ಜಿಲ್ಲೆ

ಮನೆ, ಮನಗಳಲ್ಲಿ ಶ್ರೀರಾಮನ ಸ್ಮರಣೆ, ಕರೊನಾ ಭೀತಿಯಿಂದ ಕೋಸಂಬರಿ, ಪಾನಕ, ಮಜ್ಜಿಗೆ ವಿತರಣೆ ಬಂದ್

Kolar

ಕೋಲಾರ: ಕರೊನಾ ಹಾವಳಿಯಿಂದಾಗಿ ಈ ಬಾರಿ ಶ್ರೀರಾಮ ನವಮಿಯನ್ನು ಮನೆ, ಮನಗಳಲ್ಲಿ ಸರಳವಾಗಿ ಆಚರಿಸಲಾಯಿತು.

ಪ್ರತಿವರ್ಷ ವಿವಿಧ ದೇವಾಲಯಗಳಲ್ಲಿ, ಗಲ್ಲಿಗಳಲ್ಲಿ ಶ್ರೀರಾಮ ನವಮಿಯನ್ನು ಸಡಗರ ಸಂಭ್ರಮದಿಂದ ಅಚರಿಸಲಾಗುತ್ತಿತ್ತು. ಕರೊನಾದಿಂದ ದೇವಾಲಯಗಳು ಬಂದ್ ಆಗಿರುವುದರಿಂದ ಮರ್ಯಾದಾ ಪುರುಷೋತ್ತಮನನ್ನು ನಾಲ್ಕು ಗೋಡೆಗಳ ಮಧ್ಯೆಯೇ ಪೂಜಿಸಲಾಯಿತು.

ಸಂಘ-ಸಂಸ್ಥೆಗಳು, ಧಾರ್ಮಿಕ ಸಂಘಟನೆಗಳಿಂದ ಕೋಸಂಬರಿ, ಪಾನಕ, ಮಜ್ಜಿಗೆ, ಸಜ್ಜಿಗೆಯನ್ನು ಭಕ್ತರಿಗೆ ಹಂಚಿಕೆ ಮಾಡಲಾಗುತ್ತಿತ್ತು, ಈ ಬಾರಿ ಸಂಭ್ರಮಕ್ಕೆ ಕರೊನಾ ಅಡ್ಡಿಯುಂಟು ಮಾಡಿತು. ಮನೆಗಳಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಜನರು ತುಳಸಿ ಕಟ್ಟೆ ಮುಂದೆ ಸಂಜೆ ದೀಪ ಬೆಳಗಿ ದೇಶವನ್ನು ಕರೊನಾದಿಂದ ಮುಕ್ತಿಗೊಳಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದು ವಿಶೇಷ.

ದೇವಾಲಯಗಳಲ್ಲಿ ಬೆಳಗ್ಗೆ 6ರಿಂದ 7ಗಂಟೆಯೊಳಗೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಬಾಗಿಲು ಮುಚ್ಚಲಾಯಿತು. ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರಲಿಲ್ಲ. ಮುಳಬಾಗಿಲು ತಾಲೂಕಿನ ಕುರುಡುಮಲೆ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಯುಗಾದಿ ಹಬ್ಬದ ಬದಲು ಶ್ರೀರಾಮ ನವಮಿ ಆಚರಿಸುವುದು ಪದ್ಧತಿ, ಆದರೆ ಶ್ರೀರಾಮನಿಗೂ ಈ ಸಲ ಪೂಜೆ ಸಲ್ಲಿಸಾಗದೆ ಜನ ಪರಿತಪಿಸಿದರು.

ಬೆಲೆ ಏರಿಕೆ: ಕಳೆದ 15 ದಿನಗಳಿಂದ ತರಕಾರಿ, ಹೂವು, ಹಣ್ಣಿನ ಬೆಲೆ ಗಗನಕ್ಕೇರಿದೆ. ತೆಂಗಿನಕಾಯಿ ಒಂದಕ್ಕೆ 25ರಿಂದ 35 ರೂ, ಬಾಳೆ ಹಣ್ಣು ಕೆಜಿಗೆ 120ರಿಂದ 140 ರೂ. ಬಿಡಿ ಹೂವು ಕೆಜಿಗೆ 120ರಿಂದ 130 ಸೌತೆ ಕಾಯಿ 1ಕ್ಕೆ 15 ರೂ. ದುಬಾರಿ ಬೆಲೆಯಾಗಿದ್ದರಿಂದ ಗ್ರಾಹಕರು ಹಬ್ಬಕ್ಕೆ ಬೇಕಾದ ಪದಾರ್ಥ ಖರೀದಿಸಲು ಬೆಚ್ಚಿಬಿದ್ದರು.

ಸರಳ ಪೂಜೆ: ಕೋಲಾರ ತಾಲೂಕಿನ ವೇಮಗಲ್ ಗ್ರಾಮದ ನರಸಾಪುರ ವೃತ್ತ ಹಾಗೂ ಗ್ರಾಪಂ ಮುಂಭಾಗದಲ್ಲಿನ ಆಂಜನೇಯಸ್ವಾಮಿ ದೇವಸ್ಥಾನ ಸೇರಿ ವಿವಿಧೆಡೆ ಸರಳವಾಗಿ ಪೂಜೆ ಸಲ್ಲಿಸಲಾಯಿತು. ವರ್ಷವೂ ಅನ್ನದಾನದೊಂದಿಗೆ ಅದ್ದೂರಿಯಾಗಿ ನಡೆಯುತ್ತಿದ್ದ ಶ್ರೀರಾಮನವಿ ಈ ಸಲ ಪೂಜೆಗಷ್ಟೇ ಸೀಮಿತವಾಯಿತು.