ಜಿಲ್ಲೆ

ನಾಳೆ ರಾಮನಗರದಲ್ಲಿ ಜಿಲ್ಲಾ ಮಟ್ಟದ ರಂಗೋಲಿ ಸ್ಪರ್ಧೆ

ಗಂಗಾಧರ ಬಿ ವಿ

ರಾಮನಗರ: ಗೌರಿ ಗಣೇಶ ಹಬ್ಬದ ಅಂಗವಾಗಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹಾಗು ದಿಗ್ವಿಜಯ ಸುದ್ಧಿವಾಹಿನಿ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ರಂಗೋಲಿ ಬಿಡಿಸುವ ಸ್ಪರ್ಧೆ ನಾಳೆ ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ರೇವಣಸಿದ್ದೇಶ್ವರ ಬೆಟ್ಟದಲ್ಲಿ ನಡೆಯಲಿದೆ.

ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಸ್ಪರ್ಧೆಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಹುಸೇನ್, ಮಾಜಿ ಶಾಸಕ ಕೆ.ರಾಜು, ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವರದರಾಜುಗೌಡ, ಹುಲಿಕೆರೆ ಗುನ್ನೂರು ಗ್ರಾಪಂ ಅಧ್ಯಕ್ಷೆ ತೇಜಾ ಸತೀಶ್, ಗ್ರಾಪಂನ ಎಲ್ಲಾ ಸದಸ್ಯರು ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ನಂತರ ಮಧ್ಯಾಹ್ನ 12.30ಕ್ಕೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಶಾಸಕಿ ಅನಿತಾ ಕುಮಾರಸ್ವಾಮಿ, ತಹಶೀಲ್ದಾರ್ ವಿಜಯ್‌ಕುಮಾರ್, ರೇವಣಸಿದ್ದೇಶ್ವರ ಕ್ಷೇತ್ರದ ಇಓ ಯೇಸುರಾಜ್, ವಿಜಯವಾಣಿ ಪತ್ರಿಕೆ ಸಂಪಾದಕರಾದ ಕೆ.ಎನ್.ಚನ್ನೇಗೌಡ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಬಹುಮಾನ ಪ್ರಾಯೋಜನೆ: ಗೌರಿ ಗಣೇಶ ಹಬ್ಬದ ಅಂಗವಾಗಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ಹಾಗು ದಿಗ್ವಿಜಯ ಸುದ್ಧಿವಾಹಿನಿ ಹಮ್ಮಿಕೊಂಡಿರುವ ರಂಗೋಲಿ ಬಿಡಿಸುವ ಸ್ಪರ್ಧೆಗೆ ಬಹುಮಾನಗಳನ್ನು ರಾಮನಗರ ಪ್ರಸಿದ್ಧ ಆಭರಣ ಮಳಿಗೆ ಗಣೇಶ್ ಜ್ಯುವೆಲರ್ಸ್‌ ಪ್ರಾಯೋಜಿಸಿದ್ದಾರೆ. ಪ್ರಥಮ ಬಹುಮಾನವಾಗಿ 1.5 ಗ್ರಾಂ ಚಿನ್ನ, ದ್ವಿತೀಯ ಬಹುಮಾನ 1 ಗ್ರಾಂ ಚಿನ್ನ ಹಾಗೂ ಮೂರನೇ ಬಹುಮಾನ 50 ಗ್ರಾಂ ಬೆಳ್ಳಿ ನೀಡಲಾಗುತ್ತದೆ. ಇದರ ಜೊತೆಗೆ 20 ಸಮಾಧಾನಕರ ಬಹುಮಾನ ನೀಡಲಾಗುತ್ತಿದೆ.

ಸನ್ಮಾನ: ಇದೇ ವೇಳೆ ಮಹಿಳಾ ಸಮಾನತೆ ದಿನಾಚರಣೆ ಅಂಗವಾಗಿ ಜಿಲ್ಲೆಯ ಸಾಧನೆ ಮಾಡಿದ ಮೂವರು ಮಹಿಳಾ ಸಾಧಕರಿಯರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ. ವೈಧ್ಯಕೀಯ ಕ್ಷೇತ್ರದ ಸಾಧನೆಗಾಗಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಜಿ.ಎಲ್.ಪದ್ಮಾ, ನಾಟಿ ವೈಧ್ಯದಲ್ಲಿ ಸಾಧನೆಗಾಗಿ ಕೆ.ಟಿ.ಲಕ್ಷ್ಮಮ್ಮ ಹಾಗೂ ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಿರುವ ವೈ. ಸಿ ಶಾಂತಮ್ಮ ಅವರನ್ನು ಸನ್ಮಾನಿಸಲಾಗುತ್ತಿದೆ.

ಸೂಚನೆ: ರಂಗೋಲಿ ಬರೆಯಲು ಬೇಕಾದ ಅಗತ್ಯ ವಸ್ತುಗಳನ್ನು ಸ್ಪರ್ಧಿಗಳೇ ತರಬೇಕು, ಜೊತೆಗೆ ಒಬ್ಬರು ಸಹಾಯಕರನ್ನು ಕರೆತರಲು ಅವಕಾಶವಿದೆ. ರಂಗೋಲಿ ಬಿಡಿಸಲು ಒಂದು ಗಂಟೆ ಮಾತ್ರ ಕಾಲಾವಕಾಶ ನೀಡಲಾಗುತ್ತಿದ್ದು, ಈಗಾಗಲೇ ಹೆಸರು ನೋಂದಣಿ ಮಾಡಿರುವವರು ಬೆಳಿಗ್ಗೆ 9.30ರ ವೇಳೆಗೆ ಸ್ಥಳದಲ್ಲಿ ಹಾಜರಿರಬೇಕು. ಜೊತೆಗೆ ಸ್ಥಳದಲ್ಲಿಯೇ ನೋಂದಣಿಗೆ ಅವಕಾಶವಿದ್ದು, ಭಾಗವಹಿಸಲು ಇಚ್ಚಿಸುವವರು ಬೆಳಿಗ್ಗೆ 9ರಿಂದ 9.45ರ ಒಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.