ರಾಮನಗರ: ಹಾರೋಹಳ್ಳಿ ತಾಲೂಕು ಮರಳವಾಡಿ ಹೋಬಳಿಯ ಕಣಿವೆ ಮಾದಾಪುರ ಗ್ರಾಮದಲ್ಲಿ ಅಕ್ರಮವಾಗಿ ಬೆಳೆದಿದ್ದ ಹಸಿ ಗಾಂಜ ಸಸಿ ಹಾಗು ಒಣಗಾಂಜ ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಭೇದಿಸುವಲ್ಲಿ ಕನಕಪುರ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಣಿವೆ ಮಾದಾಪುರ ಗ್ರಾಮದ ಗರುಡಯ್ಯ ಎಂಬುವವರಿಗೆ ಸೇರಿದ ರೇಷ್ಮೆ ತೋಟದಲ್ಲಿ ನಂಜುಂಡಯ್ಯ (55) ಎಂಬ ಆರೋಪಿ ಅಕ್ರಮವಾಗಿ ಬೆಳೆದಿದ್ದ ಸುಮಾರು 9 ಕೆ.ಜಿ. ಹಸಿ ಗಾಂಜಾ ಸಸಿಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಆನೆಕಲ್ ರಸ್ತೆಯ ಕಣಿವೆ ಮಾದಾಪುರದ ಬಳಿ ಅಕ್ರಮವಾಗಿ ಶೇಖರಿಸಿದ್ದ 320 ಗ್ರಾಂ ಒಣಗಾಂಜವನ್ನು ಜಪ್ತಿಮಾಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ರಾಮನಗರ ಜಿಲ್ಲಾ ಹಾಗು ಬೆಂಗಳೂರು ದಕ್ಷಿಣ ವಿಭಾಗದ ಜಂಟಿ ಆಯುಕ್ತರು ಮತ್ತು ರಾಮನಗರ ಜಿಲ್ಲಾ ಉಪಅಧೀಕ್ಷಕರ ಮಾರ್ಗದರ್ಶನದ ಮೇರೆಗೆ ಕನಕಪುರ ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂಧಿಗಳು ಧಾಳಿ ನಡೆಸಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.