ಜಿಲ್ಲೆ

ಪ್ರಧಾನಿಯಿಂದ ಉದ್ಘಾಟನೆಗೊಂಡ 6 ದಿನದಲ್ಲಿ ಹೆದ್ದಾರಿ ಬಣ್ಣ ಬಯಲು ಮಳೆ ನೀರು ನುಗ್ಗಿ ಬೆಂ - ಮೈಸೂರು ಹೆದ್ದಾರಿ ಪ್ರಯಾಣಿಕರು ಅತಂತ್ರ

ಗಂಗಾಧರ ಬಿ ವಿ

ರಾಮನಗರ: ಶುಕ್ರವಾರ ಮಧ್ಯರಾತ್ರಿ ಸುರಿದ ಸಣ್ಣ ಮಳೆಯೊಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಗೊಂಡ ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಬಣ್ಣವನ್ನು ಮತ್ತೊಮ್ಮೆ ಬಯಲು ಮಾಡಿದೆ.

ಬೇಸಿಗೆ ಮಳೆಯಿಂದಾಗಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸಂಗನಬಸವನದೊಡ್ಡಿಯ ಅಂಡರ್‌ಪಾಸ್‌ನಲ್ಲಿ ನೀರು ತುಂಬಿಕೊಂಡ ಕಾರಣ ವಾಹನ ಸವಾರರು ಪರದಾಡುವಂತೆ ಮಾಡಿದ್ದಲ್ಲದೆ, ಹಲವಾರು ವಾಹನಗಳಿಗೆ ನೀರು ನುಗ್ಗಿ ಎಂಜಿನ್ ಹಾಳಾಗಿದೆ.

ಕಳೆದ ಮಳೆಗಾಲದಲ್ಲಿ ಭಾರೀ ಮಳೆಯಿಂದಾಗಿ ಸಮಸ್ಯೆ ಎದುರಾಗಿದ್ದ ಜಾಗದಲ್ಲಿಯೇ ಮತ್ತೆ ಮಳೆ ನೀರು ತುಂಬಿದ್ದು, ಎಲ್ಲವನ್ನು ಸರಿಪಡಿಸಿದ್ದೇವೆ ಎಂದು ಹೇಳುತ್ತಿದ್ದ ಅಧಿಕಾರಿಗಳ ಮಾತುಗಳು ಸುಳ್ಳು ಎಂಬುದು ಸಹ ಸಾಬೀತಾಗಿದೆ. ಮಳೆ ನೀರು ಹೆಚ್ಚಾಗಿದ್ದ ಕಾರಣ ಬೆಳಿಗ್ಗೆ ವಾಹನ ಸವಾರರು ಪರದಾಟುವಂತೆ ಆಯಿತು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಎನ್ ಎಚ್‌ಎ ಐ ಅಧಿಕಾರಿಗಳು ಜೆಸಿಬಿ ಮೂಲಕ ಕಾವುವೆಗಳನ್ನು ಸರಿಪಿಡಿಸಿ ನೀರನ್ನು ಹೊರಗೆ ಬಿಡುವ ಕೆಲಸ ಮಾಡಿದರು. ಇಷ್ಟೇಲ್ಲಾ ಕೆಸಲ ಮುಗಿಯುವ ವೇಳೆಗೆ ಬೆಳಿಗ್ಗೆ 11 ಗಂಟೆ ಆಗಿತ್ತು. ಈ ವೇಳೆಗಾಗಲೇ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದ್ದರಿಂದ ಸಾಲುಗಟ್ಟಲೆ ವಾಹನ ನಿಂತಿದ್ದವು.

ಪ್ರಣಾಪಾಯದಿಂದ ಪಾರು: ಶುಕ್ರವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಮಳೆ ಆರಂಭವಾಗಿದೆ. ಆರಂಭದಲ್ಲಿ ಮಳೆ ಬಿರುಸಾಗಿಯೇ ಸುರಿದ ಕಾರಣ ಹೆದ್ದಾರಿಗೂ ಹೆಚ್ಚಿಗೆ ನೀರು ಸಹ ಹರಿದಿವೆ. ಇದರ ಮಾಹಿತಿ ಇಲ್ಲದೆ ಬಂದ ವಾಹನ ಸವಾರರು ಮಳೆಯ ನೀರನಲ್ಲಿ ಸಿಲುಕಿದ್ದಾರೆ. ಇದರಲ್ಲಿ ಮೂರರಿಂದ ನಾಲ್ಕು ಕಾರುಗಳ ಎಂಜಿನ್‌ಗಳಿಗೆ ನೀರು ನುಗ್ಗಿ ಅವು ಹಾಳಾಗಿವೆ. ಒಂದು ಕಾರಿನ ಒಳಗೂ ನೀರು ನುಗ್ಗಿ ಹೆದ್ದಾರಿಯಲ್ಲಿಯೇ ಕೆಟ್ಟು ನಿಂತಿದೆ. ಈ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಕಾರಿಗೆ ಡಿಕ್ಕಿಯೊಡೆದಿದ್ದು ಕಾರೂ ಜಖಂ ಗೊಂಡಿದೆ. ಆದರೆ ಕಾರಿನಲ್ಲಿದ್ದ 4 ಮಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ

ಹೆದ್ದಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದೆ ಎಂದು ವಾದ ಮಾಡುತ್ತಲೇ ಬಂದಿರುವ ಕಾಂಗ್ರೆಸ್ ಶುಕ್ರವಾರದ ಮಳೆಯಿಂದ ಉಂಟಾದ ಸಮಸ್ಯೆ ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಜೆಸಿಬಿ ಮೂಲಕ ನೀರನ್ನು ಹೊರ ಹೋಗುವಂತೆ ಮಾಡುವುದನ್ನು ತಡೆಯಲು ಮುಂದಾದ ಗಾಣಕಲ್ ನಟರಾಜ್ ನೇತೃತ್ವದ ಕಾರ್ಯಕರ್ತರು ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.