ಮಂಗಳೂರು : ಅಡ್ಯಾರ್‌ನ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ಫೆ. 17ರಂದು ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದೆ. ಸಮಾವೇಶಕ್ಕೆ ಅಗತ್ಯವಿರುವ ಎಲ್ಲ ಪೂರಕ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಹಲವು ವರ್ಷಗಳಿಂದ ಲೋಕಸಭೆ ಚುನಾವಣೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಆದರೆ ಈ ಬಾರಿ ಕಾಂಗ್ರೆಸ್ ಮತ್ತೆ ಫೀನಿಕ್ಸ್‌ನಂತೆ ಎದ್ದು ಬರುವ ವಿಶ್ವಾಸ ನಮಗಿದೆ ಎಂದರು.
ಸಂಘ ಪರಿವಾರದ ಮತೀಯವಾದಿಗಳ ಪ್ರಯೋಗ ಶಾಲೆಯಾಗಿ ಜಿಲ್ಲೆ ಮಾರ್ಪಟ್ಟ ನಂತರ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಸಮರ್ಥ ನಾಯಕ ಸ್ಪರ್ಧಿಸಿದರೆ ಗೆಲ್ಲುವ ಅವಕಾಶವಿದೆ. ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದಾಗ ಅದು ಕೇವಲ ಬೋಗಸ್ ಎಂದು ಬಿಜೆಪಿ ಹೇಳಿತ್ತು. ಆದರೆ ಕೇಂದ್ರದ ಅಸಹಕಾರದ ನಡುವೆಯೂ ಗ್ಯಾರಂಟಿ ಸ್ಕೀಮ್ ಪರಿಣಾಮಕಾರಿಯಾಗಿ
ಜಾರಿಯಾಗಿದೆ ಎಂದು ಅವರು ಹೇಳಿದರು.
ಲೋಕಸಭೆಗೆ ನೀವು ಅಭ್ಯಥಿಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ‘ ಕಾಂಗ್ರೆಸ್ ನನ್ನ ಧರ್ಮ. ವಿಧಾನಸಭೆ ಚುನಾವಣೆಯಲ್ಲಿ 9 ಬಾರಿ ಸ್ಪರ್ಧಿಸಲು ಕಾಂಗ್ರೆಸ್‌ನಿಂದ ಅವಕಾಶ ದೊರೆತಿದೆ. ಯಾವತ್ತೂ ಸ್ಥಾನಕ್ಕಾಗಿ ಅಪೇಕ್ಷೆ ಪಟ್ಟಿಲ್ಲ ಎಂದರು.