ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಪಿ. ಅನಿತಾ ಹೇಳಿಕೆರೆಡ್ಕ್ರಾಸ್ ಸಂಸ್ಥೆ ಧ್ಯೇಯೋದ್ದೇಶಗಳ ಬಗ್ಗೆ ಉಪನ್ಯಾಸ
ರಾಮನಗರ
ಭಾರತದ ನಾಗರಿಕರೆಲ್ಲರೂ ನೆಲದ ಕಾನೂನುಗಳ ಬಗ್ಗೆ ಅರಿವು ಹೊಂದಬೇಕಿರುವುದು ಆದ್ಯ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎನ್.ಪಿ. ಅನಿತಾ ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು&ನೆರವು ಹಾಗೂ ರೆಡ್ಕ್ರಾಸ್ ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮದು ಉತ್ತಮ ಪ್ರಜಾಪ್ರಭುತ್ವ ಹೊಂದಿರುವ ದೇಶ. ಆದ್ದರಿಂದ ನೆಲದ ಕಾನೂನನ್ನು ಎಲ್ಲರೂ ಗೌರವಿಸಿ ನಡೆಯಬೇಕು. ದುರ್ಬಲರಿಗೆ ಉಚಿತ ಕಾನೂನು ಸೇವೆ, ನೆರವು ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಜನತೆಗೆ ಕಾನೂನಿನ ಕುರಿತು ಸಾಮಾನ್ಯ ತಿಳಿವಳಿಕೆ ಇಲ್ಲವಾದರೆ ಸಮಸ್ಯೆಗೆ ಪರಿಹಾರ ಸಿಗುವುದು ಕಷ್ಟವಾಗುತ್ತದೆ.
ನಿತ್ಯಜಿವನದಲ್ಲಿ ನಡೆಯುವ ಟನೆಗಳಿಗೆ ಸಂಬಂಧಿಸಿದಂತೆ ಕಾನೂನಿನ ಅರಿವು ಇರಬೇಕು. ವಾಹನ ಚಾಲನೆ ಮಾಡಲು ಚಾಲನಾ ಪರವಾನಗಿ ಕಡ್ಡಾಯವಾಗಿರಬೇಕು. ಜತೆಗೆ ವಾಹನಕ್ಕೆ ವಿಮೆ ಹೊಂದಿರಬೇಕು ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಕಾನೂನಿನ ಬಗ್ಗೆ ತಿಳಿದುಕೊಳ್ಳುವ ಜತೆಗೆ ದೌರ್ಜನ್ಯ, ಮಾನಸಿಕ ಹಿಂಸೆ ವಿರುದ್ಧ ಜಾಗೃತರಾಗಿ ಕಾನೂನಿನ ಮೂಲಕ ಅರಿವು ಹೊಂದಬೇಕು ಎಂದು ಕರೆ ನೀಡಿದರು.
ರಾಮನಗರ ಜಿಲ್ಲೆಯಲ್ಲಿ 50 ಸಾವಿರ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. 21 ನ್ಯಾಯಾಧೀಶರಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿಕೊಳ್ಳಲು ಜನರು ಮುಂದಾಗಬೇಕು ಎಂದು ತಿಳಿಸಿದರು.
ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಮಾತನಾಡಿ, ಶಾಂತಿ ಸಮಯದ ಚಟುವಟಿಕೆಗಳಾದ ಮಾನವೀಯತೆ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವುದು, ಜನರ ಆರೋಗ್ಯ ವೃದ್ಧಿಸುವ ಕಾರ್ಯದ ಒತ್ತಡ ನಿರ್ವಹಿಸುವುದು , ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮಾನವೀಯ ನೆರವು ನೀಡುವುದು, ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು ಮತ್ತು ಸಮಾಜದ ಸ್ಥಾನವನ್ನು ಹೆಚ್ಚಿಸುವ ಕಾರ್ಯ ಚಟುವಟಿಕೆಗಳಿಗೆ ಒತ್ತು ನೀಡುವುದು ರೆಡ್ಕ್ರಾಸ್ ಸಂಸ್ಥೆಯ ಕಾರ್ಯಗಳಾಗಿವೆ ಎಂದರು.
ಜಿಲ್ಲಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಎಸ್. ರುದ್ರೇಶ್ವರ, ಸಹ ಕಾರ್ಯದರ್ಶಿ ಕೆ.ಎಚ್.ಚಂದ್ರಶೇಖರಯ್ಯ, ಖಜಾಂಚಿ ಎಂ. ಪರಮಶಿವಯ್ಯ, ಸದಸ್ಯರಾದ ಕೆ.ಎಸ್. ಶಂಕರಯ್ಯ, ಎಲ್.ಎಸ್. ರಾಮಕೃಷ್ಣನ್, ಪ್ರಾಂಶುಪಾಲ ಡಿ. ಉಷಾ, ಉಪನ್ಯಾಸಕರಾದ ಭಾಗ್ಯಲ್ಮ, ಸವಿತಾ, ಶಾಮಲ, ವಿಶ್ವರಾಜು, ಮನು, ಕಾಂತರಾಜು, ರಾಜೇಶ್ ಇದ್ದರು. ವಿದ್ಯಾರ್ಥಿನಿ ಅಮೂಲ್ಯ ಮತ್ತು ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಎನ್. ರೇಣುಕಾ ನಿರೂಪಿಸಿದರು. ಜೆ.ಆರ್. ಪಲ್ಲವಿ ಸ್ವಾಗತಿಸಿ, ಕುಸುಮಾ ಮತ್ತು ಲಾವಣ್ಯ ವಂದಿಸಿದರು.