ಬಿಡದಿ
ಒಂದೇ ನೊಂದಣಿಯ ನಂಬರ್ ಪ್ಲೇಟ್ ಬಳಸಿ ಓಡಾಡುತ್ತಿದ್ದ ಖಾಸಗಿ ಬಸ್ ಅನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ರಾಮನಗರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಂಗಳವಾರ ತಪಾಸಣೆಯಲ್ಲಿ ತೊಡಗಿದ್ದಾಗ ಕೆಎ-06-ಬಿ-5766 ನಂಬರಿನ ಬಸ್ ತಡೆದು ತಪಾಸಣೆ ನಡೆಸಿದಾಗ ಚಾಲಕ ಯಾವುದೇ ದಾಖಲೆಗಳನ್ನು ನೀಡಲಿಲ್ಲ. ಅನುಮಾನ ಬಂದು ವಿಚಾರಣೆ ನಡೆಸಿದಾಗ ಇದೇ
ನಂಬರ್‌ನ ಮತ್ತೊಂದು ಬಸ್ ರಾಮನಗರ-ಮಾಗಡಿ ಮುಖ್ಯರಸ್ತೆಯ ಗೊಲ್ಲರದೊಡ್ಡಿ ಬಳಿ ನಿಂತಿರುವುದು ತಿಳಿದುಬಂದಿದೆ.
ಗೊಲ್ಲರದೊಡ್ಡಿಗೆ ಹೋಗಿ ಪರಿಶೀಲಿಸಿದಾಗ ಅಲ್ಲಿದ್ದ ಬಸ್ ನಂಬರ್ ಕೂಡ ಒಂದೇ ಆಗಿತ್ತು. ಎರಡೂ ವಾಹನಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ಕಚೇರಿಗೆ ತಂದು ಪರಿಶೀಲಿಸಿದಾಗ ಸತ್ಯ ಬಯಲಾಗಿದೆ.
ಈ ವಾಹನಗಳು ನೋಂದಣಿಯಾದ ತುಮಕೂರು ಸಾರಿಗೆ ಇಲಾಖೆ ಕಚೇರಿಯಿಂದ ನಮೂನೆ 20 ಮತ್ತು 21ನ್ನು ತರಿಸಿ ಪರಿಶೀಲನೆ ಮಾಡಲಾಗಿ ಎರಡು ವಾಹನಗಳ ಚಾರ್ಸಿ ನಂಬರ್‌ಗಳನ್ನು ಟ್ಯಾಂಪರ್ ಮಾಡಿದ್ದು ಇಂಜಿನ್ ನಂಬರ್ ತಾಳೆಯಾಗಲಿಲ್ಲ. ವಿಚಾರಣೆ ಮಾಡಿ ಸದರಿ ಬಸ್ ಮಾಲೀಕ ಮಂಡ್ಯ ಮೂಲದ ಮಂಗಲಾ ಅವರಿಗೆ ನೋಟಿಸ್ ನೀಡಿದ ಸಾರಿಗೆ ಅಧಿಕಾರಿಗಳು ಅವರಿಂದ ಪ್ರಮಾಣ ಪತ್ರದ ಮೂಲಕ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ.
ಎರಡು ವಾಹನಗಳಿಗೆ ಒಂದೇ ನಂಬರ್ ಹಾಕಿಕೊಂಡು ಸರ್ಕಾರಕ್ಕೆ ಮೋಸ ಮಾಡಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿ ಶಿವಕುಮಾರ್ ಅವರು ಬಿಡದಿ ಠಾಣೆಯಲ್ಲಿ ಬಸ್ ಮಾಲೀಕರ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ.