ಶಿವಲಿಂಗಯ್ಯ ವಿಭೂತಿಕೆರೆ
ಕೈಲಾಂಚ : ಸುತ್ತಲೂ ಹೆಬ್ಬಂಡೆಗಳ ಸಾಲು, ಹಚ್ಚ ಹಸಿರಿನ ಕಾನನ, ದಕ್ಷಿಣ ಕಾಶಿ, ಚಾರಣ ಪ್ರಿಯರ ಸ್ವರ್ಗ, ಒಮ್ಮೆ ಬಂದರೆ ಮತ್ತೆ ಬರಬೇಕೆನ್ನುವ ಕ್ಷೇತ್ರ, ಸುಂದರ ಪ್ರಕೃತಿಯ ಮಡಿಲಲ್ಲಿರುವ ಪುಣ್ಯ ಕ್ಷೇತ್ರವೇ ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣ ಸಿದ್ದೇಶ್ವರ ಬೆಟ್ಟ.
ಈ ಬೆಟ್ಟ ಪುರಾಣ ಪ್ರಸಿದ್ಧ ಹಾಗೂ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶಕ್ತಿ ಕೇಂದ್ರವಾಗಿದೆ. ಜಗದ್ಗುರು ರೇವಣಸಿದ್ದರು ಲೋಕ ಸಂಚಾರ ಮಾಡುತ್ತಾ ಅವ್ವೇರಹಳ್ಳಿಯ ಬೆಟ್ಟದ ಸಾಲಿಗೆ ಬಂದು ಸುಮಾರು 700 ವರ್ಷ ತಪಸ್ಸು ಮಾಡಿ ಇಲ್ಲಿನ ಪರ್ವತ ಪ್ರದೇಶವನ್ನು ಪುನೀತಗೊಳಿಸಿದ ಮಹಾಮಹಿಮರು. ಅಂದಿನಿಂದ ಬೆಟ್ಟವು ರೇವಣಸಿದ್ದೇಶ್ವರ ಬೆಟ್ಟವೆಂದೇ ಪ್ರಸಿದ್ಧಿಯಾಗಿದೆ. ಭಕ್ತರ ಕಷ್ಟ-ಸುಖಗಳಿಗೆ ಸ್ಪಂದಿಸಿ ಅವರ ಇಷ್ಟಾರ್ಥಗಳನ್ನು ಈಡೇರಿಸುವ ಈ ಕ್ಷೇತ್ರ ರಾಜ್ಯದ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ರಾಮನಗರ ಮಾತ್ರವಲ್ಲದೆ ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸುತ್ತಾರೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲೂ ಭಕ್ತರಿದ್ದಾರೆ. ಪಾಂಡವರು ಅಜ್ಞಾತ ವಾಸದ ಕಾಲದಲ್ಲಿ ಬೆಟ್ಟದ ಗಿರಿ ಕಂದರಗಳಲ್ಲಿ ನೆಲೆಸಿದ್ದರು ಎಂಬ ಪ್ರತಿತಿ ಇದೆ. ಇದರ ಕುರುಹಾಗಿ ಧರ್ಮರಾಯ ಭೀಮನಿಂದ ಪ್ರತಿಷ್ಠಾಪಿಸಲ್ಪಟ್ಟ ಮರಳಸಿದ್ದೇಶ್ವರ, ಭೀಮೇಶ್ವರ ದೇವಾಲಯಗಳನ್ನು ಇಲ್ಲಿ ಕಾಣಬಹುದು.
