ರಾಮನಗರ: ಅನಿವಾರ್ಯಕ್ಕೆ ಕಳ್ಳರೂ ಸಿಕ್ಕಿದ್ದನ್ನೆಲ್ಲಾ ದೋಚುವುದನ್ನು ಕೇಳಿದ್ದೇವೆ. ಕೆಲವೊಮ್ಮೆಯಂತೂ ಸಿಕ್ಕಷ್ಟೇ ಲಾಭ ಎಂದುಕೊಂಡು ಸಿಕ್ಕಿದ್ದನ್ನೆಲಾ ಬಾಚಿಕೊಂಡು ಹೋಗಿ ಬಿಡುತ್ತಾರೆ ಕಳ್ಳರು.
ಇದೀಗ ರಾಮನಗರದಲ್ಲೂ ಇಂತದ್ದೇ ಒಂದು ವಿಲಕ್ಷಣ ಕಳ್ಳತನ ಪ್ರಕರಣ ನಡೆಸಿದೆ. ಘನತಾಜ್ಯ ವಿಲೇವಾರಿಗಾಗಿ ನಿರ್ಮಿಸಿದ್ದ ಘಟಕದ ತಗಡಿನ ಮೇಲ್ಚಾವಣಿಯನ್ನೇ ಕಳ್ಳರು ರಾತ್ರೋರಾತ್ರಿ ಕದ್ದೋಯ್ದಿದ್ದಾರಿ.
ತಾಲೂಕಿನ ಕಸಬಾ ಹೋಬಳಿಯ ಮಾಯಗಾನಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಮಾಯಗಾನಹಳ್ಳಿ ಸಮೀಪ ನಿಮಾರ್ಣ ಮಾಡಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಮೇಲ್ಚಾವಣೆ ಕಬ್ಬಿಣ ತಗಡಿನ ಶೀಟ್ಗಳನ್ನು ಶುಕ್ರವಾರ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ.
ಗ್ರಾಪಂನ ಘನತ್ಯಾಜ್ಯ ವಿಲೇವಾರಿ ಘಟಕ ವಸತಿ ಪ್ರದೇಶದಿಂದ ದೂರ ಇರುವ ಕಾರಣ ಕಳ್ಳರು ಸುಲಭವಾಗಿ ಘನತ್ಯಾಜ್ಯ ಘಟಕದ ಮೇಲ್ಚಾವಣೆಯ ಎಲ್ಲಾ ಸೀಟುಗಳನ್ನು ಕಳಚಿ ಕದ್ದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಕಳ್ಳತನ ಪ್ರಕರಣ ಕಂಡು ಬಂದಿದೆ. ಕೂಡಲೇ ಗ್ರಾಪಂ ಅಧ್ಯಕ್ಷ ರಂಜಿತ್, ಪಿಡಿಓ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಕಳ್ಳರನ್ನು ಹಿಡಿದು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದಾರೆ.