ಜಿಲ್ಲೆ

ಕಮಲ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆ ರಾಮಣ್ಣ ಲಮಾಣಿ

ರವಿ ಎಸ್. ಬಳೂಟಗಿ

ಲಕ್ಷ್ಮೇಶ್ವರ: ಶಿರಹಟ್ಟಿ ತಮಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ರಾಮಣ್ಣ ಲಮಾಣಿ ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ.
ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಜತೆಗೆ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗಿವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿರುವ ರಾಮಣ್ಣ ಲಮಾಣಿ, ರಾಜಕೀಯ ಮಾರ್ಗದರ್ಶಕರಾದ ಜಗದೀಶ ಶೆಟ್ಟರ್ ಅವರೊಂದಿಗೆ ಡಿ.ಕೆ. ಶಿವಕುಮಾರ ಅವರನ್ನು ಬುಧವಾರ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಕ್ಷೇತ್ರದಲ್ಲಿನ ಮುಖಂಡರು, ಕಾರ್ಯಕರ್ತರು, ಅಪಾರ ಬೆಂಬಲಿಗರೊಂದಿಗೆ ಅ.10ರಂದು ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಲಿದ್ದೇನೆ’ ಎಂದು ತಿಳಿಸಿದ್ದಾರೆ.
ಬೊಮ್ಮಾಯಿ, ಡಾ. ಚಂದ್ರು ವಿರುದ್ಧ ಕಿಡಿ: ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಸಿಎಂ ಆಗಿದ್ದ ವೇಳೆ ಪಕ್ಷದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಹಣದ ವ್ಯವಹಾರ ಆಗಿರಲಿಲ್ಲ. ಬೊಮ್ಮಾಯಿ ಅವಧಿಯಲ್ಲಿ ಪಕ್ಷನಿಷ್ಠರಿಗೆ ಬೆಲೆಯೇ ಇಲ್ಲದಂತಾಗಿದೆ. ದುಡ್ಡಿಗಾಗಿ ಟಿಕೆಟ್ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಬೊಮ್ಮಾಯಿ ಸೇರಿ ಹಲವರ ಪಿತೂರಿ, ಷಡ್ಯಂತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ವಂಚಿತನಾಗಿದ್ದೇನೆ ಎಂದು ರಾಮಣ್ಣ ವಾಗ್ದಾಳಿ ನಡೆಸಿದ್ದಾರೆ.
ಡಾ. ಚಂದ್ರು ಲಮಾಣಿ ಅವರು ಮನೆಗೆ ಬಂದು ಗೆಲುವಿಗೆ ಸಹಕರಿಸಿ ಎಂದು ಕಾಲು ಹಿಡಿದು ಬೇಡಿಕೊಂಡರು. ಬಿಜೆಪಿಯ ಬಹಿರಂಗ ಸಮಾವೇಶದಲ್ಲಿ ಅಮಿತ್ ಶಾ ಸಮ್ಮುಖದಲ್ಲಿಯೇ ಕಾಲಿಗೆ ಬಿದ್ದದ್ದರು. ನನ್ನ ಸಹಾಯದಿಂದ ಗೆಲುವು ಸಾಧಿಸಿ, ತಂತರ ಒಮ್ಮೆಯೂ ನಮ್ಮತ್ತ ತಿರುಗಿ ನೋಡಲಿಲ್ಲ. ಕ್ಷೇತ್ರದ ಮುಖಂಡರು, ಕಾರ್ಯಕರ್ತರನ್ನು ಕಡೆಗಣಿಸುತ್ತಿದ್ದಾರೆ. ಮಾತಿಲ್ಲ. ಫೋನ್ ಇಲ್ಲ. ಎಲ್ಲವೂ ಮರೆತಿದ್ದಾರೆ. ಬಿಜೆಪಿ ಬಲವರ್ಧನೆಗಾಗಿ ಸಮರ್ಪಿಸಿಕೊಂಡ ನನ್ನಂತವನಿಗೆ ಕಿಮ್ಮತ್ತಿಲ್ಲದಂತಾಗಿದೆ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಶಿರಹಟ್ಟಿ ಮತಕ್ಷೇತ್ರದಲ್ಲಿ ರಾಮಣ್ಣ ಬಗ್ಗೆ ಅನುಕಂಪವಿದೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಷರತ್ತುಗಳಿಲ್ಲದೆ ಸೇರುತ್ತಿದ್ದೇನೆ. ಲೋಕಸಭೆ, ಜಿಪಂ, ತಾಪಂ ಚುನಾವಣೆಗಳಲ್ಲಿ ಶಕ್ತಿ ತೋರಿಸುವ ಮೂಲಕ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸುವೆ. ಮುಂದೆ ಡಿ.ಕೆ.ಶಿ ಮುಖ್ಯಮಂತ್ರಿ ಆಗಲಿದ್ದು, ತಮಗೆ ಉತ್ತಮ ಅವಕಾಶ ನೀಡಲಿದ್ದಾರೆ ಎಂಬ ವಿಶ್ವಾಸವಿದೆ.ರಾಮಣ್ಣ ಲಮಾಣಿ, ಮಾಜಿ ಶಾಸಕ