ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಬೆಂಗಳೂರು- ಮೈಸೂರು ನಡುವಿನ ದಶಪಥ ರಸ್ತೆ ಸಂಚಾರಕ್ಕೆ ಮಂಗಳವಾರದಿಂದ ಟೋಲ್ ಸಂಗ್ರಹ ಆರಂಭಗೊಂಡಿದೆ. ಸರ್ವೀಸ್ ರಸ್ತೆ ಸೇರಿ ಹಲವು ಕಾಮಗಾರಿ ಮುಗಿಯದೇ ಟೋಲ್ ಸಂಗ್ರಹ ಆರಂಭಿಸಿರುವುದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗುತ್ತಿದೆ. ಈ ಮಧ್ಯೆ ರಸ್ತೆಯು ಅಪಘಾತ ಹಾಗೂ ದರೋಡೆಗೆ ಹಾಟ್‌ಸ್ಪಾಟ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಸ್ತೆಯ ಒಂದಿಷ್ಟು ಭಾಗ ಹೊರತುಪಡಿಸಿ ಬಹುಪಾಲು ಮುಕ್ತಾಯಗೊಂಡಿದೆ. ಮದ್ದೂರು ಹೊರತುಪಡಿಸಿ ಉಳಿದ ಕಡೆ ನಗರದಿಂದ ಹೊರವಲಯದಲ್ಲಿ ಹೋಗಿರುವ ಈ ರಸ್ತೆ ನೋಡಲು ಆಕರ್ಷಕವಾಗಿದ್ದು, ಅಷ್ಟೇ ಅಪಾಯಕಾರಿಯಾಗಿದೆ. ವಾಹನ ಸವಾರರು ಕೊಂಚ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ನಡುವೆ ರಸ್ತೆ ಹಾದು ಹೋಗುವ ಚನ್ನಪಟ್ಟಣದ ಕೆಲ ಭಾಗಗಳು ಅಪಘಾತದ ಹಾಟ್‌ಸ್ಪಾಟ್ ಎನಿಸಿವೆ. ಕಣ್ವ ಬಳಿಯ ಲಂಬಾಣಿ ತಾಂಡಾ, ದೇವರಹೊಸಹಳ್ಳಿ, ತಿಟ್ಟಮಾರನಹಳ್ಳಿ, ಬೈರಾಪಟ್ಟಣ ಸೇರಿ ಹಲವೆಡೆ ಈಗಾಗಲೇ ಅಪಘಾತದಿಂದ ಸಾಕಷ್ಟು ಸಾವು-ನೋವುಗಳಾಗಿವೆ.
ಟೋಲ್ ಸಂಗ್ರಹ ಆರಂಭವಾದ ಮಂಗಳವಾರವೂ ತಾಲೂಕು ವ್ಯಾಪ್ತಿಯಲ್ಲಿ ನಡೆದ ಅಪಘಾತ ಇದಕ್ಕೆ ಉದಾಹರಣೆ. ಬೆಂಗಳೂರಿನಿಂದ ಮೈಸೂರು ಕಡೆ ತೆರಳುತ್ತಿದ್ದ ಕಾರೊಂದರ ಟೈರ್ ಸ್ಫೋಟಗೊಂಡು ಅಪಘಾತ ಸಂಭವಿಸಿದೆ. ಆನಂದ್ ಆರಾಧ್ಯ (38) ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಲೂಕಿನ ಲಂಬಾಣಿ ತಾಂಡಾ ಬಳಿ ಮೈಸೂರು ಕಡೆ ಅತೀ ವೇಗವಾಗಿ ಹೋಗುತ್ತಿದ್ದ ಕಾರಿನ ಟೈರ್ ಸ್ಫೋಟಗೊಂಡು ಕಾರು ನಿಯಂತ್ರಣಕ್ಕೆ ಸಿಗದೆ ಅಪಘಾತ ಸಂಭವಿಸಿದೆ. ಇದಷ್ಟೇ ಅಲ್ಲದೇ ಪ್ರತಿದಿನ ತಾಲೂಕು ವ್ಯಾಪ್ತಿಯ ಈ ರಸ್ತೆಯಲ್ಲಿ ಸಣ್ಣಪುಟ್ಟ ಅಪಘಾತಗಳು ಸಾಮಾನ್ಯ ಎನಿಸಿವೆ.
