ಜಿಲ್ಲೆ

ಸರ್ಕಾರಗಳನ್ನು ಬಗ್ಗುಬಡಿಯುವ ಶಕ್ತಿ ರೈತರಿಗಿದೆ: ಪತ್ರಕರ್ತ ವೀರಭದ್ರಪ್ಪ ಬಿಸ್ನಳ್ಳಿ ಕಿವಿಮಾತು

Ramanagara

ರಾಮನಗರ: ರೈತ ಸಂಘಕ್ಕೆ ರೈತ ವಿರೋಧಿ ಸರ್ಕಾರಗಳನ್ನು ಬಗ್ಗು ಬಡಿಯುವ ಶಕ್ತಿಯಿದ್ದು, ಹಿಂದೆಯೇ ಇದು ಸಾಬೀತಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಎಲ್ಲಾ ರೈತ ಸಂಘಟನೆಗಳು ಒಗ್ಗಟ್ಟಾಗಿ ರೈತರ ಹಿತಕ್ಕಾಗಿ ಶ್ರಮಿಸಬೇಕು ಎಂದು ಪತ್ರಕರ್ತ ವೀರಭದ್ರಪ್ಪ ಬಿಸ್ನಳ್ಳಿ ಕಿವಿಮಾತು ಹೇಳಿದರು.


ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ರೈತ ಸಭಾಂಗಣದಲ್ಲಿ ರಾಜ್ಯ ರೈತ ಸಂಘ (ಸಮಾನ ಮನಸ್ಕರ ಸಹಭಾಗಿತ್ವ) ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಜತೆಗೂಡಿ ಗುರುವಾರ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಭಿಮಾನಿ ರೈತ ಸಂಘಕ್ಕೆ ಭಾರಿ ಶಕ್ತಿ ಇದ್ದು, ಈ ಹಿಂದೆ ರೈತ ವಿರೋಧಿ ಸರ್ಕಾರಗಳನ್ನು ಬಗ್ಗು ಬಡಿಯುವ ಮೂಲಕ ತನ್ನ ಶಕ್ತಿ ಏನೆಂದು ಸಾಬೀತುಪಡಿಸಿದೆ. ನಾಯಕರ ಭಿನ್ನಾಭಿಪ್ರಾಯ, ಸ್ವಾರ್ಥ ಮತ್ತಿತರ ಕಾರಣಗಳಿಂದ ಹಲವರು ತಮ್ಮದೆ ಆದ ರೈತ ಸಂಘಟನೆಗಳನ್ನು ಹುಟ್ಟುಹಾಕಿರುವುದು ವಿಷಾಧನೀಯ ಎಂದರು.

ರೈತರಲ್ಲಿ ಒಗ್ಗಟ್ಟಿಲ್ಲದಿದ್ದರೆ, ಸರ್ಕಾರಗಳು ತಮ್ಮದೆ ಆದ ರೀತಿ- ನೀತಿಗಳನ್ನು ಜಾರಿಗೊಳಿಸಿ ರೈತರ ಬದುಕನ್ನು ಇನ್ನಷ್ಟು ದುರ್ಬಲಗೊಳಿಸುತ್ತವೆ. ದೇಶದ ಜನರಿಗೆ ಬೇಕಾದ ಆಹಾರ ಧಾನ್ಯಗಳನ್ನು ಉತ್ಪಾದಿಸುವ ಶಕ್ತಿ ರೈತರಲ್ಲಿದೆ. ಅಕ್ಕಿ, ಗೋಧಿ, ಸಕ್ಕರೆ ಮತ್ತಿತರ ದಿನಬಳಕೆ ಆಹಾರ ಪದಾರ್ಥಗಳಿಗೆ ಕೊರತೆ ಇಲ್ಲ. ಆದರೆ ಸರ್ಕಾರಗಳು ಮಾಡಿಕೊಂಡಿರುವ ಅಂತಾರಾಷ್ಟ್ರೀಯ ಒಪ್ಪಂದಗಳಿಂದ ದೇಶಕ್ಕೆ ಅನಗತ್ಯವಾಗಿ ಆಹಾರ ಧಾನ್ಯಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇದರಿಂದ ದೇಶದೊಳಗೆ ರೈತರ ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರಕುತ್ತಿಲ್ಲ ಎಂದು ವೀರಭದ್ರಪ್ಪ ಬಿಸ್ನಳ್ಳಿ ಬೇಸರ ವ್ಯಕ್ತಪಡಿಸಿದರು.

ಕುಲಾಂತರಿ ತಳಿಗಳು ದೇಶಕ್ಕೆ ಲಗ್ಗೆ ಇಡಲು ಸಾಲುಗಟ್ಟಿ ನಿಂತಿವೆ. ಕುಲಾಂತರಿ ತಳಿ ಬದನೆ ಕೇವಲ ಸಾಂಕೇತಿಕವಷ್ಟೆ. ಇನ್ನು ಸುಮಾರು 50ಕ್ಕೂ ಹೆಚ್ಚು ಕುಲಾಂತರಿಗಳು ಸಿದ್ಧವಾಗಿವೆ. ಇವು ಯಾವ ಸಂದರ್ಭದಲ್ಲಿ ದೇಶದ ರೈತರಿಗೆ ನೀಡಲಾಗುತ್ತದೋ ತಿಳಿಯದು. ಆರೋಗ್ಯಕ್ಕೆ ಹಾನಿಕಾರಕವಾದ ಹಾಗೂ ರೈತರ ಬದುಕಿಗೆ ಕೊಳ್ಳಿ ಇಡುವ ಇಂತಹ ಕ್ರಮಗಳನ್ನು ವಿರೋಧಿಸಬೇಕಾದರೆ ರೈತರು ಒಗ್ಗಟ್ಟಾಗಿ ಇರಬೇಕು ಎಂದು ಮನವಿ ಮಾಡಿದರು.

ಸಮುಜಮುಖಿ ಕೆಲಸಗಳಿಗೆ ಸಮು ಮುಡಿಪಿಡಿ: ರೈತ ಮುಖಂಡ ಸಿ.ಪುಟ್ಟಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕಿನ ಒಂದಿಷ್ಟು ಸಮಯವನ್ನು ಸಮಾಜಮುಖಿ ಕೆಲಸಗಳಿಗೆ ಮುಡಿಪಿಡಬೇಕು. ಸಮಾಜದ ಋಣ ತೀರಿಸಬೇಕು. ಈ ನಾಡಿಗೆ ಅನ್ನ ನೀಡುವ ರೈತ ತನ್ನ ಜೀವವನ್ನೆ ಪಣವಾಗಿಟ್ಟು ಕೃಷಿ ಮಾಡುತ್ತಿದ್ದಾನೆ. ರಾಜ್ಯದಲ್ಲಿ ಇದುವರೆಗೂ ಸುಮಾರು 150ಕ್ಕೂ ಹೆಚ್ಚು ರೈತರ ಬಲಿದಾನವಾಗಿದೆ. ದೆಹಲಿ ರೈತ ಹೋರಾಟದಲ್ಲಿ ಸುಮಾರು 750ಕ್ಕೂ ಹೆಚ್ಚು ರೈತರು ಮೃತಪಟ್ಟರು. ನವಲಗುಂದ- ನರಗುಂದ ಹೋರಾಟ ರೈತರ ಮೊದಲ ಬಲಿ ಪಡೆಯಿತು. ಜಿಲ್ಲೆಯಲ್ಲಿನ ರೈತ ಹೋರಾಟಕ್ಕೆ ಭಾರಿ ಇತಿಹಾಸ ಇದೆ. ಇತ್ತೀಚಿನ ಬೆಳವಣಿಗೆಗಳಿಂದ ರೈತ ಹೋರಾಟದಿಂದ ಒಂದಿಷ್ಟು ದಿನ ದೂರವಿದ್ದೆ, ಸಮಾನ ಮನಸ್ಕರ ಒತ್ತಡದಿಂದ ಮತ್ತೆ ರೈತ ಚಳವಳಿ ಸಂಘಟಿಸುತ್ತಿದ್ದು, ಮಾಧ್ಯಮದವರು ನಮ್ಮ ಜೊತೆ ಕೈಜೋಡಿಸಿರುವುದು ಹೋರಾಟಕ್ಕ ಸಹಕಾರಿಯಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್ ಬೈರಪಟ್ಟಣ ಮಾತನಾಡಿ, ಇತ್ತೀಚಿಗೆ ಯುವಜನತೆ ಹೋರಾಟ- ಚಳವಳಿಗಳಿಂದ ಹಿಂದೆ ಸರಿಯುತ್ತಿದ್ದಾರೆ. ಇದಕ್ಕೆ ಪಾಲಕರೇ ಮುಖ್ಯ ಕಾರಣ. ಯುವ ಸಮುದಾಯವನ್ನು ಹಣ ಸಂಪಾದಿಸುವ ಯಂತ್ರಗಳನ್ನಾಗಿ ಮಾಡಲಾಗುತ್ತಿದೆ. ಸಮಾಜಮುಖಿ ಹೋರಾಟಗಳಿಂದ ಯುವಕರನ್ನು ದೂರ ಇಟ್ಟರೆ ಕೊನೆಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲಾರದಂತಹ ಸ್ಥಿತಿಗೆ ಮಕ್ಕಳು ಸಿಲುಕುತ್ತಾರೆ ಎಂಬ ಸತ್ಯವನ್ನು ಪಾಲಕರು ಅರಿಯಬೇಕು ಎಂದು ಎಚ್ಚರಿಕೆ ನೀಡಿದರು.


ಕಾರ್ಯಕ್ರಮದಲ್ಲಿ ಪತ್ರಕರ್ತರ ಜೊತೆ ಸಂವಾದ ಏರ್ಪಡಿಸಲಾಗಿತ್ತು. ಮಾವು ಉತ್ಪಾದಕರ ಸಂಘದ ಜಿಲ್ಲಾಧ್ಯಕ್ಷ ಚಿಕ್ಕಬೈರೇಗೌಡ, ಹಿರಿಯ ರೈತ ಮುಖಂಡ ಜೋಗಪ್ಪ, ಪತ್ರಕರ್ತ ಗೊ.ರಾ ಶ್ರೀನಿವಾಸ್ ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ರೈತ ಮುಖಂಡರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.