ಜಿಲ್ಲೆ

ಹಸಿರು ಉಸಿರಾದರೆ ಬದುಕು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಅಭಿಮತ

ಗಂಗಾಧರ ಬಿ ವಿ

ರಾಮನಗರ
ಹಸಿರು ಉಸಿರಾದಾಗ ಮಾತ್ರ ಆರೋಗ್ಯವಂತರಾಗಿ ಬದುಕಲು ಸಾಧ್ಯ ಎಂದು ಶಾಸಕ ಎಚ್.ಎ.ಇಕ್ಬಾಲ್ ಹುಸೇನ್ ಹೇಳಿದರು.
ತಾಲೂಕಿನ ಮಾದಾಪುರ ಸಮೀಪದ ರಾಮದೇವರಬೆಟ್ಟ ಅರಣ್ಯದಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯಿಂದ  ಹಮ್ಮಿಕೊಂಡಿದ್ದ ಗಿಡ ನೆಡುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮಗಳು ಪರಿಸರ ದಿನಕ್ಕೆ ಸೀಮಿತವಾಗದೆ, ನಿರಂತರವಾಗಿರಬೇಕು. ಹಸಿರಿಲ್ಲದಿದ್ದರೆ ನಮಗೆ ಬದುಕುವುದು ಕಷ್ಟ. ಗಿಡ-ಮರಗಳು ಉಸಿರು ಕೊಟ್ಟರಷ್ಟೇ ಬದುಕಲು ಸಾಧ್ಯ. ನಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಹಾಗೆ ಪ್ರಕೃತಿ ರಕ್ಷಣೆಯೂ ನಮ್ಮ ಕರ್ತವ್ಯವಾಗಿದೆ ಎಂದರು. 


ಟೊಯೊಟಾ ಸಂಸ್ಥೆ ಉತ್ತಮ ಪರಿಸರ ಕಾಳಜಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಪರಿಸರ ಸಂರಕ್ಷಣೆಗೆ ಮಹತ್ತರ ಕೊಡುಗೆ ನೀಡುತ್ತಾ ಬಂದಿದೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ಮಾತನಾಡಿ, ರಾಮದೇವರಬೆಟ್ಟದಲ್ಲಿ ವಿಶೇಷ ಪ್ರಕೃತಿ ವನಸಿರಿ ಸೇರಿ ಔಷಧ ಸಸ್ಯಗಳಿವೆ. ಇದು ರಣಹದ್ದು ವನ್ಯಜೀವಿಧಾಮವಾಗಿದ್ದು, ರಣಹದ್ದು ಸಂತಾನೋತ್ಪತ್ತಿ ಕೆಂದ್ರವಾಗಿದೆ. ಇತ್ತೀಚೆಗೆ ಹದ್ದುಗಳು ಮರಿಗಳಿಗೆ ಜನ್ಮನೀಡಿ, ಸಂತಾನೋತ್ಪತ್ತಿ ಹೆಚ್ಚಿದೆ. ಬೆಟ್ಟದಲ್ಲಿ ಕಿರು ಟ್ರಕ್ಕಿಂಗ್ ಮಾಡಬಹುದಾಗಿದ್ದು, ಅರಣ್ಯ ಇಲಾಖೆ ಬೆಟ್ಟದಲ್ಲಿ ಸಸ್ಯಸಂಪತ್ತು ಬೆಳೆಸುತ್ತಿದೆ ಎಂದರು. 


ಟೊಯೊಟಾ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಮಾತನಾಡಿ, ಸಂಸ್ಥೆ ಪರಿಸರ ಸಂರಕ್ಷಣೆಗೆ ವಿಶೇಷ ಒತ್ತು ನೀಡುತ್ತಾ ಬಂದಿದೆ. ಪರಿಸರ ಸಮೃದ್ಧ ಭವಿಷ್ಯ ರೂಪಿಸುವಲ್ಲಿ ಪ್ರಯತ್ನಿಸುತ್ತಿದೆ. ಸಂಸ್ಥೆ ಮಿಯಾವಾಕಿ ಮಾದರಿಯಲ್ಲಿ ಅರಣ್ಯೀಕರಣ ವಿಸ್ತರಣಕ್ಕೆ ಒಳಗೆ ಮತ್ತು ಹೊರಗೆ ಸಾಮೂಹಿಕ ನೆಡುತೋಪು ಚಟುವಟಿಕೆಗಳನ್ನು ಉತ್ತೇಜಿಸುವ ಗ್ರೀನ್ ವೇವ್ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ. ಸಂಸ್ಥೆ ಆವರಣದಲ್ಲಿ 112 ಎಕರೆಯಲ್ಲಿ 700 ಜಾತಿಯ 3,28,000 ಗಿಡ ನೆಟ್ಟಿದೆ ಎಂದರು.

ರಾಮದೇವರಬೆಟ್ಟ ಅರಣ್ಯ ಪ್ರದೇಶದಲ್ಲಿ 250ಕ್ಕೂ ಹೆಚ್ಚಿನ ಗಿಡ ನೆಡಲಾಗುತ್ತಿದ್ದು, 1760ಕ್ಕೂ ಹೆಚ್ಚಿನ ಉದ್ಯೋಗಿಗಳು ಸಂಸ್ಥೆೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇದರ ಜತೆಗೆ ಶಿಕ್ಷಣ, ಪರಿಸರ, ರಸ್ತೆ ಸುರಕ್ಷತೆ, ಕೌಶಲಾಭಿವೃದ್ಧಿ ವಿಪತ್ತು ನಿರ್ವಹಣೆ ಮತ್ತು ವಿಶೇಷ ಮಕ್ಕಳಿಗೆ ಬೆಂಬಲ ನೀಡುವ 26 ವಿಶೇಷ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದೆ ಎಂದರು.

ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ನಿಜಾಮುದ್ದೀನ್, ಮಾಯಗಾನಹಳ್ಳಿ ಗ್ರಾಪಂ ಅಧ್ಯಕ್ಷ ರಂಜಿತ್, ಟೊಯೊಟಾ ಸಂಸ್ಥೆಯ ಶಂಕರ್, ಶೇಖರ್, ವಲಯ ಅರಣ್ಯಾಧಿಕಾರಿ ದಿನೇಶ್, ಉಪ ವಲಯ ಅರಣ್ಯಾಧಿಕಾರಿ ಕುಮಾರ್, ಗ್ರಾಪಂ ಸದಸ್ಯ ಶ್ರೀನಿವಾಸಮೂರ್ತಿ, ಮಾಜಿ ಸದಸ್ಯ ಪರಮಶಿವಯ್ಯ ಇದ್ದರು.

ಸಹಾಯಕ್ಕೆ  ಮನವಿ
ಸಂಸ್ಥೆ ಸಮಾಜಮುಖಿಯಾಗಿ ಹೆಜ್ಜೆ ಇಟ್ಟಿದ್ದು, ರಾಮನಗರ ವಿಧಾನಸಭಾ ಕ್ಷೇತ್ರದ ನಿರುದ್ಯೋಗಿ ಯುವಕರಿಗೆ ಕೆಲಸ, ಶಾಲೆಗಳಿಗೆ ಕಟ್ಟಡ, ಶೌಚಗೃಹ, ಲೇಖನ ಸಾಮಗ್ರಿ, ಹೆಚ್ಚಿನ ಸೌಕರ್ಯವಿರುವ ಬಸ್ ನಿಲ್ದಾಣ, ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಮತ್ತಷ್ಟು ಒತ್ತು ನೀಡಿ, ಸಹಾಯಹಸ್ತ ಚಾಚಬೇಕು ಎಂದು ಸಂಸ್ಥೆಯ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರಲ್ಲಿ ಶಾಸಕರು ಮನವಿ ಮಾಡಿದರು.