ಜಿಲ್ಲೆ

ಪರಿಸರ ಪ್ರೇಮಿ ನಿಂಗಣ್ಣನಿಗೆ ರಾಜ್ಯೋತ್ಸವ ಪ್ರಶಸ್ತಿ

ಗಂಗಾಧರ ಬಿ ವಿ

ಗಂಗಾಧರ್ ಬೈರಾಪಟ್ಟಣ

ರಾಮನಗರ
ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸಗಳಿಗೆ ಒಂದಲ್ಲಾ ಒಂದು ದಿನ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ತಾಲೂಕಿನ ಪರಿಸರ ಪ್ರೇಮಿ ಸಾಲು ಮರದ ನಿಂಗಣ್ಣ ಅವರೇ ಸಾಕ್ಷಿ.
ತಾನು ಮಾಡುತ್ತಿರುವ ಕಾರ್ಯ ಕೇವಲ ಪರಿಸರಕ್ಕೆ ಮಾತ್ರ ಎನ್ನುತ್ತಲೇ ಸದ್ದಿಲ್ಲದೇ ಕಡು ಬಡತನದಲ್ಲೂ ಮರಗಿಡಗಳನ್ನು ಪೋಷಿಸುತ್ತಾ ಬಂದ ಅರೇಹಳ್ಳಿಯ ನಿಂಗಣ್ಣನಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಓದು ಬರಹದ ಅರಿವಿಲ್ಲದಿದ್ದರೂ ಪರಿಸರ ವಿಚಾರದಲ್ಲಿ ಸಾಧನೆ ಮಾಡಿರುವ ನಿಂಗಣ್ಣ ಅವರನ್ನು ತಡವಾದರೂ ಸರ್ಕಾರ ಗುರುತಿಸಿ ಗೌರವ ನೀಡುತ್ತಿದೆ. ಓದು ಬರಹ ಬಾರದಿದ್ದರೂ ಮನುಷ್ಯನಿಗಿಂತ ಮರಗಳೇ ವಾಸಿ ಎನ್ನುವ ಭಾವನೆ ಅವರಲ್ಲಿತ್ತು. ಇದಕ್ಕಾಗಿ ನಿಂಗಣ್ಣ ಗಿಡನೆಟ್ಟು ಅವುಗಳ ಪಾಲನೆಗೆ ನಿಂತರು.

ಪರಿಸರ ಸೇವೆಗೆ ಕುಟುಂಬ ಸಾಥ್
ದುಡಿಯಲು ಸ್ವಂತ ಜಮೀನು ಇಲ್ಲದಿದ್ದರೂ, ನೆಟ್ಟ ಗಿಡಗಳ ಪಾಲನೆ ಜವಾಬ್ದಾರಿ ಹೊತ್ತ ನಿಂಗಣ್ಣನಿಗೆ, ಪತ್ನಿ ಸಾವಿತ್ರಮ್ಮ ಸಾಥ್ ನೀಡಿ ತಮ್ಮ ಮಾಂಗಲ್ಯ ಸೇರಿ ಒಡವೆಗಳನ್ನು ನೀಡಿ, ಗಿಡಗಳಿಗೆ ನೀರು, ಗೊಬ್ಬರ ಹಾಕಲು ನೆರವಾದರು. ಇದರ ಫಲವಾಗಿ ಅರೇಹಳ್ಳಿ - ಕೂನಮುದ್ದನಹಳ್ಳಿ ರಸ್ತೆಯ ಎರಡೂ ಬದುಗಳಲ್ಲಿ ಸುಮಾರು 900 ಮರಗಳು ಬೆಳದು ನಿಂತು ದಾರಿ ಹೋಕರಿಗೆ ನೆರಳು ನೀಡುತ್ತಿವೆ. ಅರೇಹಳ್ಳಿಯ ಬಸವನಗುಡಿಯ ಗುಂಡು ತೋಪಿನಲ್ಲಿ, ಮಾವು, ಹಲಸು ಸೇರಿದಂತೆ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಟ್ಟು, ಅವುಗಳನ್ನು ಪಾಲನೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ನಿಂಗಣ್ಣನಿಗೆ ಸಾಲುಮರದ ನಿಂಗಣ್ಣ ಎಂದು ಬಿರುದು ನೀಡಿ ಗೌರವಿಸಿದ್ದರು. 2013ರಲ್ಲಿ ರಾಜ್ಯ ಪರಿಸರ ಪ್ರಶಸ್ತಿಯೂ ಲಭಿಸಿತ್ತು.

ನೀರಿಗಾಗಿ ಮರುಗಿದ್ದರು
ಸುಮಾರು 30 ವರ್ಷಗಳ ಹಿಂದೆ ಗಿಡಗಳನ್ನು ನೆಟ್ಟಾಗ, ನೀರಿಗೆ ತೊಂದರೆ ಇರಲಿಲ್ಲ. ಕಾಲ ಬದಲಾದಂತೆ ನೀರಿನ ಲಭ್ಯತೆ ಇಲ್ಲದಿದ್ದಾಗ ಸಂಪಾದಿಸುತ್ತಿದ್ದ ಹಣ ಗಿಡಗಳ ಪೋಷಣೆಗೆ ಮಾಡಿಕೊಳ್ಳುತ್ತಿದ್ದರು. ಇನ್ನು ಕೆಲವರನ್ನು ಕಾಡಿ ಬೇಡಿ, ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿಸಿದ್ದರು. ಕೆಲ ಬಾರಿ ಅವರೇ ಬಿಂದಿಗೆಗಳಲ್ಲಿ ಕೆರೆ ಕಟ್ಟೆಯಿಂದ ನೀರು ತಂದು ಗಿಡಗಳಿಗೆ ಉಣಿಸಿದ ಸಂದರ್ಭಗಳೂ ಇವೆ.

