ಜಿಲ್ಲೆ

ರಸ್ತೆಗಾಗಿ ರಾಜಕೀಯ ಪಕ್ಷಗಳಿಗೆ ಬಹಿಷ್ಕಾರ ಹಾಕಿದ ಗ್ರಾಮಸ್ಥರು ರಾಮನಗರದಲ್ಲಿ ಘಟನೆ

ಗಂಗಾಧರ ಬಿ ವಿ

ರಾಮನಗರ : ತಾಲೂಕಿನ  ರಾಂಪುರದೊಡ್ಡಿ, ಗೋಪಾಲಪುರ, ಇರುಳಿಗರ ಕಾಲೋನಿ, ದಾಸೇಗೌಡನದೊಡ್ಡಿ, ಕೊತ್ತೀಪುರ ಗ್ರಾಮಸ್ಥರು ರಸ್ತೆ ಅಭಿವೃದ್ಧಿ ಪಡಿಸಬೇಕು ಇಲ್ಲದಿದ್ದರೆ ಮತದಾನ ಬಹಿಷ್ಕಾರ ಮತ್ತು ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಮುಖಂಡರನ್ನು  ಗ್ರಾಮದೊಳಗೆ ಸೇರಿಸುವುದಿಲ್ಲ ಎಂದು ಗುರುವಾರ ವಡೇರಹಳ್ಳಿ-ರಾಂಪುರದೊಡ್ಡಿ ಹದಗೆಟ್ಟಿರುವ ರಸ್ತೆಯಲ್ಲಿ ನಿಂತು ಪ್ರತಿಭಟನೆ ನಡೆಸಿದರು.

ರಾಂಪುರದೊಡ್ಡಿ, ಗೋಪಾಲಪುರ ಗ್ರಾಮಗಳಿಗೆ ಬೆಂಗಳೂರು - ಮೈಸೂರು ರಸ್ತೆಯಿಂದ ಹಾಗೂ ವಡೇರಹಳ್ಳಿಯಿಂದ ಸಂಪರ್ಕ ರಸ್ತೆ ಇದೆ. ಈ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ದಾಸೇಗೌಡನದೊಡ್ಡಿ, ಹುಣಸನಹಳ್ಳಿ ಉರಗಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುತ್ತದೆ. ಸುಮಾರು 20 ಕ್ಕೂ ಹೆಚ್ಚಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಹಂದಿಗೊಂದಿ ಅರಣ್ಯ ಪ್ರದೇಶದ ಅಂಚಿನಲ್ಲಿರುವ ಕಾರಣ ಈ ಭಾಗದ ಗ್ರಾಮಗಳಿಗೆ ಸಾರಿಗೆ ಬಸ್ ಸಂಪರ್ಕಇರುವುದಿಲ್ಲ.

ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರಲ್ಲಿರುವ ವಡೇರಹಳ್ಳಿುಂದ ರಾಂಪುರದೊಡ್ಡಿ, ಗೋಪಾಲಪುರದವರೆಗೆ ರಸ್ತೆ ಹದಗೆಟ್ಟಿದೆ ಗುಂಡಿ ಬಿದ್ದಿದೆ ಹಲವಾರು ಭಾರಿ ರಸ್ತೆ ಅಭಿವೃದ್ಧಿ ಪಡಿಸುವಂತೆ ಎಲ್ಲಾ  ಜನಪ್ರತಿನಿಧಿಗಳಲ್ಲಿ ಕೇಳುತ್ತಿದ್ದರೂ ಇದುವರೆವಿಗೂ ಯಾವುದೇ ಪ್ರಯೋಜನವಾಗಿಲ್ಲ.  ಶಾಲಾ ಮಕ್ಕಳನ್ನು ಕರೆದೊಯ್ಯಲು ಬರುವ ವಾಹನಗಳು ರಸ್ತೆ ಸರಿಯಿಲ್ಲ ಎಂದು  ಗ್ರಾಮಕ್ಕೆ ಶಾಲಾ ಬಸ್‌ಗಳು ಬರುತ್ತಿಲ್ಲ ಮಕ್ಕಳನ್ನು ಬೆಳಿಗ್ಗೆ ಸಂಜೆ ವಡೇರಹಳ್ಳಿಗೆ ಬಂದು ಬಸ್ ಹತ್ತಿಸುವ ಕೆಲಸ ಮಾಡಬೇಕಿದೆ.

ಮಳೆಗಾಲದಲ್ಲಂತೂ ರಸ್ತೆ ಗುಂಡಿಮಯವಾಗಿರುವ ಕಾರಣ ನೀರು ನಿಂತು ರಸ್ತೆ ಕಾಣದೆ ವಾಹನ ಸವಾರರು ಬಿದ್ದ ನಿದರ್ಶನಗಳು ಸಾಕಷ್ಠಿವೆ. ಪಡಿತರ ತರಲು ಗಂಗರಾಜನಹಳ್ಳಿಗೆ ಜನರು ಹೋಗಿ ಬರಲು ಆಗುತ್ತಿಲ್ಲ ಕೂಡಲೇ ರಸ್ತೆ ಅಭಿವೃಧ್ಧಿ ಪಡಿಸಬೇಕು. ರಸ್ತೆ ಅಭಿವೃದ್ಧಿ ಪಡಿಸಿ ಇಲ್ಲದಿದ್ದರೆ ಬಿಜೆಪಿ, ಕಾಂಗ್ರೇಸ್, ಜೆಡಿಎಸ್ ಪಕ್ಷಗಳ ಮುಖಂಡರು ಯಾರೂ ಕೂಡ ಮತ ಕೇಳಲು ಬರಬೇಡಿ. ಅಲ್ಲದೆ ಸರ್ಕಾರ, ಜಿಲ್ಲಾಡಳಿತ ರಸ್ತೆ ಅಭಿವೃದ್ದಿಗೆ ಮುಂದಾಗದಿದ್ದರೆ ಮತದಾನಕೂಡ ಬಹಿಷ್ಕಾರ ಮಾಡುತ್ತೇವೆ ಎಚ್ಚರಿಸಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಯರಾಂ, ರಾಮಯ್ಯ, ಜಗದೀಶ್, ಗೋಪಿ, ಚಂದ್ರು, ವೆಂಕಟೇಶ್, ರಾಮದಾಸ್, ನವೀನ್, ಕೃಷ್ಣಪ್ಪ, ವಿಶ್ವ, ಜಯಮ್ಮ, ಶಿವಣ್ಣ, ಸಣ್ಣಮ್ಮ, ಲಿಂಗರಾಜು ಮುಂತಾದವರಿದ್ದರು.

ರಸ್ತೆ ಸರಿಪಡಿಸಿ ಸಾರಿಗೆ ಸಂಪರ್ಕ ಇರದ ಗ್ರಾಮಗಳಾಗಿರುವ ಕಾರಣ ಕಾಲ್ನಡಿಗೆ ಇಲ್ಲವೇ ಸ್ವಂತ ವಾಹನಗಳಲ್ಲಿ ಜನರು ಓಡಾಟ ನಡೆಸಬೇಕಿದೆ ಶಾಲಾ ಮಕ್ಕಳ ಬಸ್ ಬರದೆ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ಹಲವಾರು ಭಾರಿ ಜನಪ್ರತಿನಿಧಿಗಳಿಗೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಲೇ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.

ಲಕ್ಷ್ಮಣ್, ಪ್ರತಿಭಟನಾನಿರತ ಮುಖಂಡ, ಗೋಪಾಲಪುರ.