ಮಂಗಳೂರು: ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ಅವರು, ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿದ ಕೊಡುಗೆ ಅನನ್ಯವಾದುದು. ಅವರಿಗೆ ಅವಮಾನ ಮಾಡುವುದನ್ನು ಜಿಲ್ಲೆಯ ಜನರು ಸಹಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಗುರುವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗರ್ಭ ಶ್ರೀಮಂತರಾಗಿ ಹುಟ್ಟಿದ್ದರೂ ಸ್ವಾತಂತ್ರೃ ಹೋರಾಟದಲ್ಲಿ ತೊಡಗಿಸಿಕೊಂಡು ಜೈಲು ಶಿಕ್ಷೆ ಅನುಭವಿಸಿದ್ದಲ್ಲದೆ, ಸ್ವಾತಂತ್ರೃ ನಂತರದ ಭಾರತದ ಅಭಿವೃದ್ಧಿಗಾಗಿ ಶ್ರಮಿಸಿದ, ಅವರಿಗೆ ಅವಮಾನ ಮಾಡವುದು ತರವಲ್ಲ. ರಾಜ್ಯ ಸರ್ಕಾರ ಜಾಹೀರಾತಿನಲ್ಲಿ ನೆಹರು ಭಾವಚಿತ್ರ ಹಾಕದೆ ಅವಮಾನ ಮಾಡಿರುವುದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕಾದ ಅಗತ್ಯವಿದೆ ಎಂದರು.
ನೆಹರು ಆಪ್ತರಾಗಿದ್ದ ಶ್ರೀನಿವಾಸ ಮಲ್ಯರು, ನೆಹರು ಅವರ ಸಹಕಾರದಿಂದ ನವ ಮಂಗಳೂರು ಬಂದರು, ವಿಮಾನ ನಿಲ್ದಾಣ, ಎನ್‌ಐಟಿಕೆ, ಆಕಾಶವಾಣಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕೊಡುಗೆಗಳನ್ನು ಜಿಲ್ಲೆಗೆ ನೀಡಿದ್ದಾರೆ. ನೆಹರು ಪೀಳಿಗೆ ಕಾಂಗ್ರೆಸ್‌ನಲ್ಲಿದ್ದು, ಇನ್ನೂ ರಾಜಕೀಯದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಬಿಜೆಪಿಯವರು ಅವರನ್ನು ಗೌಣ ಮಾಡಿ ಮಾತನಾಡುತ್ತಿದ್ದಾರೆ. ಆದರೆ ಗಾಂಧೀಜಿಯವರನ್ನು ಹತ್ಯೆ ಮಾಡಿದವರನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
*ಸೂಲಿಬೆಲೆಯ ಇತಿಹಾಸ ಓದಬೇಡಿ:
ಸಾವರ್ಕರ್ ಸ್ವಾತಂತ್ರೃ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, ದೇಶದಲ್ಲಿ ಹೊಸ ಇತಿಹಾಸಕಾರರು ಹುಟ್ಟಿಕೊಂಡಿದ್ದಾರೆ. ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಸ್ವಾತಂತ್ರೃ ಹೋರಾಟದಲ್ಲಿ ಯಾರೆಲ್ಲ ಭಾಗವಹಿಸಿದ್ದರು ಎಂದು ಆಗಿನ ಇತಿಹಾಸಕಾರರು, ಪ್ರಮುಖ ಬರಹಗಾರರು ಬರೆದ ಪುಸ್ತಕಗಳು ಗ್ರಂಥಾಲಯದಲ್ಲಿ ದೊರೆಯುತ್ತದೆ. ಅಲ್ಲಿಗೆ ಹೋಗಿ ಓದಿ ತಿಳಿದುಕೊಳ್ಳಬಹುದು. ಸೂಲಿಬೆಲೆ ಬರೆದ ಇತಿಹಾಸದ ಪುಸ್ತಕ ಓದಬೇಡಿ ಎಂದರು.
ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೋ, ಪ್ರಕಾಶ್ ಸಾಲಿಯಾನ್, ಟಿ.ಕೆ.ಸುಧೀರ್, ಬೇಬಿ ಕುಂದರ್, ಉಮೇಶ್ ದಂಡಕೇರಿ, ನಜೀರ್ ಬಜಾಲ್ ಮೊದಲಾದವರಿದ್ದರು.