾಗಿತ್ತು. ಆಚಾರ್ಯರ ಸನ್ನಿಧಿಯ ಮೇಲ್ಭಾಗ ವಿವಿಧ ಹಣ್ಣು ಪುಷ್ಪ ಹಾಗೂ ಲಾವಂಛದ ಅಲಂಕಾರ ಮಾಡಲಾಗಿತ್ತು. ತಮಿಳುನಾಡು ಆಂದ್ರಪ್ರದೇಶ ಸೇರಿದಂತೆ ನಾಡಿದ ವಿವಿಧ ಭಾಗಗಳಿಂದಲೂ ಭಕ್ತರು ಆಚಾರ್ಯರ ತಿರುನಕ್ಷತ್ರಮಹೋತ್ಸವದಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ವೈಭವವನ್ನು ಕಣ್ತುಂಬಿಕೊಂಡರು. ಶನಿವಾರ ಮತ್ತು ಭಾನುವಾರ 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ರಾಮಾನುಜಾಚಾರ್ಯರು ಹಾಗೂ ಚೆಲುವನಾರಾಯಣಸ್ವಾಮಿ ದರ್ಶನ ಪಡೆದಿದ್ದಾರೆ.
ತಿರುನಕ್ಷತ್ರ ಮಹೋತ್ಸವದಲ್ಲಿ ರಾಮಾನುಜರಿಗೆ ತಿರುಮಲ-ತಿರುಪತಿ ದೇವಸ್ಥಾನ ಶ್ರೀಪೆರಂಬೂದೂರು, ಸ್ವಾಮಿರಾಮಾನುಜರ ಸನ್ನಿಧಿ ಶ್ರೀರಂಗಂರಂಗನಾಥನ ಪ್ರಸಾದ ಸೇರಿದಂತೆ ಹಲವು ದಿವ್ಯಕ್ಷೇತ್ರಗಳಿಂದ ಮಾಲೆಮರ್ಯಾದೆ ಸಹ ಸಮರ್ಪಣೆಯಾಯಿತು.
ಹತ್ತು ದಿನಗಳಕಾಲ ನಡೆದ ತಿರುನಕ್ಷತ್ರ ಮಹೋತ್ಸವದ ಧಾರ್ಮಿಕ ವಿಧಿವಿದಾನಗಳನ್ನು ಅರ್ಚಕ ವಿದ್ವಾನ್ ಬಿ.ವಿ. ಆನಂದಾಳ್ವಾರ್, ಆಗಪ್ರವೀಣ ವಿದ್ವಾನ್ ಭಾ.ವಂ.ರಾಮಪ್ರಿಯ ನೆರವೇರಿಸಿದರು. ಕೈಂಕರ್ಯಪರರು, ಸ್ಥಾನಿಕರು ನೇಮೀಸೇವೆಗಳನ್ನು ಅನೂಚಾನ ಸಂಪ್ರದಾಯದಂತೆ ನೆರವೇರಿಸಿದರು.
ಪಾರುಪತ್ತೇಗಾರ ಸ್ಥಾನೀಕಂ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಪರಿಚಾರಕ ಎಂ.ಎನ್. ಪಾರ್ಥಸಾರಥಿ ಉತ್ಸವಗಳು ಸಕಾಲಕ್ಕೆ ನಡೆಯಲು ಕಾಳಜಿವಹಿಸಿ ಶ್ರಮಿಸಿದ್ದರು.
ಧಾರ್ಮಿಕ ದತ್ತಿ ಇಲಾಖೆಯ ಹಿರಿಯ ಅಧಿಕಾರಿ ಯತಿರಾಜಸಂಪತ್ಕುಮಾರನ್, ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ರಾಮಾನುಜ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ತಿರುನಕ್ಷತ್ರ ದಿನವಾದ ಭಾನುವಾರ ಬೆಳಗ್ಗೆ 8ಗಂಟೆಗೆರಾಮಾನುಜಾಚಾರ್ಯರಿಗೆ ಪುಷ್ಪಮಂಟಪವಾಹನೋತ್ಸವ ಈಯಲ್ ಶಾತ್ತುಮೊರೆ ನಡೆಯಿತು. ಇಳೆಯಾಳ್ವಾರ್ ಕಲ್ಯಾಣಿಯಿಂದ ಮೆರವಣಿಗೆಯಲ್ಲಿ ಪವಿತ್ರ ತೀರ್ಥತರಲಾಯಿತು.
ದ್ವಾದಶಾರಾಧನೆಯೊಂದಿಗೆ ಮಹಾಭಿಷೇಕ, ಚೆಲುವನಾರಾಯಣಸ್ವಾಮಿ ಪಾದುಕಾ ಮರ್ಯಾದೆ, ಮಹಾಮಂಗಳಾರತಿ ಸಲ್ಲಿಸಲಾಯಿತು.