ಮಂಗಳೂರು : ಉಡುಪಿಯ ನಂದಿಕೂರಿನಿಂದ ಕೇರಳಕ್ಕೆ 400 ಕೆವಿ ವಿದ್ಯುತ್ ಸಂಪರ್ಕ ಕಲ್ಪಿಸುವ ಯೋಜನೆಯಿಂದ ಕರಾವಳಿಯ ಕೃಷಿ ಭೂಮಿಗೆ ಹಾನಿಯಾಗುತ್ತಿದ್ದು ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಕೃಷಿ ಭೂಮಿ ಮೇಲಿಂದ ಹೈಟೆನ್ಶನ್ ಲೈನ್ ಅಳವಡಿಸುವ ಬದಲು ಪರ್ಯಾಯ ಮಾರ್ಗ ಅನುಸರಿಸಬೇಕೆಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ.
ನಗರದ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭೂಗತ ವ್ಯವಸ್ಥೆಯ ಮೂಲಕ ಕಾಮಗಾರಿ ನಡೆಸಲು ಗುತ್ತಿಗೆ ವಹಿಸಿರುವ ಸಂಸ್ಥೆ ಮುಂದಾಗಬೇಕು. ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ರೈತರ ಬೇಡಿಕೆ ಈಡೇರಿಸಬೇಕು ಎಂದರು
ಪ್ರಸ್ತಾವಿತ 400 ಕೆವಿ ವಿದ್ಯುತ್‌ಲೈನ್ ಹಾದುಹೋಗುವ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸಹಿತ ಕರಾವಳಿಯ ರೈತರನ್ನು ವಿಶ್ವಾಸಕ್ಕೆ ಪಡೆಯದೆ ಯೋಜನೆ ಅನುಷ್ಟಾನಕ್ಕೆ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ರೈತರು ಪ್ರತಿಭಟನೆಯ ಮೂಲಕ ತಮ್ಮ ವಿರೋಧ
ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ಗುತ್ತಿಗೆ ವಹಿಸಿರುವ ಸ್ಟೆರಿಲೈಟ್ ಕಂಪನಿ ಹೈಟೆನ್ಶನ್ ಲೈನ್ ಹಾಕಲು ಪರಿಶೀಲನೆ ನಡೆಸುತ್ತಿದೆ. ಇದರಿಂದ ಕೃಷಿ ಭೂಮಿಗೆ ಮಾತ್ರವಲ್ಲ ಪರಿಸರ ಹಾಗೂ ವನ್ಯಜೀವಿಗಳಿಗೆ ಹಾನಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಅಥವಾ ಸಮುದ್ರ ಮೂಲಕ ಈ ಸಂಪರ್ಕಕ್ಕೆ
ಪರ್ಯಾಯ ಕ್ರಮ ವಹಿಸಬಹುದು. 900 ಕೋಟಿ ರೂ.ಗಳ ಯೋಜನೆ ಇದಾಗಿದ್ದು, ಇಷ್ಟು ದೊಡ್ಡ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲು ಮುಂದಾಗಬೇಕು ಎಂದು ರಮಾನಾಥ ರೈ ಸಲಹೆ ನೀಡಿದರು.