ಗಿಡಗಳ ಉಳಿವಿಗೆ ಅವಿರತ ಶ್ರಮ
ಮಳೆ ನೀರು ಸಂಪೂರ್ಣವಾಗಿ ಮರಗಳಿಗೆ ಲಭ್ಯವಾಗುವಂತೆ ಇಂಗು ಗುಂಡಿಗಳನ್ನು ತೆಗೆದು ಮಳೆ ನೀರು ಪೋಲಾಗದಂತೆ ನೋಡಿಕೊಂಡರು. ಆದರೆ, ಈ ವರ್ಷ ಮಳೆಯ ಪ್ರಮಾಣ ಕುಸಿದಿದ್ದರಿಂದ ಮಾವು, ಹಲಸು ಸೇರಿ ಹಲವು ಮರಗಳು ಜೀವ ಕಳೆದುಕೊಂಡವು. ಇದರಿಂದ ತುಂಬಾ ಚಿಂತೆಗಿಡಾಗಿದ್ದ ನಿಂಗಣ್ಣ ಅವರು ಅಧಿಕಾರಿಗಳು ಮತ್ತು ದಾನಿಗಳ ಮನೆ ಮನೆಗೆ ಸುತ್ತಿ ನೀರು ಕೊಟ್ಟು ಗಿಡ ಉಳಿಸಿಕೊಡಿ ಎಂದು ಅಂಗಲಾಚಿದ್ದರು.

ಸರ್ಕಾರ ನೆರವು ನೀಡಬೇಕಿದೆ
ಮಾಡಿದ ಸಾಲ ತೀರಿಸುವ ಸಲುವಾಗಿ ನಿಂಗಣ್ಣ ಮತ್ತು ಕುಟುಂಬ ಸ್ವಂತ ಊರು ಬಿಟ್ಟು ಅವಕಾಶ ಸಿಕ್ಕ ಕಡೆಗಳಲ್ಲಿ ಜೀವನ ನಡೆಸಲು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ನಿತ್ಯ ತನ್ನ ಜಮೀನಿನ ಕೆಲಸದ ಜತೆಗೆ ನಿಂಗಣ್ಣ ತಾನೇ ಬೆಳೆಸಿರುವ ಮರಗಳನ್ನು ಯೋಗಕ್ಷೇಮ ವಿಚಾರಿಸುವುದನ್ನು ಮರೆತಿಲ್ಲ. ಸಾಧಕನ ಸಾಧನೆ ಗುರುತಿಸುವುದು ತಡವಾದರೂ ಸರ್ಕಾರಕ್ಕೆ ಪ್ರಶಸ್ತಿಗೆ ಆಯ್ಕೆ ಮಾಡಿದ್ದು, ಜತೆಗೆ ಅವರ ಕುಟುಂಬಕ್ಕೆ ಹೆಚ್ಚಿನ ನೆರವು ನೀಡುವ ಮೂಲಕ ಕಾಳಜಿಯನ್ನು ಪ್ರದರ್ಶಿಸಬೇಕಿದೆ.

ಅನಾರೋಗ್ಯ ಕಾಡುತ್ತಿದೆ
ಸಾಲುಮರದ ನಿಂಗಣ್ಣನಿಗೆ ಈಗ 65 ವರ್ಷವಾಗಿದ್ದು, ವಯಸ್ಸಹಜವಾಗಿ ಅನಾರೋಗ್ಯ ಕಾಡುತ್ತಿದೆ. ಆಸ್ಪತ್ರೆಯ ಖರ್ಚಿಗೂ ಪರರ ಮೇಲೆ ಅವಲಂಬಿತರಾಗಿದ್ದಾರೆ. ಸರ್ಕಾರ ಈ ಹಿಂದೆ ತಮಗೆ ಜಮೀನು ಕೊಡುತ್ತೇನೆ ಎಂದು ಹೇಳಿತ್ತು. ಆದರೆ ಇನ್ನೂ ಕೊಟ್ಟಿಲ್ಲ. ಈಗಲಾದರೂ ನನಗೆ ಕೊಡಿಸಿ ಎಂದು ನಿಂಗಣ್ಣ ಕೇಳಿಕೊಳ್ಳುತ್ತಾರೆ.

ಪ್ರಶಸ್ತಿ ಬಂದಿರುವುದು ಖುಷಿ ತಂದಿದೆ. ನಿಮ್ಮೆಲ್ಲರ ಸಹಕಾರದಿಂದ ಸರ್ಕಾರ ನನ್ನನ್ನು ಗುರ್ತಿಸಿದೆ. ಇದು ಬಿಟ್ಟು ಬೇರೆನೂ ಹೇಳಲು ನಂಗೇನೂ ಗೊತ್ತಿಲ್ಲ’
ಸಾಲುಮರದ ನಿಂಗಣ್ಣ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು