ಜಿಲ್ಲೆ

ಅಪರೂಪ ಪ್ರಭೇದದ ಬಿಳಿ ಕಡವೆ ಪ್ರತ್ಯಕ್ಷ ಗಾಳಿಬೋರೆ ಬಳಿ ಕ್ಯಾಮರಾ ಕಣ್ಣಿನಲ್ಲಿ ಸೆರೆ

ಗಂಗಾಧರ ಬಿ ವಿ

ಕನಕಪುರ: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕಾವೇರಿ ವನ್ಯಜೀವಿ ವಿಭಾಗ ಸಂಗಮ ಅರಣ್ಯ ಪ್ರದೇಶದ ಗಾಳಿಬೋರೆ ಬಳಿ ಶ್ವೇತ ವರ್ಣದ ಬಣ್ಣದ ಕಡವೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದೆ.

ಈ ಕುರಿತು ನಗರದಲ್ಲಿ  ಮಾಹಿತಿ ನೀಡಿದ ವಲಯ ಅರಣ್ಯಾಧಿಕಾರಿ ದೇವರಾಜು, ಅತ್ಯಂತ ಅಪರೂಪದ ವನ್ಯಜೀವಿ ಪ್ರಭೇದಗಳಲ್ಲಿ ಒಂದಾಗಿರುವ ಬಿಳಿ ಸಾಂಬಾರ್ (ಕಡವೆ) ಪ್ರಾಣಿಗಳು ಅಳಿವಿನಂಚಿನ ಹಾಗೂ ಅತಿ ಅಪರೂಪದ ತಳಿಯಾಗಿವೆ. ಚಿರತೆಗಳ ಮೇಲೆ ಅಧ್ಯಯನ ನಡೆಸಲು ಅಭಯಾರಣ್ಯದಲ್ಲಿ ಕ್ಯಾಮರಾ ಟ್ರಾಪ್‌ಗಳನ್ನು ಅಳವಡಿಸಿದ್ದ ಸಂದರ್ಭದಲ್ಲಿ ಈ ಅಪರೂಪದ ಬಿಳಿಯ ಕಡವೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

ಇದು ಏಷ್ಯಾ ಖಂಡದಲ್ಲಿಯೇ ಅಪರೂಪವಾಗಿರುವ ಪ್ರಭೇದವಾಗಿದೆ. ಈ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಹಾಗೂ ಭಾರತದ ಕೆಲವು ಭಾಗಗಳಲ್ಲಿ ಮಾತ್ರ ಈ ಅಪರೂಪದ ಪ್ರಭೇದ ಕಂಡುಬಂದಿತ್ತು. ಈಗ ಕಾವೇರಿ ವನ್ಯಜೀವಿ ವಿಭಾಗದ ಸಂಗಮ ವಲಯದಲ್ಲಿ ಕಂಡುಬಂದಿರುವುದು ವನ್ಯಪ್ರಾಣಿ ಪ್ರಿಯರಲ್ಲಿ ಸಂತಸ ತಂದಿದೆ ಎಂದರು.