ಜಿಲ್ಲೆ

ಮುನಿಯಪ್ಪನದೊಡ್ಡಿ ನಿವಾಸಿಗಳಿಗೆ ಅಗತ್ಯ ಸೌಲಭ್ಯ

ತಾಪಂ ಇಒ ಪ್ರದೀಪ್ ಭರವಸೆ

ರಸ್ತೆ, ವಿದ್ಯುತ್, ನೀರಿನ ಸೌಕರ್ಯ ಕಲ್ಪಿಸಿ ಕಾಡುಪ್ರಾಣಿಗಳ ಹಾವಳಿ ತಪ್ಪಿಸುವಂತೆ ನಿವಾಸಿಗಳ ಆಗ್ರಹ

ರಾಮನಗರ
ತಾಲೂಕಿನ ಮಾಯಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಗಂಗರಾಜನಹಳ್ಳಿ ಸಮೀಪ ವಾಸಿಸುತ್ತಿರುವ ಮುನಿಯಪ್ಪನದೊಡ್ಡಿ (ಇರುಳಿಗ ಕಾಲನಿ) ಗ್ರಾಮಕ್ಕೆ ತಾಲೂಕು ಪಂಚಾಯಿತಿ ಇಒ ಪ್ರದೀಪ್ ಸೋಮವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿದರು.

ವಿಜಯವಾಣಿ ಭಾನುವಾರದ ಸಂಚಿಕೆಯಲ್ಲಿ ‘ಅರಣ್ಯ ತಪ್ಪಲಲ್ಲಿ ಅತಂತ್ರ ಬದುಕು’ ಎಂಬ ಶೀರ್ಷಿಕೆಯಲ್ಲಿ ಅಲ್ಲಿನ ಜನರ ಬದುಕಿನ ಚಿತ್ರಣ ತೆರೆದಿಡುವ ಪ್ರಯತ್ನ ಮಾಡಿತ್ತು. ವರದಿ ಬೆನ್ನಲ್ಲೇ ಸೋಮವಾರ ಹಂದಿಗೊಂದಿ ಅರಣ್ಯ ಪ್ರದೇಶದ ಮುನಿಯಪ್ಪನದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು.
ಈ ವೇಳೆ ಮಹಿಳೆಯೊಬ್ಬರು ರಸ್ತೆ, ಕರೆಂಟ್, ನೀರು ಇಲ್ಲ, ಮಳೆ ಬಂದರೆ ಮನೆ ಸೋರುತ್ತವೆ. ಸಣ್ಣ ಸಣ್ಣ ಮಕ್ಕಳಿದ್ದಾರೆ. ರಾತ್ರಿ ವೇಳೆ ಆನೆ, ಚಿರತೆ, ಕರಡಿ ಕಾಟವಿದೆ. ಬೀದಿ ದೀಪದ ವ್ಯವಸ್ಥೆ ಇಲ್ಲ, ಪಡಿತರ ಚೀಟಿ, ಆಧಾರ್ ಕಾರ್ಡ್ ಮಾತ್ರ ನೀಡಿದ್ದಾರೆ. ಕೂಲಿ ಮಾಡಿ ಜೀವನ ನಡೆಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಹಿಂದೆ ರಾಮನಗರಕ್ಕೆ ಅರಣ್ಯದಿಂದ ಸೌದೆ ಕಡಿದು ತಂದು ಕಾಲ್ನಡಿಗೆಯಲ್ಲಿಯೇ ಹೊತ್ತು ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆವು. ಆದರೆ, ಗ್ಯಾಸ್ ಬಂದ ಮೇಲೆ ಸೌದೆ ವ್ಯಾಪಾರ ಕೂಡ ಇಲ್ಲವಾಗಿದೆ. ಈಗ ಕೂಲಿ ಕೆಲಸ ಮಾಡಿ ಜೀವನ ಕಟ್ಟಿಕೊಂಡಿದ್ದೇವೆ. ನೀರು ತರಲು ದೂರಕ್ಕೆ ಹೋಗಿ ತರಬೇಕು. ರೈತರ ಪಂಪ್‌ಹೌಸ್‌ನಿಂದ ಮನೆಗೆ ವಿದ್ಯುತ್ ಸೌಲಭ್ಯ ಪಡೆದಿದ್ದೇವೆ. ಅಗತ್ಯ ಸೌಲಭ್ಯ ಒದಗಿಸಿಕೊಡುವಂತೆ ಮನವಿ ಮಾಡಿದರು.

ಸಮಸ್ಯೆ ಆಲಿಸಿದ ಇಒ ಪ್ರದೀಪ್, ಈ ಜಾಗ ಸರ್ಕಾರದ್ದೋ ಅಥವಾ ಖಾಸಗಿಯದ್ದೋ ಎಂದು ನಿಖರವಾಗಿ ತಿಳಿಯುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಬೇರೆ ಕಡೆಯಿಂದ ಬಂದು ಶೆಡ್ ನಿರ್ಮಾಣ ಮಾಡಿಕೊಂಡಿದ್ದಾರೆ. ಕಂದಾಯ ಇಲಾಖೆಯಿಂದ ವಾಸಿಸುತ್ತಿರುವ ಜಾಗದ ಅಳತೆ ಮಾಡಿಸಿ ಜಾಗ ಗುರುತಿಸಲಾಗುತ್ತದೆ. ಆದರೆ, ಇಲ್ಲಿ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ನಾಲ್ಕು ಮನೆಗಳ ಕುಟುಂಬಗಳು ವಾಸವಾಗಿವೆ. ಇನ್ನುಳಿದ ಕುಟುಂಬಗಳ ಮನೆ ಖಾಲಿ ಇವೆ. ಪಕ್ಕದ ಇರುಳಿಗ ಕಾಲನಿ ಸೇರಿವೆ ಎನ್ನಲಾಗಿದೆ. 

ಆದರೆ, ನಿಖರವಾಗಿ ತಿಳಿಯುತ್ತಿಲ್ಲ. ವಾಸಿಸುವ ಜಾಗ ಸರ್ಕಾರದ್ದೇ ಆಗಿದ್ದರೆ ಕೂಡಲೇ ಹದ್ದುಬಸ್ತ್ ಗುರುತಿಸಿ ಮನೆಗಳಿಗೆ ಹಕ್ಕುಪತ್ರ ನೀಡಲು ಕ್ರಮವಹಿಸಲಾಗುತ್ತದೆ. ಖಾಸಗಿ ಜಾಗ ಆಗಿದ್ದಲ್ಲಿ ಬೇರೆ ಸರ್ಕಾರಿ ಜಾಗ ಗುರ್ತಿಸಿ ಅಗತ್ಯ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು ಪಿಡಿಒ ಡಿ.ಎಲ್. ಮಾದೇಗೌಡಗೆ ವರದಿ ನೀಡಲು ತಿಳಿಸಲಾಗಿದೆ ಎಂದರು.