ಗಂಗಾಧರ್ ಬೈರಾಪಟ್ಟಣ ರಾಮನಗರ
ಬೆಂಗಳೂರು-ಮೈಸೂರು ದಶಪಥ ಕಾಮಗಾರಿ ಅವೈಜ್ಞಾನಿಕವಾಗಿ ನಡೆದಿದೆ ಎನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಸುರಿದ ಭಾರೀ ಮಳೆ ಹಾಗೂ ಹೆದ್ದಾರಿಯಲ್ಲಿ ಉಂಟಾದ ಪ್ರವಾಹ, ಅದರಲ್ಲೂ ಬಸವನಪುರ ಬಳಿ ಉಂಟಾದ ಅವಡದಿಂದಾಗಿ ರಾಜಕೀಯ ವಲಯದಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ವಿಜಯವಾಣಿ ಹೆದ್ದಾರಿಯಲ್ಲಿ ರಿಯಾಲಿಟಿ ಚೆಕ್ ನಡೆಸಿದ್ದು ಹಲವಾರು ಕಡೆಗಳಲ್ಲಿ ನೀರು ಹರಿಯುವ ನಾಲೆಗಳು ಮತ್ತು ಕಾಲುವೆಗಳನ್ನೇ ಮುಚ್ಚುವ ಮೂಲಕ ಕಾಮಗಾರಿ ನಡೆಸಿರುವುದು ಕಂಡು ಬಂದಿದೆ. ಇದರಿಂದಾಗಿಯೇ ಸಾರ್ವಜನಿಕರು ಈಗ ಮಾತ್ರ ಅಲ್ಲ, ಭವಿಷ್ಯದಲ್ಲಿಯೂ ತೊಂದರೆಪಡುವಂತೆ ಆಗಿದೆ.
ನಾಲೆಗೆ ನೀರೇ ಹೋಗುವುದಿಲ್ಲ
ರಾಮನಗರದ ಕೆಂಪೇಗೌಡನದೊಡ್ಡಿ ಬಳಿ ಮಂಚನೆಬೆಲೆ ಎಡದಂಡೆ ನಾಲೆಗೆ ಅಡ್ಡಲಾಗಿ ಹೆದ್ದಾರಿಗೆ ಸೇತುವೆ ನಿರ್ಮಿಸಿ ರಸ್ತೆ ಮಾಡಲಾಗಿದೆ. ಆದರೆ ಹೆದ್ದಾರಿಗಾಗಿ ನಿರ್ಮಿಸಿರುವ ಸೇತುವೆ. ನಾಲೆಯಿಂದ ಕನಿಷ್ಠ 7 ಅಡಿ ಆಳದಲ್ಲಿ ಇದ್ದು, ನಾಲೆಯಲ್ಲಿ ಹರಿದು ಹೋಗಬೇಕಾದ ನೀರು ರೈತರ ಜಮೀನುಗಳಿಗೆ ಹಾಗೂ ಹೆದ್ದಾರಿಗೆ ನುಗ್ಗುತ್ತದೆ.
ಕಾಲುವೆಯನ್ನೇ ಮುಚ್ಚಿದ್ದಾರೆ
ರಾಮನಗರದ ರಾಯರದೊಡ್ಡಿಯಿಂದ ಬಿಳಗುಂಬದ ಜಲಸಿದ್ದೇಶ್ವರ ಬೆಟ್ಟಕ್ಕೆ ಹೋಗುವ ದಾರಿಗೆ ಅಂಡರ್ಪಾಸ್ ನಿರ್ಮಿಸಲಾಗಿದೆ. ಅಂಡರ್ಪಾಸ್ ನಿರ್ಮಾಣ ವೇಳೆ ಬಿಳಗುಂಬ ಭಾಗದಿಂದ ಮಳೆಗಾಲದಲ್ಲಿ ನೀರು ಹರಿದು ಬೋಳಪ್ಪನಹಳ್ಳಿ ಕೆರೆಗೆ ಸೇರುತ್ತದೆ. ಆದರೆ ಮಳೆ ನೀರು ಹರಿಯುತ್ತಿದ್ದ ಕಾಲುವೆಯನ್ನೇ ಮುಚ್ಚಲಾಗಿದೆ. ಇದರಿಂದಾಗಿ ನೀರು ಹೆದ್ದಾರಿಯ ಬೈಪಾಸ್ನಲ್ಲಿ ಸಂಗ್ರಹವಾಗುತ್ತದೆ. ಸೋಮವಾರ ಇದೇ ನೀರಿನಲ್ಲಿ ಬಸ್ ಮುಳುಗಿ ಸುಮಾರು 50 ಪ್ರಯಾಣಿಕರು ಪ್ರಾಣಾಪಾಯಕ್ಕೆ ಸಿಲುಕುವಂತೆ ಆಗಿತ್ತು. ಒಂದು ವೇಳೆ ಇಲ್ಲಿ ಪೈಪ್ಗಳನ್ನು ಅಳವಡಿಸಿ ನೀರು ಹರಿಯಲು ಅವಕಾಶ ಮಾಡಿಕೊಡಬೇಕಿದ್ದರೆ, ರಸ್ತೆಯನ್ನೇ ಅಗೆಯಬೇಕಿದೆ.
ಪೈಪ್ ಅಳವಡಿಕೆ ಅವೈಜ್ಞಾನಿಕ
ರಾಮನಗರದ ಕೆಂಪೇಗೌಡನದೊಡ್ಡಿ, ದೇವರಸನೇಗೌಡನದೊಡ್ಡಿ ಮತ್ತು ರಾಮದೇವರ ಬೆಟ್ಟಕ್ಕೆ ನಿರ್ಮಿಸಿರುವ ಅಂಡರ್ಪಾಸ್ಗಳ ಬಳಿಯೂ ಅವೈಜ್ಞಾನಿಕವಾಗಿ ಸಿಮೆಂಟ್ ಪೈಪ್ಗಳನ್ನು ಹಾಕಲಾಗಿದೆ. ಹಿಂದಿನಿಂದಲೂ ಇದ್ದ ಕಾಲುವೆಗಳನ್ನು ಬಿಟ್ಟು ಅವುಗಳಿಗೆ ಪರ್ಯಾಯವಾಗಿ ಮೂಲ ನಾಲೆಗಳನ್ನು ಬಿಟ್ಟು ಪೈಪ್ಗಳ ಮೂಲಕ ಹರಿಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದಾಗಿ ಭಾರಿ ಮಳೆಯಲ್ಲಿ ನೀರು ಕಾಲುವೆಗಳಿಗೆ ಹರಿಯಲು ಆಗದೆ ರಸ್ತೆಯಲ್ಲಿಯೇ ಹರಿದು ಕಂದಕ ನಿರ್ಮಾಣವಾಗಿವೆ.
ಬಂಡೆ ಬೀಳುವ ಆತಂಕ
ಬಸವನಪುರದಿಂದ ಬೈರಾಪಟ್ಟಣದವರೆಗೆ ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ ಸುಮಾರು 23 ಕಿಮೀ ಉದ್ದದ ಬೈಪಾಸ್ ನಿರ್ಮಿಸಲಾಗಿದೆ. ಇಲ್ಲಿ ಹಲವಾರು ಬೆಟ್ಟಗಳು ಮತ್ತು ಹೆಬ್ಬಂಡೆಗಳನ್ನು ಒಡೆಯಲಾಗಿದೆ. ಆದರೆ ಈಗ ಈ ಬೆಟ್ಟಗಳು ಮತ್ತು ಬಂಡೆಗಳು ಕುಸಿಯುವ ಹಂತಕ್ಕೆ ಬಂದಿದೆ. ಬೈಪಾಸ್ನಲ್ಲಿ ಓಡಾಡುವ ಪ್ರಯಾಣಿಕರ ಮೇಲೆ ಯಾವುದೇ ಸಂದರ್ಭದಲ್ಲಿಯೂ ಬಂಡೆಗಳು ಮತ್ತು ಮಣ್ಣು ಕುಸಿಯುವ ಆತಂಕವಿದ್ದು, ಈ ಬಗ್ಗೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿ ಕ್ರಮ ಕೈಗೊಳ್ಳಬೇಕಿದೆ.
ಹೆದ್ದಾರಿಯನ್ನು ಪೂರ್ಣವಾಗಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗದು. ಅನಿರೀಕ್ಷಿತ ಮಳೆಯಿಂದಾಗಿ ಕೆಲವು ನಡೆಗಳಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಕ್ಕೆ ಬರುತ್ತಿದ್ದು, ಅವರ ಗಮನಕ್ಕೂ ಮುಖ್ಯಮಂತ್ರಿಗಳು ಈ ವಿಚಾರವನ್ನು ತರಲಿದ್ದಾರೆ.
ಡಾ.ಸಿ.ಎನ್.ಅಶ್ವತ್ಥನಾರಾಯಣ, ಜಿಲ್ಲಾ ಉಸ್ತುವಾರಿ ಸಚಿವರು, ರಾಮನಗರ
ಬೆಂಗಳೂರು-&ಮೈಸೂರು ದಶಪಥ ಹೆದ್ದಾರಿ ಅಂಡರ್ಪಾಸ್ಗಳ ನಿರ್ಮಾಣವೇ ಅವೈಾನಿಕವಾಗಿದೆ. ಈ ಬಗ್ಗೆ ಹಲವಾರು ಬಾರಿ ಹೇಳಿದ್ದರೂ ಸರಿಪಡಿಸುವ ನಿಟ್ಟಿನಲ್ಲಿ ಯಾರೂ ಗಮನಹರಿಸುತ್ತಿಲ್ಲ. ಭವಿಷ್ಯದ ದೃಷ್ಟಿಯಿಂದಲೂ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಲ್ಲಿ ರಾಜಕೀಯ ಮಾಡುವ ಅಗತ್ಯವೂ ನನಗಿಲ್ಲ. ಸರ್ಕಾರದ ಹಣದ ಸಂಪೂರ್ಣ ಲಾಭ ಜನತೆಗೆ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ.
ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