ರಾಮನಗರ
ಮೇಕೆದಾಟು ಯೋಜನೆಯನ್ನು ಶೀಘ್ರವೇ ಪ್ರಾರಂಭಿಸುವ ಮೂಲಕ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮುನಿರಾಜು ಆಗ್ರಹಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆ ವೇಳೆ ಮಾತನಾಡಿ, ರಾಮನಗರ ಸೇರಿ ಅಕ್ಕಪಕ್ಕದ ಹಲವಾರು ಜಿಲ್ಲೆಗಳ ಪಾಲಿಗೆ ಮೇಕೆದಾಟು ಯೋಜನೆ ಮಹತ್ವದ್ದಾಗಿದೆ. ಇದರಿಂದಾಗಿ ರಾಜಧಾನಿ ಬೆಂಗಳೂರು ಸೇರಿ ಇತರೆಡೆ ನೀರಿನ ದಾಹ ಇಂಗಲಿದೆ. ಯೋಜನೆ ಜಾರಿಗೆ ಆಗ್ರಹಿಸಿ ಈ ಹಿಂದೆ ಪಾದಯಾತ್ರೆ ಮಾಡಿದ್ದ ಕಾಂಗ್ರೆಸ್ ಪಕ್ಷವೇ ಈಗ ಅಧಿಕಾರದಲ್ಲಿದೆ. ಕೂಡಲೇ ಎಲ್ಲ ಅಡೆತಡೆಗಳನ್ನು ಮೀರಿ ಯೋಜನೆ ಜಾರಿಗೆ ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತ ಸಂಘದ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂಘದ ವಿಭಾಗೀಯ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಕೇಂದ್ರ ಸರ್ಕಾರ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಜಾನವಾರು ಹತ್ಯೆ ನಿಷೇಧ ಕಾಯ್ದೆ ಸೇರಿ ಹಲವು ಕಾಯ್ದೆಗಳನ್ನು ಜಾರಿಗೆ ತಂದು ಕೆಲವನ್ನು ವಾಪಸ್ ಪಡೆದುಕೊಂಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಹೇಳಿಕೊಂಡಿದ್ದರು. ಈಗಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹ ನಮ್ಮ ಹೋರಾಟದ ಭಾಗವಾಗಿ ಪಾಲ್ಗೊಂಡು ಈ ಭರವಸೆಯನ್ನು ನೀಡಿದ್ದರು. ಈಗ ನಿಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದು, ಮುಂಬರುವ ಅಧಿವೇಶನದಲ್ಲಿ ಈ ಎಲ್ಲ ಕಾಯ್ದೆಗಳನ್ನು ಸರ್ಕಾರ ಕೂಡಲೇ ವಾಪಾಸ್ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರೋತ್ಸಾಹಧನ ಬಿಡುಗಡೆಗೆ ಕ್ರಮವಾಗಲಿ
ಕಳೆದ 7-8 ತಿಂಗಳಿಂದಲೂ ಹಾಲಿನ ಪ್ರೋತ್ಸಾಹಧನ ರೈತರ ಕೈ ಸೇರಿಲ್ಲ, ಕೂಡಲೇ ಇದನ್ನು ಬಿಡುಗಡೆ ಮಾಡಬೇಕು. ಕಾಡು ಪ್ರಾಣಿಗಳ ಹಾವಳಿಯಿಂದ ನಷ್ಟ ತಪ್ಪಿಸಲು ಕೂಡಲೇ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಆಡಳಿತ ಯಂತ್ರ ಕುಸಿದಿದ್ದು, ಇದಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡಬೇಕು. ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ರೂಪ ನೀಡಬೇಕು. ರಾಜ್ಯ ಸರ್ಕಾರವೇ ಎಂಎಸ್‌ಪಿ ಅಡಿಯಲ್ಲಿ ಉತ್ಪನ್ನಗಳನ್ನು ಕೊಳ್ಳಲು ನೀತಿ ರೂಪಿಸಬೇಕು ಎಂದು ಮಲ್ಲಯ್ಯ ಆಗ್ರಹಿಸಿದರು. ಜಿಲ್ಲೆಯಲ್ಲಿ ಭತ್ತ ಬೆಳೆಯುವ ಪ್ರದೇಶ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಕೂಡಲೇ ಸರ್ಕಾರ ಭತ್ತದ ಬೆಳೆ ಬೆಳೆಯಲು ಉತ್ತೇಜನ ನೀಡಬೇಕು ಎಂದು ಮನವಿ ಮಾಡಿದರು.
ಸಭೆಗೆ ಒತ್ತಾಯ
ಜಿಲ್ಲೆಯ ಜ್ವಲಂತ ಸಮಸ್ಯೆಗಳು ಹಾಗೂ ರೈತರ ಸಂಕಷ್ಟಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಕೂಡಲೇ ಜಿಲ್ಲಾಧಿಕಾರಿಗಳು ಸಭೆ ಕರೆಯುವಂತೆ ಮನವಿ ಮಾಡಲಾಯಿತು. ಅಕಾಲಿಕ ಮಳೆ ಮತ್ತು ಬರ, ಪ್ರಮುಖ ಬೆಳೆಗಳ ದರ ಕುಸಿತ, ಭ್ರಷ್ಟಾಚಾರ ಸಹಿತ ಆಡಳಿತದಿಂದ ಸಾರ್ವಜನಿಕರಿಗೆ ತೊಂದರೆ, ಕಾಡು ಪ್ರಾಣಿಗಳ ಹಾವಳಿ, ಸರ್ಕಾರಿ ಕಚೇರಿಗಳಲ್ಲಿ ರೈತರನ್ನು ಅಲೆದಾಡಿಸುತ್ತಿರುವುದು ಸೇರಿ ವಿವಿಧ ಸಮಸ್ಯೆಗಳಿದ್ದು, ಇವುಗಳನ್ನು ಬಗೆಹರಿಸಲು ಕೂಡಲೇ ಜಿಲ್ಲಾಡಳಿತ ಸಭೆಯನ್ನು ಕರೆಯಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಎಂ.ಪುಟ್ಟಸ್ವಾಮಿ, ಎಂ.ಲೋಕೇಶ್, ತಿಮ್ಮೇಗೌಡ, ಎಚ್.ಸಿ.ಕೃಷ್ಣಯ್ಯ, ವಿಶ್ವನಾಥ್, ರಾಮೇಗೌಡ, ನಾಗರಾಜು ಮುಂತಾದವರು ಇದ್ದರು.