ರಾಮನಗರ: ನವ ರಾಮನಗರ ನಿರ್ಮಾಣದ ಕನಸನ್ನು ಹೊತ್ತಿದ್ದು, ಇದನ್ನು ಸಾಕಾರಗೊಳಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ನೂತನ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮನವಿ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನಗರ ಕಳೆದ 25 ವರ್ಷಗಳಿಂದಲೂ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸಿದೆ. ಈ ಹಿನ್ನಲೆಯಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಮೂಲಕ ರಾಮನಗರವನ್ನು ನವ ರಾಮನಗರವನ್ನಾಗಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ರಾಮನಗರದಲ್ಲಿ ರಸ್ತೆ, ಚರಂಡಿ, ಸೂರು, ನೀರು ಎಲ್ಲದರ ಸಮಸ್ಯೆಯೂ ಇದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎನ್ನುವ ಭೇದ ಭಾವ ಮಾಡದೆ ಕೂಡಲೇ ಎಲ್ಲವನ್ನು ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದೇನೆ.
ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳ ಅವಧಿಯಲ್ಲಿ ನಡೆದಂತೆ ಹಗರಣಗಳು, ಲಂಚಮಯವಾದ ವಾತಾವರಣ ನಿರ್ಮಾಣವಾಗದಂತೆ ಆಢಳಿತವನ್ನು ನೀಡಲು ಶ್ರಮಿಸುವುದಾಗಿ ಇಕ್ಬಾಲ್ ಹುಸೇಸ್ ತಿಳಿಸಿದರು.
ಕ್ಷೇತ್ರದ ಕ್ಷೇತ್ರದ ನನ್ನ ಮೊದಲ ಆದ್ಯತೆ ಸೂರು ಮತ್ತು ನೀರು ಆಗಿದ್ದು ಈಗಾಗಲೇ 10 ಸಾವಿರ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ. ಈ ನಿಟ್ಟಿನಲ್ಲಿ ನನಗೆ ಪಕ್ಷದ ಕಾರ್ಯಕರ್ತರು ಮುಖಂಡರು ಮತ್ತು ಮತದಾರರು ಬೆನ್ನೆಲುಬಾಗಿ ನಿಲ್ಲಬೇಕು ಎಂದು ಕೋರಿದರು.
ಕಾಂಗ್ರೆಸ್ ಪಕ್ಷದಿಂದ ನೀಡಲಾಗಿರುವ ಗಿಫ್ಟ್ ಕಾರ್ಡುಗಳನ್ನು ಮುಂದಿನ ಒಂದು ತಿಂಗಳ ಒಳಗಾಗಿ ಕೊಡಿಸಿಕೊಡಲಾಗುವುದು. ಇದು ಮತದಾರರು ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಒಂದು ಸಂಬಂಧವಷ್ಟೇ ಎಂದು ತಿಳಿಸಿದರು.
ನಾನು ಸಹ ರಾಮನ ಭಕ್ತನಾಗಿದ್ದು ರಾಮನನ್ನು ಪೂಜಿಸುತ್ತೇನೆ ಎಂದು ಹೇಳಿದ ಇಕ್ಬಾಲ್ ಹುಸೇನ್, ರಾಮಮಂದಿರ ನಿರ್ಮಾಣ ಸಂಬಂಧ ಯಾವುದೇ ಸ್ಪಷ್ಟ ಉತ್ತರ ನೀಡಲಿಲ್ಲ.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ. ರಾಜು, ಕೆ. ಶೇಷಾದ್ರಿ, ಬಿ.ಕೆ. ಪವಿತ್ರ, ಪಾರ್ವತಮ್ಮ, ಚೇತನ್ ಕುಮಾರ್ ಮುಂತಾದವರು ಇದ್ದರು.
ನಾಲ್ಕು ದಿನ ರಾಮನಗರದಲ್ಲಿ
ರಾಮನಗರದಲ್ಲಿ ವಾರದ ನಾಲ್ಕು ದಿನಗಳ ಕಾಲ ಸಾರ್ವಜನಿಕರ ಸೇವೆಗೆ ಲಭ್ಯವಿದ್ದು ಅಧಿವೇಶನದ ದಿನಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸಮಯದಲ್ಲೂ ಸಾರ್ವಜನಿಕರಿಗೆ ದೊರೆಯುತ್ತೇನೆ. ಕ್ಷೇತ್ರದ ಮತದಾರರಿಗೆ ಅನುಕೂಲವಾಗುವ ಸ್ಥಳದಲ್ಲಿ ಕಚೇರಿಯನ್ನು ತೆರೆಯಲಾಗುವುದು ಎಂದು ಇಕ್ಬಾಲ್ ಹುಸೇನ್ ಇದೇ ವೇಳೆ ಭರವಸೆ ನೀಡಿದರು.