ಚೇತನ್ ಚಕ್ಕೆರೆ ಬಿಡದಿ
ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಕಿರಿಕ್ ನಡೆಯುತ್ತಲೇ ಇದೆ. ಅದರಲ್ಲೂ ಟೋಲ್ ಪ್ಲಾಜಾ ಸಿಬ್ಬಂದಿ ದುರ್ನಡತೆಯಿಂದಾಗಿ ವಾಹನ ಚಾಲಕರು, ಮಾಲೀಕರು ಕಿರಿಕಿರಿ ಅನುಭವಿಸುವಂತಾಗಿದೆ.
ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವಾಹನಗಳು ಕಣಮಿಣಕಿ ಟೋಲ್ನಲ್ಲಿ ಹಣ ಕಟ್ಟಬೇಕಿದೆ. ಮೈಸೂರಿನಿಂದ ಬೆಂಗಳೂರಿಗೆ ಬರುವ ವಾಹನಗಳು ಶೇಷಗಿರಿಹಳ್ಳಿ ಟೋಲ್ ಬಳಿ ಹಣ ಪಾವತಿ ಮಾಡಬೇಕಿದೆ. ಪ್ರತಿ ಟೋಲ್ನಲ್ಲಿ 11 ಲೇನ್ಗಳಿದ್ದು ಅಷ್ಟೂ ಕಡೆ ವಾಹನಗಳು ಸಂಚರಿಸಬಹುದಾಗಿದೆ. ಕೆಲವು ವಾಹನಗಳಲ್ಲಿ ಫಾಸ್ಟ್ಟ್ಯಾಗ್ ಇದ್ದರೂ ಟೋಲ್ನ ತಾಂತ್ರಿಕ ಸಮಸ್ಯೆಯಿಂದಾಗಿ ಸ್ಕ್ಯಾನ್ ಆಗುತ್ತಿಲ್ಲ. ಸಮಸ್ಯೆ ಟೋಲ್ನವರದ್ದಾಗಿದ್ದರೂ ಸಿಬ್ಬಂದಿ ವಾಹನ ಸವಾರರ ಜತೆ ಹಣಕ್ಕಾಗಿ ಗಲಾಟೆ ಮಾಡುತ್ತಾರೆ. ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗುತ್ತಿಲ್ಲ ಹಾಗಾಗಿ ನಿಗದಿತ ಶುಲ್ಕದ ದುಪ್ಪಟ್ಟು ಹಣ ನೀಡಿ ಹೋಗಿ ಎಂದು ಆವಾಜ್ ಹಾಕಿ ಗೂಂಡಾ ವರ್ತನೆ ತೋರಿರುವ ಸಾಕಷ್ಟು ಉದಾಹರಣೆಗಳಿವೆ.
ಅಧಿಕಾರಿಗಳ ಮೌನ?
ಟೋಲ್ ಗೇಟ್ಗಳ ಬಳಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಗಲಾಟೆ ನಡೆಯುತ್ತಿದೆ ಎಂದು ಗೊತ್ತಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಟೋಲ್ ಸಂಗ್ರಹದ ಗುತ್ತಿಗೆ ಕಂಪನಿ ಅಧಿಕಾರಿಗಳಾಗಲಿ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗುತ್ತಿಲ್ಲ. ಹಲವು ಪ್ರಕರಣಗಳಲ್ಲಿ ಟೋಲ್ ಸಿಬ್ಬಂದಿಯದ್ದೇ ತಪ್ಪಿದ್ದರೂ ಅವರಿಗೆ ಬುದ್ದಿವಾದ ಹೇಳಿ ವಾಹನ ಸವಾರರ ಜತೆಗೆ ಸೌಜನ್ಯದಿಂದ ನಡೆದುಕೊಳ್ಳುವಂತೆ ತಿಳಿಹೇಳುವ ಕೆಲಸಕ್ಕೂ ಮುಂದಾಗುತ್ತಿಲ್ಲ.
