ಜಿಲ್ಲೆ

ಅನ್ಯಾಯಕಾರಿ ಬ್ರಹ್ಮ ಸಿನಿಮಾದಲ್ಲಿ ಹಿರಿಯ ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ನಟನೆ

ರಾಮನಗರ: ಜಾನಪದದಲ್ಲಿ ಸಂಸ್ಕೃತಿ, ಆಚಾರ-ವಿಚಾರ ಎಲ್ಲವೂ ಅಡಗಿದೆ. ಯುವಪೀಳಿಗೆ ಜಾನಪದ ಕಲಿಯುವ ಮೂಲಕ ಅದರ ಸಾರ ತಿಳಿಯಬೇಕು ಎಂದು ಹಿರಿಯ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹೇಳಿದರು.

ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಳದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್  ಹಮ್ಮಿಕೊಂಡಿದ್ದ 27ನೇ ತಿಂಗಳ ಕಲಾ ಬೆಳಕು ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್, ಟಿವಿ ಬಂದ ಬಳಿಕ ಜಾನಪದ ಕಲೆ ಕಮರಿದೆ. ಆದರೆ, ಇತ್ತೀಚೆಗೆ ಯುವ ಮನಸ್ಸುಗಳು ಜಾನಪದ ಕಲಿಯಲು ಆಸಕ್ತಿ ತೋರುತ್ತಿವೆ. ಜಾನಪದ ಹಾಡನ್ನು ಮೂಲ ಪದ ಜೋಡಣೆಯಲ್ಲೇ ಹಾಡಿದರೆ ಮತ್ತಷ್ಟು ಇಂಪು. ಕೆಲವರು ಮೂಲಪದ ಬಳಕೆ ಬಿಟ್ಟು ವ್ಯತ್ಯಾಸ ಮಾಡಿ ಹಾಡುತ್ತಾರೆ ಎಂದರು.

ಕನ್ನಡದ ಬಹುತೇಕ ಸಿನಿಮಾಗಳು ಜಾನಪದದ ತಿರುಳಿನೊಂದಿಗೆ ನಿರ್ಮಿಸಿದ್ದಿದೆ. ಜಾನಪದ ಹಾಡು ಬರೆದು, ಹೇಳಿ ಕಲಿಸುವುದಲ್ಲ. ಹಾಡುತ್ತಾ ಸಾಧಕರ ಜತೆ ತಾಳ, ತಂಬೂರಿ ಜತೆ, ಶ್ರದ್ಧೆಯಿಂದ ಕಲಿತರೆ ಒಲಿಯುತ್ತದೆ. ಕಲಿಯುವ ಆಸಕ್ತಿ ಇರುವ ಯುವಕರಿಗೆ ನಾನು ಕಲಿತ ವಿದ್ಯೆ ಧಾರೆ ಎರೆಯುತ್ತೇನೆ ಎಂದರು.

ಸಾಹಿತಿ ರವಿಕುಮಾರ್ ಅವರು ಬರೆದ ಹಗಲಲ್ಲು ನಿನ್ನದೇ ಧ್ಯಾನ, ಕನಸೆಲ್ಲಾ ನೀನೆ ಸ್ವಾಮಿ, ಮನೆ ದೇವ ಮಹದೇಶ್ವರ ಪದ ನನ್ನ ದಿಕ್ಕನ್ನೇ ಬದಲಿಸಿತು. ಅಲ್ಲಿಂದ ಈಚೆಗೆ ನನ್ನನ್ನು ಜಾನಪದ ಗಾಯಕನೆಂದು ಸಮಾಜ ಗುರುತಿಸಿತು. ಇಂದು ಜಾನಪದದಲ್ಲೇ ಜೀವನ ಕಟ್ಟಿಕೊಂಡಿದ್ದೇನೆ. ನನ್ನೆಲ್ಲ ಯಶಸ್ಸಿಗೆ ಮಹದೇಶ್ವರನೇ ದೊರೆ ಎಂದರು.

ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಮಾತನಾಡಿದರು.  ಮಳವಳ್ಳಿ ಮಹದೇವಸ್ವಾಮಿ ಅವರಿಗೆ ಕರುನಾಡ ಜಾನಪದ ಜಂಗಮ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಭರತನಾಟ್ಯ ಕಲಾವಿದೆ ಚಿತ್ರಾರಾವ್, ಪಿರಮಿಡ್ ಧ್ಯಾನ ಕೇಂದ್ರದ ಪುಟ್ಟಸ್ವಾಮಿ, ರಾಜಶೇಖರ್ ಇದ್ದರು.

ಅನ್ಯಾಯಕಾರಿ ಬ್ರಹ್ಮ ಹಾಡು ಜಾನಪದದ ಹಾಡು, ಇದನ್ನು ಯಾರೋ ಬರೆದಿರುವುದಲ್ಲ. ನನ್ನ ತಾಯಿ ಹೇಳಿಕೊಟ್ಟಿದ್ದು, ಲಕ್ಷಾಂತರ ಜನರು ಈ ಹಾಡು ಕೇಳಿದ್ದಾರೆ. ಆದರೆ, ಕೆಲವರು ಹೆಚ್ಚಾಗಿ ತಮಾಷೆಗಾಗಿ ಮೊಬೈಲ್‌ನಲ್ಲಿ ಬಳಸುತ್ತಿದ್ದಾರೆ. ಸಿನಿಮಾ ನಿರ್ಮಾಪಕರೊಬ್ಬರು ಅನ್ಯಾಯಕಾರಿ ಬ್ರಹ್ಮ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಅದರಲ್ಲಿ ನನಗೆ ಪಾತ್ರ ಮತ್ತು ಹಾಡು ಹಾಡಲು ಹೇಳಿದ್ದು, ಒಪ್ಪಿಗೆ ಸೂಚಿಸಿದ್ದೇನೆ.

ಮಳವಳ್ಳಿ ಮಹದೇವಸ್ವಾಮಿ, ಜನಪದ ಹಾಡುಗಾರ