ಜಿಲ್ಲೆ

ಅಭಿವೃದ್ಧಿ ಹೆಸರಲ್ಲಿ ತೆರಿಗೆ ಹಣ ಪೋಲು ಅಧಿಕಾರಿಗಳ ನಿರ್ಲಕ್ಷ್ಯ, ಗುತ್ತಿಗೆದಾರರ ಹಣದ ದಾಹಕ್ಕೆ ಕಾಮಗಾರಿ ಬಲಿ

ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ನಗರದಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಮನಸೋ ಇಚ್ಛೆ ಲೂಟಿ ಮಾಡಲಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ನಗರದಲ್ಲಿ ಹಾದುಹೋಗಿರುವ ಬೆಂಗಳೂರು - ಮೈಸೂರು ಹೆದ್ದಾರಿಯ ಅಗಲೀಕರಣ ಹಾಗೂ ಅಭಿವೃದ್ಧಿಯ ಕಾಮಗಾರಿಯನ್ನು 2018ರಲ್ಲಿ ಆರಂಭಿಸಲಾಗಿತ್ತು. ವಾಹನ ದಟ್ಟಣೆ ಹೆಚ್ಚಾಗಿದ್ದ ಕಾರಣ ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೆದ್ದಾರಿಯ ಎರಡೂ ಕಡೆ ರಸ್ತೆ ವಿಸ್ತರಣೆ, ಎರಡು ಕಡೆ ಚರಂಡಿ, ಚರಂಡಿಯ ಮೇಲುಹಾಸು, ಟೈಲ್ಸ್ ಹಾಗೂ ಗ್ರಿಲ್ ಅಳವಡಿಸಲಾಗಿತ್ತು.

ನಗರದ ಹನುಮಂತ ನಗರದಿಂದ ಚಿಕ್ಕಮಳೂರುವರೆಗೆ ಸುಮಾರು 4 ಕಿ.ಮೀ.ವರೆಗೆ ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ವತಿಯಿಂದ 28 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಹಣದಾಹಕ್ಕೆ ಈ ಕಾಮಗಾರಿ ಬಲಿಯಾಗಿದ್ದು, ಈ ಕಾಮಗಾರಿ ಕಳಪೆ ಎಂಬುದು ಬದಿಗಿರಲಿ, ಈ ಕಾಮಗಾರಿ ನಡೆದಿದೆಯೇ ಎಂಬಷ್ಟರ ಮಟ್ಟಿಗೆ ಈ ಅಭಿವೃದ್ಧಿ ಕಾಮಗಾರಿ ಗುಳುಂ ಆಗಿದೆ.

ಹಾಳಾದ ಟೈಲ್ಸ್ ಗಳು.., ಮಾಯವಾದ ಗ್ರೀಲ್ ಗಳು!
ಈ ಯೋಜನೆಯಡಿಯಲ್ಲಿ ನಗರದ ನಾಲ್ಕು ಕಿಮೀ ದೂರ ಹೆದ್ದಾರಿಯ ಎರಡು ಬದಿಯಲ್ಲಿ ಪಾದಚಾರಿಗಳ ಅನುಕೂಲಕ್ಕಾಗಿ ಪುಟ್ ಪಾತ್ ನಿರ್ಮಾಣ ಮಾಡಲಾಗಿದೆ. ಚರಂಡಿಯ ಮೇಲುಹಾಸಿನ ಮೇಲೆ ಟೈಲ್ಸ್ ಅಳವಡಿಸಿ, ಎರಡು ಕಡೆ ಕಬ್ಬಿಣದ ಗ್ರೀಲ್ ಗಳನ್ನು ಅಳವಡಿಸಲಾಗಿತ್ತು. ಈ ಕಾಮಗಾರಿ ಆರಂಭದಲ್ಲೇ ಕಳಪೆಯಾಗಿದ್ದು, ಹಾಕಿದ್ದ ಕೆಲವೇ ದಿನಗಳಲ್ಲಿ ಕಿತ್ತು ಬಂದಿದ್ದವು. ಇದೀಗ, ಬಹುತೇಕ ಕಡೆ ಟೈಲ್ಸ್ಗಳು ಹಾಳಾಗಿದ್ದು, ಹಲವು ಕಡೆ ಚರಂಡಿ ಸ್ಲಾಬ್ಗಳು ಮುರಿದುಬಿದ್ದಿವೆ. ಹಾಗೆಯೇ ಪಾದಚಾರಿ ಮಾರ್ಗಕ್ಕೆ ವಾಹನಗಳು ಬಾರದಂತೆ ತಡೆಯಲು ಚರಂಡಿಗೆ ಹೊಂದಿಕೊಂಡಂತೆಯೇ ಕಬ್ಬಿಣದ ಗ್ರಿಲ್ಗಳನ್ನು ಅಳವಡಿಸಲಾಗಿತ್ತು. ಕಳಪೆ ಕಾಮಗಾರಿಯಿಂದಾಗಿ ಹಲವು ಕಡೆ ಗ್ರೀಲ್ಗಳು ಕಿತ್ತುಹೋಗಿದ್ದು, ಗುಜರಿ ಅಂಗಡಿ ಪಾಲಾಗಿವೆ. ಅಂಗಡಿ ಮಳಿಗೆಗಳ ಮುಂದೆ ಹಾಕಿದ್ದ ಗ್ರೀಲ್ಗಳು ಕೂಡ ಮಾಯವಾಗಿವೆ. ನೂರಾರು ಮೀಟರ್‌ನಷ್ಟು ಕಬ್ಬಿಣದ ಗ್ರಿಲ್ ಗಳು ಇಲ್ಲವಾಗಿದ್ದು, ಹಲವು ಕಡೆ ಪುಟ್‌ಪಾತ್ ಪೊದೆಯಲ್ಲಿ ಮುಚ್ಚಿ ಹೋಗಿದೆ.

ಮುಗಿಯದ ಕಾಮಗಾರಿ!
ಹಲವು ಅಧ್ವಾನಗಳ ಆಗರವಾಗಿರುವ ಈ ಬಹುಕೋಟಿ ಮೊತ್ತದ ಕಾಮಗಾರಿ ಇಷ್ಟು ವರ್ಷವಾದರೂ ಮುಗಿದಿಲ್ಲ ಎಂಬುದು ಮತ್ತೊಂದು ವಿಶೇಷ. ಈಗಾಗಲೇ ಮುಗಿದಿರುವ ಕಾಮಗಾರಿ ಹೇಳಹೆಸರಿಲ್ಲದಂತೆ ಆಗಿದೆ. ಕೆಲಭಾಗದಲ್ಲಿ ಭೂ ವ್ಯಾಜ್ಯದಿಂದಾಗಿ ಕಾಮಗಾರಿಯೇ ನಡೆದಿಲ್ಲ. ಬಾಕಿಯಿರುವ ಕಾಮಗಾರಿ ಮತ್ತೆ ಆರಂಭಿಸಿದ್ದು, ಈಗಾಗಲೇ ಮುಕ್ತಾಯವಾಗಿರುವ ಕಾಮಗಾರಿ ಅಪ್ರಯೋಜಕ ಎನಿಸಿದೆ. ಕೋಟ್ಯಂತರ ರೂ. ವ್ಯಯಿಸಿ ಮಾಡಿರುವ ಅಭಿವೃದ್ಧಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ.

ಪರಿಶೀಲನೆ ಮಾಡಿದರೆ ಬಂಡವಾಳ ಬಯಲು!
ಅಭಿವೃದ್ಧಿಯ ದ್ಯೋತಕವಾಗಬೇಕಿದ್ದ ಈ ಕಾಮಗಾರಿ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆದಾರರ ಬೇಜವಾಬ್ದಾರಿತನದಿಂದಾಗಿ ಸಂಪೂರ್ಣ ಹಳ್ಳ ಹಿಡಿದಿದ್ದು, ಕೋಟಿ ಕೋಟಿ ಹಣವನ್ನು ವ್ಯಯ ಮಾಡಿರುವವರ ವಿರುದ್ಧ ಕಠಿಣ ಕಾನೂನುಕ್ರಮ ಕೈಗೊಳ್ಳಬೇಕಿದೆ. ಕಾಮಗಾರಿ ಆರಂಭದ ಸ್ಥಳವಾದ ಹನುಮಂತ ನಗರದಿಂದ ಚಿಕ್ಕಮಳೂರುವರೆಗೆ ಪರಿಶೀಲನೆ ಮಾಡಿದರೆ ಕಾಮಗಾರಿಯ ನೈಜ ಬಂಡವಾಳ ಬಯಲಾಗಲಿದೆ. ಕ್ಷೇತ್ರದ ಜನಪ್ರತಿನಿಧಿ ಎನಿಸಿಕೊಂಡಿರುವ ಶಾಸಕರು, ಸಂಸದರು ಅಥವಾ ಮೇಲ್ಮನೆ ಸದಸ್ಯರು ಈ ಕೆಲಸಕ್ಕೆ ಮುಂದಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಅವಶ್ಯಕತೆ ಇದೆ. ಈ ಮೂಲಕ ಸರ್ಕಾರದ ಹಣವನ್ನು ಪೋಲು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

ಸಂಸದರೇ ಗಮನಹರಿಸಿ!
ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಬರುವ ನಗರಗಳ ಒಳಗಿನ ಹೆದ್ದಾರಿ ಅಗಲೀಕರಣ ಮತ್ತು ಅಭಿವೃದ್ಧಿ ಕೇವಲ ಚನ್ನಪಟ್ಟಣವಷ್ಟೇ ಅಲ್ಲದೆ, ರಾಮನಗರ ಮತ್ತು ಬಿಡದಿಯಲ್ಲೂ ಒಮ್ಮೆಲೇ ಕೈಗೊಳ್ಳಲಾಗಿತ್ತು. ಕೇಂದ್ರ ಸರ್ಕಾರದ ಅನುದಾನದಿಂದ ಆರಂಭಗೊಂಡ ಈ ಕಾಮಗಾರಿ ವಿಚಾರದಲ್ಲೂ ಈ ಹಿಂದೆ ಮೈಸೂರು ಸಂಸದ ಪ್ರತಾಪ ಸಿಂಹ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ನಡುವೆ ಸಣ್ಣಮಟ್ಟಿನ ಕ್ರೆಡಿಟ್ ವಾರ್ ನಡೆದಿತ್ತು. ಡಿ.ಕೆ. ಸುರೇಶ್ ಈ ಕಾಮಗಾರಿ ಬಗ್ಗೆ ಸಾಕಷ್ಟು ಆಸಕ್ತಿ ವಹಿಸಿದ್ದು, ಈಗ ನಡೆದಿರುವ ಅಧ್ವಾನಗಳತ್ತ ಒಮ್ಮೆ ಗಮನಹರಿಸಬೇಕಾಗಿದೆ.