ಅಹಿತಕರ ಘಟನೆಗಳು
ಹೆದ್ದಾರಿಯಲ್ಲಿ ಟೋಲ್ ಪ್ರಾರಂಭವಾಗಿ ವರ್ಷ ಕಳೆದಿಲ್ಲ, ಅದಾಗಲೇ ಹಲವು ಅಹಿತಕರ ಘಟನೆಗಳು ಟೋಲ್ ಪ್ಲಾಜಾಗಳ ಬಳಿ ನಡೆದು ಹೋಗಿವೆ. ಹಣ ಪಡೆಯುವ ವಿಚಾರದಲ್ಲಿ ಹಾಗೂ ಸಿಬ್ಬಂದಿ ಮಾತಿನಲ್ಲಿ ಹಿಡಿತವಿಲ್ಲದ ಕಾರಣದಿಂದಾಗಿ ಗಲಾಟೆಗಳು ನಡೆದಿವೆ. ಫಾಸ್ಟ್ಟ್ಯಾಗ್ ಸ್ಕ್ಯಾನ್ ಆಗದ ವಿಚಾರದಲ್ಲಿ ಸಿಬ್ಬಂದಿ ಹಾಗೂ ವಾಹನ ಸವಾರರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿ ಟೋಲ್ ಸಿಬ್ಬಂದಿಯನ್ನೇ ಕೊಲೆ ಮಾಡಿರುವ ಘಟನೆ ಕೂಡ ನಡೆದಿದೆ. ಮತ್ತೊಂದು ಘಟನೆಯಲ್ಲಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ ಅವರ ಕಾರು ತಡೆದ ಟೋಲ್ ಸಿಬ್ಬಂದಿ, ಜನಪ್ರತಿನಿಧಿ ಎಂಬುದನ್ನೂ ಲೆಕ್ಕಿಸದೆ ಏಕವಚನದಲ್ಲೇ ಮಾತನಾಡಿರುವುದು ನಡೆದಿದೆ. ಇನ್ನು ಸಾಮಾನ್ಯ ವಾಹನ ಸವಾರರ ಜತೆ ಹೇಗೆ ನಡೆದುಕೊಳ್ಳುತ್ತಾರೆ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕನ್ನಡ ಬಾರದ ಸಿಬ್ಬಂದಿ
ಟೋಲ್ ಪ್ಲಾಜಾದಲ್ಲಿರುವ ಹಲವು ಸಿಬ್ಬಂದಿಗೆ ಕನ್ನಡವೇ ಬರುವುದಿಲ್ಲ. ಅದರಲ್ಲೂ ಟೋಲ್ ಗುತ್ತಿಗೆ ಪಡೆದಿರುವುದು ಹೊರ ರಾಜ್ಯದ ಕಂಪನಿಯಾಗಿದೆ. ಈ ಟೋಲ್ಗಳಲ್ಲಿ ನಿಯೋಜನೆಗೊಂಡಿರುವ ಮ್ಯಾನೇಜರ್ಗಳಿಗೂ ಕನ್ನಡ ಗೊತ್ತಿಲ್ಲ. ಎರಡು ದಿನಗಳ ಹಿಂದೆ ಡಾ.ಸೈಯದ್ ವಾಸಿಂ ಎಂಬುವರ ಕಾರಿನಲ್ಲಿ ಫಾಸ್ಟ್ಟ್ಯಾಗ್ ಇರಲಿಲ್ಲ. ಆದರೆ ನಂಬರ್ ಇತ್ತು. ಈ ನಂಬರ್ ದಾಖಲು ಮಾಡಿ ಹಣ ಖಡಿತ ಮಾಡಿಕೊಳ್ಳಿ ಎಂದು ಸಿಬ್ಬಂದಿಗೆ ಹೇಳಿದರು. ಆದರೆ ಅವರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಈ ವೇಳೆ ಮಧ್ಯ ಪ್ರವೇಶ ಮಾಡಿದ ಟೋಲ್ ಮ್ಯಾನೇಜರ್ ಹಿಂದಿಯಲ್ಲಿ ಮಾತನಾಡಿದರು. ಇದರಿಂದ ಕೆರಳಿದ ಸೈಯದ್ ಅವರು ನೀನು ಇರುವುದು ಕರ್ನಾಟಕದಲ್ಲಿ, ಇಲ್ಲಿ ಹೆಚ್ಚಾಗಿ ಸಂಚಾರ ಮಾಡುವವರು ಕನ್ನಡದವರು ಮೊದಲು ಕನ್ನಡ ಮಾತನಾಡುವುದನ್ನು ಕಲಿ ಎಂದು ತರಾಟೆ ತೆಗೆದುಕೊಂಡರು.