ಚನ್ನಪಟ್ಟಣ ತಾಲೂಕಿನ ಮಾರೇಗೌಡನದೊಡ್ಡಿ ಎಂಪಿಸಿಎಸ್‌ನಲ್ಲಿ ನಡೆದಿರುವ ಅವ್ಯವಹಾರದ ತನಿಖೆ ಹಾಗೂ ಹಾಲು ಉತ್ಪಾದಕರಿಗೆ ಹಣದ ಬಟವಾಡೆಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗ್ರಾಮದ ರೈತರು ರಾಮನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 
ಜಿಲ್ಲೆ

ಡೇರಿ ಅವ್ಯವಹಾರ ತನಿಖೆಗೆ ಪಟ್ಟು: ಮಾರೇಗೌಡನದೊಡ್ಡಿ ರೈತರಿಂದ ಪ್ರತಿಭಟನೆ

Ramanagara

ರಾಮನಗರ: ಚನ್ನಪಟ್ಟಣ ತಾಲೂಕಿನ ಮಾರೇಗೌಡನದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು ಇದನ್ನು ತನಿಖೆಗೆ ಒಳಪಡಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ಹಣದ ಬಟವಾಡೆಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಗ್ರಾಮದ ರೈತರು ನಗರದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.


ಕಚೇರಿ ಮುಂಭಾಗ ಜಯಾಯಿಸಿದ ಹಾಲು ಉತ್ಪಾದಕರು, ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಇದನ್ನು ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹಿಸಲಾಗಿತ್ತು. ಆದರೆ ಯಾವುದೇ ತನಿಖೆ ನಡೆಸಿಲ್ಲ. ಪರಿಣಾಮವಾಗಿ ಕಳೆದ ಎರಡು ತಿಂಗಳಿಂದ ಹಾಲು ಉತ್ಪಾದಕರಿಗೆ ಹಣ ಸಿಗದೆರ ಸಮಸ್ಯೆ ಆಗಿದೆ. 10 ಲಕ್ಷ ರೂ.ಗಳಿಗೂ ಹೆಚ್ಚು ಬಾಕಿ ಬಟವಾಡೆ ಆಗಬೇಕಿದೆ. ಕೂಡಲೇ ಆಡಳಿತಾಧಿಕಾರಿ ನೇಮಿಸಿ ಉತ್ಪಾದಕರಿಗೆ ಪ್ರತಿ ವಾರ ಹಣದ ನೀಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.


ಸಂಘದ ಕಾರ್ಯದರ್ಶಿ ಶಿವಸ್ವಾಮಿ ಸೇರಿ ಹಲವರು ಡೇರಿಯ ಲೆಕ್ಕದಲ್ಲಿ ವ್ಯತ್ಯಾಸ ಮಾಡಿದ್ದಾರೆ. ಲಕ್ಷಾಂತರ ರೂಪಾಯಿ ಮೊತ್ತದ ಹಗರಣ ನಡೆದಿದೆ. ಆದಾಗ್ಯೂ ಕ್ರಮ ಕೈಗೊಂಡಿಲ್ಲ. ಕಳೆದ ವರ್ಷದ ಆಡಿಟ್ ಸಹ ಮಾಡಿಲ್ಲ. ಈ ಅಕ್ರಮದ ವಿರುದ್ಧ ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನ ಆಗಿಲ್ಲ. ಹಣ ದುರುಪಯೋಗದ ಕುರಿತು ವರದಿ ನೀಡಿದ್ದರೂ ಬಮುಲ್ನಿಂದ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸಂಘಕ್ಕೆ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.ವಾಗ್ವಾದ


ಡೇರಿ ಕಾರ್ಯದರ್ಶಿ ಅವ್ಯವಹಾರ ನಡೆಸಿರುವ ಕುರಿತು ಯಾವುದೇ ಸಾಕ್ಷೃಗಳು ಇಲ್ಲ. ಅವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಹೀಗಾಗಿ ಕಾನೂನು ಪ್ರಕಾರ ಅವರಿಗೆ ಅವಕಾಶ ನೀಡುತ್ತಿದ್ದೇವೆ ಎಂದು ಎಂದು ಸಹಾಯಕ ನಿಬಂಧಕ ರಘು ರೈತರಿಗೆ ಸ್ಪಷ್ಟನೆ ನೀಡಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೈತ ಮುಖಂಡ ಸಿ. ಪುಟ್ಟಸ್ವಾಮಿ, ಲೆಕ್ಕಪತ್ರ ದಾಖಲೆಗಳನ್ನು ಸಂಬಂಧಿಸಿದವರಿಗೆ ನೀಡಬೇಕು ಎಂದು ನ್ಯಾಯಾಲಯ ಕಳೆದ ಅಕ್ಟೋಬರ್‌ನಲ್ಲೇ ಸೂಚಿಸಿದೆ. ಹೀಗಿದ್ದರೂ ಕಾರ್ಯದರ್ಶಿ ದಾಖಲೆ ನೀಡದೇ ಸತಾಯಿಸುತ್ತಿದ್ದಾರೆ. ಇಂತಹವರನ್ನು ಏಕೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಬ್ಯಾಂಕ್ ವ್ಯವಹಾರಕ್ಕೆ ಅನುಮತಿ: ರೈತರ ಪ್ರತಿಭಟನೆಗೆ ಬೆಚ್ಚಿದ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಹಾಲು ಉತ್ಪಾದಕರಿಗೆ ಹಣ ಬಟವಾಡೆಗೆ ವ್ಯವಸ್ಥೆ ಮಾಡಿದ್ದಾರೆ. ಸಂಘದ ಬ್ಯಾಂಕ್ ಖಾತೆ ಇರುವ ಇಗ್ಗಲೂರು ಯೂನಿಯನ್ ಬ್ಯಾಂಕ್ ಶಾಖೆ ವ್ಯವಸ್ಥಾಪಕರಿಗೆ ಪತ್ರ ಬರೆದು, ಹಾಲು ಬಟವಾಡೆ ಹಣವನ್ನು ರೈತರಿಗೆ ವಿತರಿಸಲು ಮತ್ತು ಸಂಘದ ದೈನಂದಿನ ವ್ಯವಹಾರಕ್ಕೆ ಅನುಕೂಲ ಮಾಡಿಕೊಡಲು ಹಾಗೂ ಬ್ಯಾಂಕಿನ ವ್ಯವಹಾರವನ್ನು ನಿರ್ವಹಿಸಲು ಬಮುಲ್‌ನ ಚನ್ನಪಟ್ಟಣ ಮಾರ್ಗ ವಿಸ್ತರಣಾಧಿಕಾರಿ ಹಾಗೂ ಸಂಘದ ವಿಶೇಷ ಕರ್ತವ್ಯಾಧಿಕಾರಿಗೆ ಅನುಮತಿ ನೀಡಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.