ಜಿಲ್ಲೆ

ರಾಮನಾಥಪುರ ಜಾತ್ರೆಗೆ ವಿಧ್ಯುಕ್ತ ಚಾಲನೆ

ಎ. ಆರ್. ರಘುರಾಮ

ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರನ ಮಹಾರಥೋತ್ಸವ ಸಂಪನ್ನ
ಅರಕಲಗೂಡು : ತಾಲೂಕಿನ ರಾಮನಾಥಪುರದ ಪವಿತ್ರ ನಾಗಕ್ಷೇತ್ರ ಶ್ರೀ ಪ್ರಸನ್ನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಚಂಪಾಷಷ್ಠಿ ಮಹಾ ರಥೋತ್ಸವ ಸೋಮವಾರ ಸಕಲ ಧಾರ್ಮಿಕ ವಿಧಾನಗಳನ್ವಯ ಸಡಗರ ಮತ್ತು ಸಂಭ್ರಮದಿಂದ ನೆರವೇರಿತು.
ಜಾತ್ರೆಯಲ್ಲಿ ಜನಸಾಗರವೇ ನೆರೆದಿತ್ತು. ಒಂದು ತಿಂಗಳ ಜಾತ್ರೆ ವಿಧ್ಯುಕ್ತವಾಗಿ ಚಾಲನೆ ಪಡೆಯಿತು. ರಥೋತ್ಸವ ಪ್ರಯುಕ್ತ ದೇವಸ್ಥಾನದ ಒಳ ಪ್ರಾಕಾರದ ಸುತ್ತ ಬಗೆ ಬಗೆಯ ಹೂವಿನ ಹಾರಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಪಾರುಪತ್ತೇದಾರ ರಮೇಶಭಟ್ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ಸಾಗಿದವು. ಮೂಲ ದೇವರ ಗುಡಿಯಲ್ಲಿ ನಾಗಪ್ಪನಿಗೆ ಉಯ್ಯಲೆ ಸೇವೆ ಸಮರ್ಪಿಸಲಾಯಿತು. ದೇವರ ಉತ್ಸವ ಮೂರ್ತಿಯನ್ನು ಹೊರತಂದು ಅಲಂಕೃತ ರಥದ ಮೇಲೆ ಪ್ರತಿಷ್ಠಾಪಿಸಲಾಯಿತು. ರಥಾರೋಹಣದ ನಂತರ ವಿಶೇಷ ಪೂಜೆ ಸಲ್ಲಿಸಿ ಮಧ್ಯಾಹ್ನ 12 ಗಂಟೆಗೆ (ಅಭಿಜನ್ ಮುಹೂರ್ತದಲ್ಲಿ) ಆಕಾಶದಲ್ಲಿ ಗರುಡ ಪಕ್ಷಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ನಂತರ ಮಹಾ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಜಯಘೋಷ: ನೆರೆದಿದ್ದ ಭಕ್ತರು ಜಯಘೋಷಗಳ ನಡುವೆ ತೇರು ಮುಂದೆ ಸಾಗಿತು. ರಥ ಸಾಗುತ್ತಿದ್ದಂತೆ ಭಕ್ತರು ಹಣ್ಣು, ಜವನ ಎಸೆದು ಭಕ್ತಿ ಸಮರ್ಪಿಸಿದರು. ದಕ್ಷಿಣ ಕನ್ನಡ ಶೈಲಿಯ ಚಂಡೆ ಮದ್ದಳೆ ವಾದ್ಯಗೋಷ್ಠಿ ನೀನಾದದೊಂದಿಗೆ ವೇಷಧಾರಿಗಳು, ಆಕರ್ಷಕ ಬೊಂಬೆ ಕುಣಿತ ಪ್ರದರ್ಶನ ಗಮನ ಸೆಳೆಯಿತು. ದೇವಸ್ಥಾನದ ರಥ ಬೀದಿಯಲ್ಲಿ ಕಾವೇರಿ ನದಿಯ ಸೇತುವೆ ತನಕ ಚಲಿಸಿದ ತೇರು ಪುನಃ ಅದೇ ಮಾರ್ಗವಾಗಿ ಸ್ವಸ್ಥಾನಕ್ಕೆ ಮರಳಿತು. ರಥ ಮುಂದೆ ಸಾಗುವ ವೇಳೆಗೆ ಪೂಜಾ ಸಾಮಗ್ರಿಗಳೊಂದಿಗೆ ಆಗಮಿಸಿದ್ದ ಸಾವಿರಾರು ಭಕ್ತರು ಈಡುಗಾಯಿ ಒಡೆದು ಭಕ್ತಿ ಪರಾಕಾಷ್ಠೆ ಮೆರೆದರು.
ಕಾವೇರಿಯಲ್ಲಿ ಪುಣ್ಯಸ್ನಾನ : ಬೆಳಗಿನಿಂದಲೇ ಸಾವಿರಾರು ಭಕ್ತರು ಪವಿತ್ರ ಕಾವೇರಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಸ್ಥಾನದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಕೆಲವರು ತಲೆಮುಡಿ ಅರ್ಪಿಸಿ ಹರಕೆ ತೀರಿಸಿದರು. ಹಣ್ಣು- ತುಪ್ಪ ನೈವೇದ್ಯ ಅರ್ಪಿಸಿ, ಪ್ರಸಾದ ಸ್ವೀಕರಿಸಿ ಧನ್ಯತಾಭಾವ ಮೆರೆದರು.
ದೇವಸ್ಥಾನದೊಳಗೆ ಭಕ್ತರು ಸರದಿ ಸಾಲಿನಲ್ಲಿ ಬರಲು ಎರಡು ಕಡೆ ಬ್ಯಾರಿಕೇಡ್ ಹಾಕಲಾಗಿತ್ತು. ಬೆಳಗ್ಗೆಯಿಂದ ಸಂಜೆ ತನಕವೂ ಭಕ್ತರ ದಟ್ಟಣೆ ಅಧಿಕವಾಗಿತ್ತು. ಸಂಪ್ರದಾಯದಂತೆ ನವ ದಂಪತಿಗಳು ರಥೋತ್ಸವಕ್ಕೆ ಅಗಮಿಸಿ ದೇವರ ದರ್ಶನ ಪಡೆದರು. ನದಿಯಲ್ಲಿ ಸ್ನಾನ ಮಾಡಿ ಉರುಳು ಸೇವೆ ಮಾಡಿದರು. ನದಿಯ ವಹ್ನಿಪುಷ್ಕರಣಿ, ಗಾಯತ್ರಿ ಶಿಲೆ, ಗೌತಮ ಶಿಲೆ, ಕುಮಾರಧಾರಾ ತೀರ್ಥ ದರ್ಶನ ಪಡೆದರು. ಅಗಸ್ತ್ಯೇಶ್ವರ, ಅಂಜನೇಯಸ್ವಾಮಿ, ಪಟ್ಟಾಭಿರಾಮ, ವರದಾನ ಬಸವೇಶ್ವರ ಮುಂತಾದ ದೇವಾಲಯಗಳಿಗೆ ಭಕ್ತರು ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.