ರಾಮನಗರ
ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಎ.ಎಚ್. ಬೈರೇಗೌಡ ಸರ್ಕಾರವನ್ನು ಆಗ್ರಹಿಸಿದರು.
ರಾಮನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಶೇ.50ರಷ್ಟು ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಶೇ.15ಕ್ಕಿಂತ ಕಡಿಮೆ ಬಿತ್ತನೆಯಾಗಿದ್ದು, ಮಳೆ ಇಲ್ಲದೆ ರೈತರು ಹೈರಾಣಾಗಿದ್ದಾರೆ. ಇನ್ನೂ ಸ್ವಲ್ಪ ದಿನದಲ್ಲಿ ಮಳೆ ಬರದಿದ್ದರೆ ಜಾನುವಾರುಗಳ ಮೇವಿಗೂ ತತ್ವಾರ ಉಂಟಾಗಲಿದೆ ಎಂದರು.
ಅಧಿಕಾರಿಗಳು ಮಳೆ ಅಭಾವ ಇದ್ದರೂ ವೈಜ್ಞಾನಿಕವಾಗಿ ವರದಿ ನೀಡಿಲ್ಲ ಎಂದು ತಿಳಿದುಬಂದಿದೆ. ರಾಮನಗರ, ಕನಕಪುರ, ಚನ್ನಪಟ್ಟಣ, ಮಾಗಡಿ ತಾಲೂಕುಗಳಲ್ಲಿ ಮಳೆ ಕೊರತೆ ಬಹಳಷ್ಟಿದೆ. ಕೂಡಲೇ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಬೇಕು, ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಆಗಿರುವ ಮಳೆ ಪ್ರಮಾಣದ ವಾಸ್ತವ ಸ್ಥಿತಿ ರೈತರ ಬಿತ್ತನೆ ಪ್ರದೇಶ ತಿಳಿದು ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಡಳಿತ ರೈತರ ಸಮಸ್ಯೆ ಚರ್ಚಿಸಿ ಬಗೆಹರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯನ್ನು ತಕ್ಷಣವೇ ಆಯೋಜಿಸಬೇಕು. ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿ ಅವರು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕು ಎಂದು ಬೈರೇಗೌಡ ಹೇಳಿದರು.
ಮುಖಂಡರಾದ ಮಾರೇಗೌಡ, ರಂಗಸ್ವಾಮಿ, ನಾರಾಯಣ, ಸುರೇಶ್, ಚಿಕ್ಕಮಾರಯ್ಯ, ಕುಮಾರ್, ಕೃಷ್ಣಪ್ಪ, ನರಸಪ್ಪ, ನಾರಾಯಣಪ್ಪ ಇದ್ದರು.
ಮಾರುಕಟ್ಟೆ ದರ ನಿಗದಿ ಮಾಡಿ
ಬೆಂಗಳೂರು ಹೊರ ವಲಯದಲ್ಲಿ ಹಾದು ಹೋಗುತ್ತಿರುವ ಪೆರಿಫರೆಲ್ ರಸ್ತೆ ನಿರ್ಮಾಣಕ್ಕೆ ಭೂ ಸ್ವಾಧಿನ ಮಾಡಲಾಗಿರುವ ಜಮೀನಿಗೆ ಕನಿಷ್ಠ ಬೆಲೆ ನೀಡಲಾಗುತ್ತಿದೆ. ಪ್ರಸ್ತುತ ಇರುವಂತೆ ಮಾರುಕಟ್ಟೆ ದರ ನಿಗದಿ ನೀಡಬೇಕು. ಇದನ್ನು ಕೂಡಲೇ ಸರಿಪಡಿಸಿ, ಅಲ್ಲದೇ, ಸರ್ವೇ ಇಲಾಖೆಯಲ್ಲಿ ರೈತರ ಕೆಲಸಗಳು ವಿಳಂಬವಾಗುತ್ತಿದ್ದು, ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಬೈರೇಗೌಡ ಸರ್ಕಾರವನ್ನು ಆಗ್ರಹಿಸಿದರು.