ಕಾಡುಪ್ರಾಣಿ ನಿಯಂತ್ರಣಕ್ಕೆ ಹಲವು ಕ್ರಮ ಬೀಳ್ಕೊಡು ಕಾರ್ಯಕ್ರಮದಲ್ಲಿ ಅಭಿನಂದನೆ
ನಗರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಡಿಸಿಎಫ್ ವಿ. ದೇವರಾಜು ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು ಹಾಗೂ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ. ರಾಮಕೃಷ್ಣಪ್ಪ ಅವರನ್ನು ಸ್ವಾಗತಿಸಲಾಯಿತು.
ರಾಮನಗರ
ರಾಮನಗರ ವಲಯ ಅರಣ್ಯಾಧಿಕಾರಿ ದಿನೇಶ್ ಮಾತನಾಡಿ, ದೇವರಾಜು ಅವರು ಕಳೆದ ಎರಡೂವರೆ ವರ್ಷದಿಂದ ಉತ್ತಮ ಸೇವೆ ನೀಡಿ ಜನಮನ ಗೆದ್ದಿದ್ದಾರೆ. ಚಿರತೆ, ಆನೆಗಳ ಉಪಟಳ ನಿಯಂತ್ರಿಸಲು ಹಲವಾರು ಕ್ರಮ ಕೈಗೊಂಡಿದ್ದಾರೆ. ಕೆಳಗಿನ ಸಿಬ್ಬಂದಿಗೆ ಯಾವುದೇ ರೀತಿಯ ಕಿರಿಕಿರಿ ಉಂಟುಮಾಡದೆ ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಮುಂದಿನ ವೃತ್ತಿ ಬದುಕಿನಲ್ಲಿ ಮತ್ತಷ್ಟು ಯಶಸ್ಸು ಸಿಗಲಿ ಎಂದು ಹಾರೈಸಿದರು.
ನಿರ್ಗಮಿತ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ದೇವರಾಜ್ ಮಾತನಾಡಿ, ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ, ಕಾಡು ಪ್ರಾಣಿಗಳ ರಕ್ಷಣೆ, ಅರಣ್ಯ ರಕ್ಷಣೆ, ಅರಣ್ಯ ಬೆಳೆಸುವುದೇ ಇಲಾಖೆಯ ಕರ್ತವ್ಯವಾಗಿದೆ. ಪರಸ್ಪರ ಅಧಿಕಾರಿ, ಸಿಬ್ಬಂದಿಗಳ ನಡುವೆ ಸೌಹಾರ್ಧತೆ ಇದ್ದಾಗ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬಹುದು. ಉತ್ತಮ ಸೇವೆ ನೀಡಿದ್ದೇನೆ ಎಂಬ ತೃಪ್ತಿ ನನಗಿದೆ ಎಂದರು.
ಜಿಲ್ಲೆಯ ರೈತರು, ಮಾಧ್ಯಮ ಮಿತ್ರರು, ಮಾತೃ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದೀರಿ. ಅದೇರೀತಿ ನೂತನವಾಗಿ ಜಿಲ್ಲೆಗೆ ಆಗಮಿಸಿರುವ ಎಂ. ರಾಮಕೃಷ್ಣಪ್ಪ ಅವರಿಗೂ ಸಹಕಾರ ನೀಡುವಂತೆ ಮನವಿ ಮಾಡಿದರು.
ಅಧಿಕಾರ ಸ್ವೀಕರಿಸಿದ ಎಂ. ರಾಮಕೃಷ್ಣಪ್ಪ, ರಾಮನಗರ ಜಿಲ್ಲಾ ಅರಣ್ಯ ವಿಭಾಗದಲ್ಲಿನ ಮೂರುವರೆ ವರ್ಷ ಅರಣ್ಯಸಂರಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಬೇರೆಡೆ ಹೋಗಿದ್ದೆ. ಮತ್ತೆ ರಾಮನಗರ ಜಿಲ್ಲೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಬಂದಿದ್ದೇನೆ. ಎಲ್ಲರ ಪರಿಚಯ ಇರುವ ಕಾರಣ ಉತ್ತಮ ಸಹಕಾರ ಸಿಗುತ್ತದೆ ಎಂಬ ಭರವಸೆ ನನಗಿದೆ ಎಂದರು.
ಅರಣ್ಯ ಅಧಿಕಾರಿಗಳಾದ ಗಣೇಶ್, ಎ. ಕಿರಣ್‌ಕುಮಾರ್, ಎ.ಎಲ್. ದಾಳೇಶ್, ಜಗದೀಶ್‌ಗೌಡ, ಆಶಾ ಎಸ್. ಕಾಸರಿ, ವ್ಯವಸ್ಥಾಪಕ ರಘು, ಉಪ ವಲಯ ಅರಣ್ಯಾಧಿಕಾರಿಗಳಾದ ವಾಸು, ಶ್ರೀಧರ್, ರವಿ, ಬೈರವ, ಕುಮಾರ, ಮಿಥುನ್ ಮುಂತಾದವರಿದ್ದರು.