ಕ್ಷೇತ್ರದ ಪ್ರಮುಖ ಸ್ಥಳಗಳು
ಬೆಟ್ಟದ ತಳ ಭಾಗದಲ್ಲಿ ರೇಣುಕಾಂಬ, ಬಸವೇಶ್ವರ ದೇವಾಲಯ, ದಾಸೋಹ ಮಠ, ದಾಸೋಹ ಮಠದ ಆವರಣದಲ್ಲಿ ಮಠದ ವತಿಯಿಂದ ನಿರ್ಮಿಸಿರುವ ರೇವಣಸಿದ್ದೇಶ್ವರರ ಆಕರ್ಷಕ ಮೂರ್ತಿ, ಬೆಟ್ಟದ ಮಧ್ಯ ಭಾಗದಲ್ಲಿ ಪಾಂಡವರ ವನವಾಸ ಕಾಲದಲ್ಲಿ ಭೀಮನಿಂದ ಪ್ರತಿಷ್ಠಾಪನೆಗೊಂಡ ಮರುಳಸಿದ್ದೇಶ್ವರ, ಪಕ್ಕದಲ್ಲೇ ವೀರಭದ್ರಸ್ವಾಮಿ, ಅದರ ಪಕ್ಕದಲ್ಲಿ ಭೀಮೇಶ್ವರ, ಕಲ್ಯಾಣಿ, ಬೆಟ್ಟ ಏರುವಾಗ ಮಧ್ಯೆ ಗಣೇಶ ದೇವಾಲಯ, ಬೆಟ್ಟದ ಮೇಲಿರುವ ಎರಡು ಕಲ್ಯಾಣಿಗಳು, ತುತ್ತ ತುದಿಯಲ್ಲಿರುವ ದೊಡ್ಡ ಗಂಟೆ, ಬೆಟ್ಟದ ತುದಿಯಲ್ಲಿ ಎರಡು ಶಿಖರಗಳು, ಎತ್ತರದ ಏಕಶಿಲಾ ಬೆಟ್ಟ, ಬೆಟ್ಟದ ಮೇಲ್ಭಾಗದಲ್ಲಿ ರೇವಣಸಿದ್ದೇಶ್ವರ ದೇವಾಲಯ, ಪಕ್ಕದಲ್ಲಿ ಕಲ್ಯಾಣಿ ಇವೆ. ಬೆಟ್ಟದ ತುದಿ ಏರಲು 800ಕ್ಕೂ ಹೆಚ್ಚು ಮೆಟ್ಟಿಲಗಳಿವೆ. ಭಕ್ತರು ಬಿಸಿಲಿನಿಂದ ರಕ್ಷಣೆ ಪಡೆಯಲು ಮೆಟ್ಟಿಲು ಆರಂಭದಿಂದ ತುದಿಯವರೆಗೂ ಶೀಟುಗಳನ್ನು ಹಾಕಲಾಗಿದೆ.
ಬುದ್ಧ ಪೂರ್ಣಿಮೆಯಂದು ರಥೋತ್ಸವ
ಪ್ರತಿ ವರ್ಷ ಬುದ್ಧ ಪೂರ್ಣಿಮೆ ದಿನದಂದು ವೈಭವೋಪೇತವಾಗಿ ಸಂಭ್ರಮ ಸಡಗರದಿಂದ ಮಹಾರಥೋತ್ಸವ ನಡೆಯುತ್ತದೆ. ಈ ಬಾರಿ ಮೇ 5ರ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಬಸವೇಶ್ವರಸ್ವಾಮಿಗೆ ಅಗ್ನಿಕೊಂಡ, ಮಧ್ಯಾಹ್ನ 12 ಗಂಟೆಗೆ ರೇವಣಸಿದ್ದೇಶ್ವರರ ಮಹಾರಥೋತ್ಸವ, ರಾತ್ರಿ ಪಲ್ಲಕ್ಕಿ ಉತ್ಸವ, ಮೇ 6ರ ಶನಿವಾರ ಬೆಳಗ್ಗೆ ಹಗಲು ಗಿರಿ ಪ್ರದಕ್ಷಿಣೆ, ರಾತ್ರಿ ಅಡ್ಡಪಲ್ಲಕ್ಕಿ ಉತ್ಸವ, ಮೇ 7ರ ಭಾನುವಾರ ರೇಣುಕಾಂಬಾ ಅಮ್ಮನವರ ರಥೋತ್ಸವ ನಡೆಯಲಿದೆ.
ಕ್ಷೇತ್ರದ ಮತ್ತೊಂದು ವಿಶೇಷ
ದೆವ್ವ, ಭೂತದ ಪೀಡೆಗೊಳಗಾದವರು ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರೆ ಸಮಸ್ಯೆಯಿಂದ ಹೊರಬರಬಹುದು ಹಾಗೂ ದೆವ್ವದ ಹೆಸರಿನಲ್ಲಿ ಕಲ್ಲಿನ ಮೇಲೆ ಚಿತ್ರ ಹೊಯಿಸಿದರೆ ಮತ್ತೆ ದೆವ್ವಗಳು ಬರುವುದಿಲ್ಲವೆಂಬುದು ಜನರ ನಂಬಿಕೆ. ಈಗಲೂ ಇಲ್ಲಿ ಕಲ್ಲಿನ ಸೇವೆ ನಡೆಯುತ್ತಿದ್ದು, ಇಲ್ಲಿರುವ ಸಾವಿರಾರು ಕಲ್ಲುಗಳು ಕ್ಷೇತ್ರದ ಮಹತ್ವ ಸಾರಿ ಹೇಳುತ್ತಿವೆ.
