ಜಿಲ್ಲೆ

ಕಡ್ಲೆಸುಬ್ಬಯ್ಯನದೊಡ್ಡಿ ಮನೆಯಂಗಳಕ್ಕೆ ಬಂದ ಕಾಡಾನೆ

ಗಂಗಾಧರ ಬಿ ವಿ

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಜಮೀನುಗಳಲ್ಲಿ ಬೆಳೆ ನಾಶಪಡಿಸಿ ಹೋಗುತ್ತಿದ್ದ ಒಂಟಿ ಆನೆ ಶನಿವಾರ ಬೆಳಗ್ಗೆ ಕಡ್ಲೆಸುಬ್ಬಯ್ಯನದೊಡ್ಡಿ ಗ್ರಾಮದಲ್ಲಿ ಓಡಾಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.

ತೆಂಗಿನಕಲ್ಲು ಅರಣ್ಯ ಪ್ರದೇಶದ ಸಮೀಪವೇ ಗ್ರಾಮವಿದ್ದು, ಸಿದ್ದರಾಜು ಎಂಬುವರು ಮನೆ ಜಗುಲಿ ಮೇಲೆ ಕೊಯ್ಲು ಮಾಡಿ ಹಾಕಿದ್ದ ರಾಗಿ ತೆನೆ ತಿಂದು ಚೆಲ್ಲಾಡಿದೆ.

ಪಕ್ಕದಲ್ಲೇ ಇದ್ದ ಅವರ ಜಮೀನಿನಲ್ಲಿ ಬೆಳೆದಿದ್ದ ಟೊಮ್ಯಾಟೊ, ಕರಿಯಪ್ಪ, ಪುಟ್ಟೇಗೌಡ ಎಂಬುವರ ತೆಂಗಿನಮರ ನಾಶಪಡಿಸಿದೆ.

ಎರಡು ವರ್ಷಗಳಿಂದ ಆನೆಗಳು ಅರಣ್ಯದ ಸುತ್ತಮುತ್ತಲ ಗ್ರಾಮಗಳಲ್ಲಿ ಬೆಳೆ ನಾಶಪಡಿಸುತ್ತಿದ್ದು, 3 ಮಂದಿಯನ್ನು ಬಲಿ ತೆಗೆದುಕೊಂಡಿವೆ.

ನಾಲ್ಕೈದು ರೈತರ ಮೇಲೆ ಎರಗಿ ಗಾಯಗೊಳಿಸಿವೆ. ಅದರಲ್ಲಿ ಒಂಟಿ ಆನೆಗಳ ಉಪಟಳ ಹೆಚ್ಚಾಗಿತ್ತು ಎನ್ನಲಾಗಿದೆ. ಕಳೆದ ತಿಂಗಳು ಅರಣ್ಯ ಇಲಾಖೆ ಒಂಟಿ ಆನೆಗಳನ್ನೇ ಟಾರ್ಗೆಟ್ ಮಾಡಿ ಎರಡು ಆನೆಗಳನ್ನು ಸೆರೆ ಹಿಡಿದು ದೂರದ ಕಾಡಿಗೆ ಬಿಟ್ಟಿದ್ದರು.

ಆದರೆ ಮಖ್ನಾ ಮತ್ತು ಎರಡು ಆನೆಗಳು ಬೇರೆ ಬೇರೆಯಾಗಿದ್ದು, ಕೈಗೆ ಸಿಗದೆ, ಅರಣ್ಯ ಇಲಾಖೆಗೆ ತಲೆ ನೋವಾಗಿವೆ. ಚಿಕ್ಕಮಣ್ಣುಗುಡ್ಡೆ, ಹಂದಿಗೊಂದಿ, ತೆಂಗಿನಕಲ್ಲು ಈ ಭಾಗದಲ್ಲೇ ಒಂಟಿ ಆನೆಗಳು ಗ್ರಾಮಗಳ ಸಮೀಪ ಬೆಳಗ್ಗೆ, ಸಂಜೆ ರಸ್ತೆಗಳಲ್ಲಿ ಪ್ರತ್ಯಕ್ಷವಾಗಿ ಭೀತಿ ಉಂಟುಮಾಡುತ್ತಿವೆೆ.

ಗ್ರಾಮದೊಳಗೆ ಆನೆಗಳ ಹಾವಳಿ ರೂಢಿಯಾಗುತ್ತಿದೆ. ಕೂಡಲೇ ಇಲಾಖೆ ಒಂಟಿ ಆನೆ ಉಪಟಳ ತಡೆಯಲು ಮುಂದಾಗಬೇಕು. ಸಂಜೆಯಾದರೆ ಗ್ರಾಮದಲ್ಲಿ ಭಯದ ವಾತಾವರಣ ಮೂಡುತ್ತಿದೆ. ಮನೆ ಹೊರಗೆ ಬರಲು ಭಯವಾಗುತ್ತಿದೆ.

ಸಿದ್ದರಾಜು, ಗ್ರಾಮದ ರೈತ

ಪ್ರಾಣ ಹಾನಿ ಮಾಡುತ್ತಿರುವುದು ಆತಂಕಕಾರಿ ಸಂಗತಿ. ಈ ಭಾಗದಲ್ಲೇ 3 ರೈತರು ಆನೆ ದಾಳಿಗೆ ಬಲಿಯಾಗಿದ್ದಾರೆ. 4-5 ಮಂದಿ ಒಂಟಿ ಆನೆ ದಾಳಿಗೆ ಗಾಯಗೊಂಡಿರುವುದು ಭಯ ತಂದಿದೆ. ಇದೀಗ ಮನೆಯಂಗಳಕ್ಕೆ ಬಂದು ಹೋಗಿರುವುದನ್ನು ನೋಡುತ್ತಿದ್ದರೆ, ಮುಂದಿನ ದಿನಗಳಲ್ಲಿ ಜೀವನ ನಡೆಸುವುದು ಹೇಗೆ ಎಂಬ ಚಿಂತೆಯಾಗುತ್ತಿದೆ.

ರಾಜೇಶ್, ತೆಂಗಿನಕಲ್ಲು ರೈತ

ಕಳೆದ ವಾರ 8 ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸಲಾಗಿದೆ. ಉಳಿದ 8 ಆನೆಗಳನ್ನು ಕಾರ್ಯಾಚರಣೆ ಮೂಲಕ ಅಟ್ಟಲಾಗುತ್ತಿದೆ. ಕಡ್ಲೆಸುಬ್ಬಯ್ಯನದೊಡ್ಡಿಯಲ್ಲಿ ಬಂದಿರುವ ಒಂಟಿ ಆನೆ, ಹಂದಿಗೊಂದಿ ಅರಣ್ಯದಿಂದ ಬಂದಿದ್ದು, ಶೀಘ್ರ ಕಾರ‌್ಯಾಚರಣೆಯಲ್ಲಿ ಸ್ವಸ್ಥಾನ ಸೇರಿಸುವ ಕೆಲಸ ಇಲಾಖೆ ಮಾಡುತ್ತದೆ. ಅರಣ್ಯ ಇಲಾಖೆ ಜನರ ಜತೆಗಿದೆ. ಭಯಪಡುವುದು ಬೇಡ.

ಕಿರಣ್‌ಕುಮಾರ್, ವಲಯ ಅರಣ್ಯಾಧಿಕಾರಿ, ಚನ್ನಪಟ್ಟಣ