ರಾಬರಿಗಳಿಗೇನೂ ಕಡಿಮೆ ಇಲ್ಲ
ಈ ರಸ್ತೆ ಕೇವಲ ಅಪಘಾತವಷ್ಟೇ ಅಲ್ಲದೆ ದರೋಡೆಗೂ ಕುಖ್ಯಾತಿ ಪಡೆಯುತ್ತಿದೆ. ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ ಹಲವು ಪ್ರಕರಣಗಳು ನಡೆದಿವೆ. ಕೆಲವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಯಾವ ಉಸಾಬರಿ ಬೇಡ ಎಂದು ಮರೆಯಾದ ಪ್ರಕರಣಗಳೇ ಹೆಚ್ಚಾಗಿವೆ.
ಕಾರು ಕೆಟ್ಟು ಹೋದ ಪರಿಣಾಮ ಟೋಯಿಂಗ್ ವಾಹನಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ಇಬ್ಬರು ದರೋಡೆಕೋರರು ಮಾರಕಾಸ ತೋರಿಸಿ ಬೆದರಿಸಿ, 58 ಗ್ರಾಂ ಚಿನ್ನಾಭರಣ ಹಾಗೂ 8 ಸಾವಿರ ರೂ. ಕಸಿದು ಪರಾರಿಯಾಗಿರುವುದು ದೇವಹೊಸಹಳ್ಳಿ-ತಿಟ್ಟಮಾರನಹಳ್ಳಿ ನಡುವಿನ ಬೈಪಾಸ್ ರಸ್ತೆಯಲ್ಲಿ ಭಾನುವಾರವಷ್ಟೇ ನಡೆದಿದೆ.
ಬೆಂಗಳೂರಿನ ಲೋಹಿತ್ ಮತ್ತು ಕಾವ್ಯ ದಂಪತಿ ಸ್ನೇಹಿತ ನವೀನ್ ಮತ್ತು ಸೌಜನ್ಯ ದಂಪತಿಯನ್ನು ಮೈಸೂರಿಗೆ ಬಿಡಲು ಕಾರಿನಲ್ಲಿ ಹೋಗುತ್ತಿರುವಾಗ ಮಾರ್ಗಮಧ್ಯೆ ಕಾರು ಕೆಟ್ಟುಹೋಗಿದೆ. ತಕ್ಷಣ ಟೋಯಿಂಗ್ ವಾಹನಕ್ಕೆ ಕರೆ ಮಾಡಿ ವಾಹನ ಬರುವವರೆಗೆ ಕಾಯುತ್ತಾ ನಿಂತಿದ್ದಾರೆ. ಈ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಸೌಜನ್ಯ ಮತ್ತು ನವೀನ್ ಮೈಮೇಲಿದ್ದ 58 ಗ್ರಾಂ ತೂಕದ ಚಿನ್ನಾಭರಣ ಹಾಗೂ ಲೋಹಿತ್ ಬಳಿ ಇದ್ದ 8 ಸಾವಿರ ರೂ. ಕಸಿದು ಪರಾರಿಯಾಗಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ರಸ್ತೆ ಅಪಘಾತ ಹಾಗೂ ದರೋಡೆಯ ಹಾಟ್‌ಸ್ಪಾಟ್ ಆಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಂಡು ಸುಂದರ ರಸ್ತೆಗೆ ಕಪ್ಪುಚುಕ್ಕಿ ಬೀಳದಂತೆ ಕ್ರಮ ಕೈಗೊಳ್ಳಬೇಕಿದೆ.