ಗ್ರಾಮ ದೇವತೆಗಳ ಪೂಜೆ
ಜಿಲ್ಲೆಯ ಬಹುತೇಕ ಗ್ರಾಮಗಳು ಸೇರಿ ಪಕ್ಕದ ಮಂಡ್ಯ, ಮೈಸೂರು, ಹಾಸನ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತಿತರ ಜಿಲ್ಲೆಗಳ ಗ್ರಾಮಗಳಲ್ಲಿ ಗ್ರಾಮದ ಊರ ಹಬ್ಬಕ್ಕೂ ಮುನ್ನ ಅವ್ವೇರಹಳ್ಳಿಗೆ ಬಂದು ದೇವರನ್ನು ಪೂಜಿಸಿಕೊಂಡು ಹೋಗುವುದು ಇಂದಿಗೂ ನಡೆಯುತ್ತಿದೆ.
ಜಾತ್ರಾ ಸಮಯದಲ್ಲಿ ಮತ್ತು ಪ್ರತಿದಿನ ಕ್ಷೇತ್ರಕ್ಕೆ ಬರುವ ಭಕ್ತರಿಗೆ ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ವತಿಯಿಂದ ನಿತ್ಯ ದಾಸೋಹ ಭವನದಲ್ಲಿ ಮತ್ತು ಬೆಟ್ಟದ ದಾಸೋಹ ಮಠದಲ್ಲಿ ಮುದ್ದುಬಸವಲಿಂಗರಾಜ ಸ್ವಾಮಿಗಳು, ರಾಜಶೇಖರ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ಮಠದಲ್ಲಿ, ಅಕ್ಕಪಕ್ಕದ ಗ್ರಾಮಸ್ಥರು ನಡೆಸುವ ಅರವಂಟಿಗೆಗಳಲ್ಲಿ ದಾಸೋಹ ವ್ಯವಸ್ಥೆ ಇರುತ್ತದೆ. ಭಕ್ತರಿಗೆ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಸೌಲಭ್ಯ ವ್ಯವಸ್ಥೆ ಮಾಡಿಕೊಡುತ್ತಿದೆ.
ಎಸ್.ಜೆ. ಯೇಸುರಾಜ್, ಕಾರ್ಯನಿರ್ವಾಹಕ ಅಧಿಕಾರಿ, ರೇವಣಸಿದ್ದೇಶ್ವರ ದೇವಾಲಯ, ಅವ್ವೇರಹಳ್ಳಿ.
ಅವ್ವೇರಹಳ್ಳಿ ರೇವಣಸಿದ್ದೇಶ್ವರರ ತಪೋ ಭೂಮಿಯಲ್ಲಿರುವ ನಾವೇ ಪುಣ್ಯವಂತರು. ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಹೋಗಲಾಡಿಸಿ ಎಲ್ಲರಿಗೂ ಶ್ರೀರಕ್ಷೆ ನೀಡಿ ನಮ್ಮನ್ನು ಹರಸುತ್ತಿದ್ದಾರೆ. ಇಂತಹ ಮಹಾ ಮಹಿಮರ ರಥೋತ್ಸವದ ಪುಣ್ಯದಿನ ಇಂದು ಸರ್ವರಿಗೂ ರೇವಣಸಿದ್ದೇಶ್ವರ ಒಳಿತು ಮಾಡಲಿ ನಮ್ಮೆಲ್ಲರಿಗೂ ಅವರ ಆಶೀರ್ವಾದ ಸಿಗುವಂತಾಗಲಿ.
ಲಕ್ಷ್ಮಣ್, ಮಾಲೀಕರು, ಗಣೇಶ್ ಜುವೆಲ್ಲರ್ಸ್, ರಾಮನಗರ
ತಲುಪುವುದು ಹೇಗೆ?
ಅವ್ವೇರಹಳ್ಳಿ ಬೆಟ್ಟ ಬೆಂಗಳೂರಿನಿಂದ 65 ಕಿ.ಮೀ., ಮೈಸೂರಿನಿಂದ 95 ಕಿ.ಮೀ. ರಾಮನಗರದಿಂದ 13 ಕಿ.ಮೀ., ಕನಕಪುರದಿಂದ 18 ಕಿ.ಮೀ. ಹಾಗೂ ಚನ್ನಪಟ್ಟಣದಿಂದ 15 ಕಿ.ಮೀ. ಅಂತರದಲ್ಲಿದೆ. ರಾಮನಗರ, ಚನ್ನಪಟ್ಟಣದಿಂದ ಬಸ್ ವ್ಯವಸ್ಥೆ ಇದೆ.