ಜಿಲ್ಲೆ

ಗೃಹಲಕ್ಷ್ಮೀ ನೋಂದಣಿ ಪರಿಶೀಲನೆ ನಾರಾಯಣಪುರ ಗ್ರಾಪಂಗೆ ಸಿಇಓ ದಿಗ್ವಿಜಯ ಬೋಡ್ಕೆ ಭೇಟಿ

ಕನಕಪುರ: ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನೋಂದಣಿ ಪ್ರಕ್ರಿಯೆಯನ್ನು ಪರಿಶೀಲಿಸಿದರು.

ಪಂಚಾಯಿತಿ ಆವರಣದಲ್ಲಿ ಮಾತನಾಡಿದ ದಿಗ್ವಿಜಯ್ ಬೋಡ್ಕೆ, ಎಲ್ಲೆಡೆ ಗೃಹಲಕ್ಷ್ಮೀ ಅರ್ಜಿ ನೋಂದಣಿ ಕಾರ್ಯ ಚುರುಕುಗೊಂಡಿದ್ದು, ನಮ್ಮ ಸಿಬ್ಬಂದಿಯೂ ಕಾರ್ಯ ಪ್ರವೃತ್ತರಾಗಿದ್ದಾರೆ. ಸಿಬ್ಬಂದಿಗೆ ರಾತ್ರಿ 8 ಗಂಟೆಯವರೆಗೆ ಕೆಲಸ ಮಾಡಲು ಸೂಚಿಸಲಾಗಿದೆ. ಸರ್ವರ್ ಸಮಸ್ಯೆ ಕೇಳಿ ಬರುತ್ತಿರುವ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜನಸಾಮಾನ್ಯರಿಗೆ ಸಮಸ್ಯೆಯಾಗದಂತೆ ನೋಂದಣಿ ಮಾಡಲಾಗುವುದು. ಜನರು ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ಅಂಗನವಾಡಿ ಕಟ್ಟಡ ಹಾಗೂ ಗ್ರಂಥಾಲಯ ವೀಕ್ಷಿಸಿದರು. ತಾಲೂಕು ಪಂಚಾಯಿತಿ ಇಒ ಭೈರಪ್ಪ, ಪಿಡಿಒ ಮಹಂತೇಶ್, ತಾಂತ್ರಿಕ ಸಂಯೋಜಕ ಸಹಾಯಕ ಅಭಿಯಂತರ ಹಾಗೂ ಸಿಬ್ಬಂದಿ, ಗ್ರಾಮಸ್ಥರು ಹಾಜರಿದ್ದರು.