ಜಿಲ್ಲೆ

7 ಬಾಂಗ್ಲಾ ದೇಶಿಗರ ಬಂಧನ: ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಅಕ್ರಮ ವಾಸಿಗಳು

Ramanagara

ರಾಮನಗರ: ಸೂಕ್ತ ದಾಖಲೆಗಳಿಲ್ಲದೆ ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ಮಂದಿ ಬಾಂಗ್ಲಾ ನಿವಾಸಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ಸ್ವದೇಶಕ್ಕೆ ಕಳಿಸಲು ಸಿದ್ಧತೆ ನಡೆಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್​ ವರಿಷ್ಠಾಧಿಕಾರಿ ಕೆ. ಸಂತೋಷ್​ ಬಾಬು, ಜಿಲ್ಲೆಯ ಬಸವನಪುರ ಗ್ರಾಮದಲ್ಲಿರುವ ಲಿಂಕ್​ಅಪ್​ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಜು. 11ರಂದು ಬಂಧಿಸಲಾಗಿದೆ ಎಂದು ತಿಳಿಸಿದರು.


ಬಂಧಿತರನ್ನು ಮೊಹಮ್ಮದ್​ ಸೊಹಿಲ್​ ರಾಣಾ (34), ಜುಲ್ಫಿಕರ್​ ಅಲಿ (34), ಉಜಾಲ್​ ಮೊಹಮ್ಮದ್​ ರಾಣಾ (30), ಮಿನ್ಹಾಜುಲ್​ ಹುಸೇನ್​ (25), ಮುಸ್ಸಾ ಶೇಖ್​ (27), ರಹೀಂ (27), ಆರೀಫುಲ್​ ಇಸ್ಲಾಂ (27) ಎಂದು ಗುರುತಿಸಲಾಗಿದೆ. ಆರೋಪಿಗಳ ಬಳಿ ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ರಾಜ್ಯಗಳ ವಿಳಾಸಗಳು ಇರುವ ಆಧಾರ್​ ಕಾರ್ಡ್​ಗಳು ಪತ್ತೆಯಾಗಿವೆ. ಇದರೊಟ್ಟಿಗೆ ಬಾಂಗ್ಲಾದೇಶದ ವಿಳಾಸ ಇರುವ ಗುರುತಿನ ಚೀಟಿಗಳೂ ಸಿಕ್ಕಿವೆ. ಇದರಿಂದಾಗಿ ಅವರ ಪತ್ತೆ ಸುಲಭ ಆಗಿದೆ ಎಂದು ಸಂತೋಷ್​ಬಾಬು ತಿಳಿಸಿದರು.


ತಮಿಳುನಾಡು ಮೂಲದ ಏಜೆಂಟ್​ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶ ಮಾಡಿದ್ದ ಆರೋಪಿಗಳು ಕಳೆದ ಜೂನ್​ನಲ್ಲಿ ರಾಮನಗರದ ಕಾರ್ಖಾನೆಯಲ್ಲಿ ಉದ್ಯೋಗ ಪಡೆದಿದ್ದರು. ಬಸವನಪುರದಲ್ಲೇ ಮನೆ ಬಾಡಿಗೆಗೆ ಪಡೆದು ವಾಸವಿದ್ದರು. ಇದೀಗ ಅವರನ್ನು ಸ್ವದೇಶಕ್ಕೆ ಕಳಿಸುವ ಕಾನೂನು ಪ್ರಕ್ರಿಯೆ ನಡೆದಿದೆ ಮಾಹಿತಿ ನೀಡಿದರು.


2 ವರ್ಷದ ನಂತರ ಕೊಲೆ ಪ್ರಕರಣ ಪತ್ತೆ !: ಮತ್ತೊಂದು ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್​ಪಿ ಕೆ. ಸಂತೋಷ್​ಬಾಬು, ಹತ್ಯೆ ನಡೆದ ಎರಡು ವರ್ಷದ ಬಳಿಕ ಕೊಲೆ ಪ್ರಕರಣ ಪತ್ತೆಯಾಗಿ, ಆರೋಪಿಯನ್ನು ಬಂಧಿಸಿರುವುದು ಕನಕಪುರ ಗ್ರಾಮೀಣ ಠಾಣೆಯಲ್ಲಿ ನಡೆದಿದೆ ಎಂದು ತಿಳಿಸಿದರು.

ವಿವರ: 2020ರ ನವೆಂಬರ್​ 18ರಂದು ಹಾರೋಬೆಲೆ ಜಲಾಶಯದ ಹಿನ್ನೀರಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿತ್ತು. ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಅದಾದ ಬಳಿಕ 2022ರ ಜನವರಿ 27ರಂದು ಕನಕಪುರ ತಾಲೂಕಿನ ಕೋಟೆಕೊಪ್ಪ ನಿವಾಸಿ ಪ್ರತಾಪ್​ ಎಂಬುವರು ತಂದೆ ರುದ್ರೇಗೌಡ ಅವರು ಒಂದೂವರೆ ವರ್ಷದ ಹಿಂದೆ ಕಾಣೆಯಾಗಿದ್ದಾರೆ ಎಂದು ನಾಪತ್ತೆ ದೂರು ದಾಖಲಿಸಿದ್ದರು. ಕಳೆದ ಜೂನ್​ನಲ್ಲಿ ಪ್ರತಾಪ್​ಗೆ ಕರೆ ಮಾಡಿದ್ದ ಪೊಲೀಸರು ಹಾರೋಬೆಲೆಯಲ್ಲಿ ದೊರೆತ ಅಸ್ಥಿಪಂಜರದ ಜತೆ ಆತನ ಡಿಎನ್​ಎ ಪರೀಕ್ಷೆ ನಡೆಸಿದರು. ನಂತರದಲ್ಲಿ ಶವ ಅವರ ತಂದೆ ರುದ್ರೇಗೌಡ (58) ಅವರದ್ದೆಂದು ಖಾತ್ರಿಯಾಗಿತು. ಸಾವಿನ ಬಗ್ಗೆ ವಿಚಾರಿಸಲು ರುದ್ರೇಗೌಡರ ಸ್ನೇಹಿತ ಚಿಕ್ಕಮುದವಾಡಿಯ ಮಲ್ಲೇಶ ಎಂಬುವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ, ಗಲಾಟೆಯೊಂದರ ಸಂಬಂಧ ತಾನೇ ಗೆಳೆಯನ ಮರ್ಮಾಂಗಕ್ಕೆ ಒದ್ದು ಹತ್ಯೆ ಮಾಡಿದ್ದು, ನಂತರ ಶವವನ್ನು ಹಾರೋಬೇಲೆ ಜಲಾಶಯಕ್ಕೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದರು.