ಜಿಲ್ಲೆ

ಲಾಭ ಕಡಿಮೆ, ನಷ್ಟವಂತೂ ಇಲ್ಲ

ಗಂಗಾಧರ ಬಿ ವಿ
ತಾಳವಾಡಿಯ ಮಾದರಿ ರೈತ ಚೇತನ್​ ಕುಮಾರ್​ಓದಿದ್ದು ಇಂಜಿನಿಯರಿಂಗ್​, ಕೃಷಿಯಲ್ಲಿ ಬದುಕು

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ
ಪ್ರಸ್ತುತ ಯುವ ಪೀಳಿಗೆ ಕೃಷಿಯತ್ತ ಚಿತ್ತ ಹರಿಸುವುದು ಅಪರೂಪ. ಆದರೆ ಡಿಪ್ಲೊಮಾ ಮೆಕಾನಿಕಲ್​ ಇಂಜಿನಿಯರಿಂಗ್​ ಓದಿರುವ ಯುವಕನೊಬ್ಬ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಛಲದಿಂದ ಮಾದರಿ ಕೃಷಿಕನಾಗಿ ಗುರುತಿಸಿಕೊಂಡಿದ್ದು, ಆದಾಯವನ್ನೂ ಗಳಿಸುತ್ತಿದ್ದಾರೆ. ಅವರೇ ರಾಮನಗರ ತಾಲೂಕು ಕೂಟಗಲ್​ ಹೋಬಳಿ ತಾಳವಾಡಿ ಗ್ರಾಮದ ಯುವ ರೈತ ಟಿ.ಸಿ. ಚೇತನ್​ ಕುಮಾರ್​.

ಇವರು ಒಂದಲ್ಲ, ಎರಡಲ್ಲ, ಹತ್ತಾರು ಬೆಳೆ ಬೆಳೆಯುತ್ತಿದ್ದು, ಕೃಷಿ, ತೋಟಗಾರಿಕೆ, ಅರಣ್ಯ ಮೇವಿನ ಬೆಳೆ, ಹೈನುಗಾರಿಕೆ, ಮೀನು ಕೃಷಿ ಜತೆಗೆ ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡು ಹೊಸ ಹೊಸ ಬೆಳೆಗಳತ್ತ ಚಿತ್ತ ಹರಿಸಿದ್ದು, ಲಾಭದಾಯಕ ಜೀವನ ಕಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಅಪರೂಪವಾಗಿ ಬೆಳೆಯುವ ಡ್ರ್ಯಾಗನ್ ಫ್ರೂಟ್​​ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ರಾಜ್ಯದಲ್ಲಿ ಡ್ರ್ಯಾಗನ್ ಫ್ರೂಟ್​ ಬೆಳೆಯುವವರು ವಿರಳ. ರಾಮನಗರ ಜಿಲ್ಲೆಯಲ್ಲೂ ಬೆರಳೆಣಿಕೆಯಷ್ಟು ರೈತರು ಈಗೀಗ ಡ್ರ್ಯಾಗನ್ ಫ್ರೂಟ್  ಕೃಷಿಯಲ್ಲಿ ತೊಡಗಿದ್ದಾರೆ. ಕೃಷಿ ಇಲಾಖೆ, ನರೇಗಾ, ತೋಟಗಾರಿಕೆ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಚೇತನ್​ ಕುಮಾರ್​ ತಮ್ಮ ಜಮೀನಿನಲ್ಲಿ ಹತ್ತಾರು ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.

ಪಪ್ಪಾಯಿ, ಮುಸುಕಿನಜೋಳ, ಮೆಣಸಿನಕಾಯಿ, ರೇಷ್ಮೆ, ಮಾವು, ತೆಂಗು, ರಾಗಿ, ನುಗ್ಗೆ, ಜಾನುವಾರು ಮೇವು, ತರಕಾರಿ ಬೆಳೆಗಳ ಕೃಷಿ ಜತೆಗೆ ಆಲ, ಅರಳಿ, ಹೆಬ್ಬೇವು, ಅರ್ಕಿಲಸ್​, ಹೊಂಗೆ, ತೇಗ, ಸಿಲ್ವರ್​ ಅರಣ್ಯ ಮರಗಳನ್ನು ಬೆಳೆಸಿದ್ದಾರೆ. ಪಪ್ಪಾಯ ತೋಟದಲ್ಲಿ ಮೂಲಂಗಿ, ಅಲಸಂದೆ ಮಿಶ್ರ ಬೆಳೆಯಾಗಿ ಬೆಳೆಯುತ್ತಿದ್ದಾರೆ. ಬೆಳೆಗಳಿಗೆ ಹೆಚ್ಚಾಗಿ ರಸಗೊಬ್ಬರ ನೀಡದೆ ಕೊಟ್ಟಿಗೆ ಗೊಬ್ಬರ ನೀಡುವ ಚೇತನ್​ ಕುಮಾರ್​ ಸಾವಯವ ಕೃಷಿಗೆ ಒತ್ತು ನೀಡಿದ್ದಾರೆ.

50 ರೂಪಾಯಿ
ತಾವು ಬೆಳೆಯುವ ಡ್ರ್ಯಾಗನ್ ಫ್ರೂಟ್ ​ಗೆ ಮಾರುಕಟ್ಟೆಯನ್ನು ಹುಡುಕಿಕೊಂಡಿರುವ ಚೇತನ್​ ಕುಮಾರ್​ ಬೇಡಿಕೆ ಹೆಚ್ಚಿಸಿಕೊಳ್ಳುವಲ್ಲಿಯೂ ಯಶಸ್ಸು ಕಂಡಿದ್ದಾರೆ. ತಿಂಗಳಿಗೊಮ್ಮೆ ಕೊಯ್ಲು ಮಾಡಬಹುದಾದ ಹಣ್ಣು ಇದಾಗಿದ್ದು, ಒಂದು ಕೊಯ್ಲಿಗೆ 400-450 ಹಣ್ಣು ಬರುತ್ತದೆ. ಒಂದು ಹಣ್ಣಿಗೆ 50 ರೂ.ನಂತೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ.

ಹನಿ ನೀರಾವರಿ
12 ಎಕರೆ ಜಮೀನಿನಲ್ಲಿ ಕೃಷಿ. ನಾಲ್ಕು ಬೋರ್​ವೆಲ್​ ಕೊರೆಸಿದ್ದು, ಎರಡರಲ್ಲಿ ನೀರು ಸಿಕ್ಕಿದೆ. ಜಮೀನಿನಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಕೃಷಿಗೆ ಬಳಸುತ್ತಾರೆ. ಪತ್ನಿ, ಸೋದರ ತೇಜಸ್​ ಕೂಡ ಚೇತನ್​ಕುಮಾರ್​ಗೆ ಕೃಷಿಯಲ್ಲಿ ಹೆಗಲು ಕೊಟ್ಟಿದ್ದಾರೆ. ತಂದೆ, ತಾಯಿ ಕೂಡ ನೆರವು ನೀಡುತ್ತಿದ್ದಾರೆ. 2 ಎಕರೆಯಲ್ಲಿ ಮಾವು, 30 ಗುಂಟೆಯಲ್ಲಿ ಡ್ಟ್ರ್ಯಾಗನ್ ಫ್ರೂಟ್​​, ಪಪ್ಪಾಯ, ರೇಷ್ಮೆ, ಜಾನುವಾರು ಮೇವು, ಬೇಬಿ ಕಾರ್ನ್​ ಜೋಳ, ತೆಂಗು, ರಾಗಿ, ತರಕಾರಿ ಬೆಳೆಗಳು ತಲಾ ಒಂದು ಎಕರೆ ಪ್ರದೇಶದಲ್ಲಿವೆ. ಜತೆಗೆ ಮಿಶ್ರ ಬೇಸಾಯದಲ್ಲಿ ತರಕಾರಿ, ಸೊಪ್ಪು ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಯಂತ್ರ ಬಳಕೆ
ಕೃಷಿ ಕಾರ್ಯಕ್ಕೆ ಕಾರ್ಮಿಕರ ಕೊರತೆ ಇರುವ ಕಾರಣ ಟ್ರ್ಯಾಕ್ಟರ್​ ಖರೀದಿಸಿರುವ ಚೇತನ್​ ಕುಮಾರ್​, ಪವರ್​ ವೀಡರ್​, ಗುಂಡಿ ತೆಗೆಯುವ ಯಂತ್ರ, ಮೇವು ಕಟಾವು ಯಂತ್ರ ಇತರ ಕೃಷಿ ಯಂತ್ರಗಳ ಮೂಲಕ ಕೃಷಿ ಮಾಡುತ್ತಿದ್ದಾರೆ. ಕೃಷಿ ಹೊಂಡ ನಿರ್ಮಿಸಿ ಕೊಳವೆಬಾವಿಗಳಲ್ಲಿ ಅಂತರ್ಜಲ ರಕ್ಷಣೆ ಮಾಡಿದ್ದಾರೆ. ಕೃಷಿ ಹೊಂಡದಲ್ಲಿ ಮೀನು ಸಾಕಣೆ ಕೂಡ ಮಾಡುತ್ತಿದ್ದಾರೆ.

ಜಾನುವಾರು ಸಾಕಣೆ
ಹೈನುಗಾರಿಕೆಯಲ್ಲೂ ತೊಡಗಿರುವ ಚೇತನ್​ಕುಮಾರ್​ ಹಸು ಸಾಕುತ್ತಿದ್ದು, ಗುಣಮಟ್ಟದ ಹಾಲು ಉತ್ಪಾದಿಸಿ ಲಾಭ ಕಾಣುತ್ತಿದ್ದಾರೆ. ಇವರ ಬಳಿ ಹಳ್ಳಿಕಾರ್​ ತಳಿ ಹಸುಗಳಿವೆ. ಇರುವ ಜಾನುವಾರುಗಳನ್ನು ಬಳಸಿಕೊಂಡು ಸಣ್ಣಪುಟ್ಟ ಕೃಷಿ ಕಾರ್ಯ ಮಾಡುತ್ತಾರೆ.

ಪ್ರಶಸ್ತಿ
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಚೇತನ್​ ಕುಮಾರ್​ ಅವರ ಸಾಧನೆ ಗುರ್ತಿಸಿ 2022 ರ ನವೆಂಬರ್​ನಲ್ಲಿ "ತಾಲೂಕು ಪ್ರಗತಿಪರ ಯುವ ರೈತ' ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದೆ.


ಕೃಷಿ ನಿತ್ಯ ಹೊಸ ಪಾಠ ಕಲಿಸುತ್ತಿದೆ. ಲಾಭ ಕಡಿಮೆ ಇರಬಹುದು, ಆದರೆ ನಷ್ಟವಾಗಿಲ್ಲ. ಸ್ಟ್ರಾಬೆರಿ ಉತ್ತಮ ಫಸಲು ನೀಡುತ್ತಿದೆ. ಮಾರಾಟಕ್ಕೆ ಯಾವುದೇ ಸಮಸ್ಯೆ ಇಲ್ಲ. ಮುಂದೆ ಅದರ ವಿಸ್ತೀರ್ಣ ಹೆಚ್ಚು ಮಾಡಬೇಕು. ಜತೆಗೆ ರ್ಖಜೂರ ಮತ್ತಿತರ ವಿಶೇಷ ಬೆಳೆ ಬೆಳೆಯಬೇಕೆಂಬ ಹಂಬಲ ಇದೆ. ಕಡಿಮೆ ನೀರು ಬಳಸಿ ಬೆಳೆಯಬಹುದಾದ ಬೆಳೆಗಳ ಬಗ್ಗೆ ಚಿಂತನೆ ನಡೆಸಿದ್ದೇನೆ.
 ಟಿ.ಸಿ. ಚೇತನ್​ಕುಮಾರ್​

ಚೇತನ್​ಕುಮಾರ್​ ಮಾದರಿ ಕೃಷಿಕರಾಗಿದ್ದು, ಹೊಸ ತಳಿಯ ಬಗ್ಗೆ ಅನ್ವೇಷಣೆ ಮಾಡುತ್ತಿರುತ್ತಾರೆ. ಮಿಶ್ರ ಬೇಸಾಯ ಸೇರಿ ಹತ್ತಾರು ಕೃಷಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಇಲಾಖೆ ಕೂಡ ಕೃಷಿಗೆ ಪೂರಕವಾದ ಕಾರ್ಯಕ್ರಮಗಳ ಮೂಲಕ ಅವರಿಗೆ ನೆರವು ಕಾಲಕಾಲಕ್ಕೆ ಮಾಹಿತಿ ಪ್ರೋತ್ಸಾಹಿಸುತ್ತಿದೆ.
ಪ್ರದಿಪ್​, ಕೃಷಿ ಅಧಿಕಾರಿ, ಕೂಟಗಲ್​