ಜಿಲ್ಲೆ

ಚನ್ನಪಟ್ಟಣದಲ್ಲಿ 17ರಂದು ಮಹದೇಶ್ವರ ದೇಗುಲ ಲೋಕಾರ್ಪಣೆ

ಗಂಗಾಧರ ಬಿ ವಿ

ವಿಜಯವಾಣಿ ಸುದ್ದಿಜಾಲ ಚನ್ನಪಟ್ಟಣ

ತಾಲೂಕಿನ ಮಹದೇಶ್ವರ ನಗರದಲ್ಲಿ ನಿರ್ಮಾಣವಾಗಿರುವ ಮಹದೇಶ್ವರ ದೇವಾಲಯದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಮಾ.17ರಂದು ನಡೆಯಲಿದೆ ಎಂದು ಮಹದೇಶ್ವರಸ್ವಾಮಿ ಭಕ್ತಮಂಡಳಿ ತಿಳಿಸಿದೆ.

ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಮತ್ತು ಭಕ್ತರ ಸಹಕಾರದಿಂದ ಭವ್ಯ ದೇವಾಲಯ ನಿರ್ಮಾಣಗೊಂಡಿದ್ದು, ಲೋಕಾರ್ಪಣೆಗೂ ಮುನ್ನ 15ರಿಂದಲೇ ದೇವಾಲಯದ ಆವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 15 ಕೋಟಿ ರೂ. ವೆಚ್ಚದಲ್ಲಿ ದೇವಾಲಯ ನಿರ್ಮಾಣಗೊಂಡಿದ್ದು, ಇದರೊಂದಿಗೆ ಗಣಪತಿ ಹಾಗೂ ಸುಬ್ರಹ್ಮಣ್ಯಸ್ವಾಮಿ ದೇವಾಲಯಗಳನ್ನೂ ನಿರ್ಮಾಣ ಮಾಡಲಾಗಿದೆ.

ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಶ್ರೀ ಕೃಪಾನಂದನಾಥ ಸ್ವಾಮೀಜಿ, ವಿರಕ್ತ ಮಠದ ಶ್ರೀ ಶಿವರುದ್ರ ಮಹಾಸ್ವಾಮಿ, ಗುರುವಿನಪುರ ಬೃಹನ್ಮಠದ ಶ್ರೀ ಜಗದೀಶ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿ ಹಲವು ಗುರುವರ್ಯರು ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

15ರಂದು ಬುಧವಾರ ಸಂಜೆ 4 ಗಂಟೆಗೆ ಮಹದೇಶ್ವರ ನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಗಂಗಾಪೂಜೆ ಹಾಗೂ ಶ್ರೀ ಮಹದೇಶ್ವರಸ್ವಾಮಿ, ಗಣಪತಿ ಮತ್ತು ಸುಬ್ರಹ್ಮಣ್ಯಸ್ವಾಮಿ ನೂತನ ವಿಗ್ರಹಗಳನ್ನು ಮೆರವಣಿಗೆ ಮೂಲಕ ತಂದು ಆಲಯ ಪ್ರವೇಶಿಸಲಾಗುತ್ತದೆ. 16ರ ಗುರುವಾರ ಬೆಳಗ್ಗೆ 6 ಗಂಟೆಗೆ ಸುಪ್ರಭಾತಸೇವೆ, ಗಣಪತಿ ಪೂಜೆ, ಯಾಗ ಮಂಟಪ ಪ್ರವೇಶ, ಕಳಸಾರಾಧನೆ, ಪ್ರಾಣಪ್ರತಿಷ್ಠೆ, ಉಪಚಾರ ಪೂಜೆ, ಗಣಪತಿ ಹೋಮ, ಲಘು ಪೂರ್ಣಾಹುತಿ, ಮಹಾಮಂಗಳಾರತಿ, ಮತ್ತು ಸಂಜೆ ಪ್ರಧಾನ ಮಂಡಲಾರಾಧನೆ, ರುದ್ರಹೋಮ, ನೂತನ ಶಿಲಾ ಮೂರ್ತಿಗಳ ಸಂಸ್ಕಾರ, ರಾಜೋಪಚಾರ ನಡೆಯಲಿದೆ. 17ರ ಶುಕ್ರವಾರ ಬ್ರಾಹ್ಮಿ ಮುಹೂರ್ತದಲ್ಲಿ ನೂತನ ವಿಗ್ರಹ ಬ್ರಹ್ಮಪೀಠ ಪೂಜೆ, ವಿಗ್ರಹ ಪ್ರತಿಷ್ಠಾಪನೆ ಬೆಳಗ್ಗೆ 6 ಗಂಟೆಗೆ ಸ್ವಾಮಿಗೆ ಏಕವಾರ ರುದ್ರಾಭಿಷೇಕ, ಅಲಂಕಾರ, ಶಿಖರ ಕಲಶಾರೋಹಣ, ಕುಂಭಾಭಿಷೇಕ, ವಿವಿಧ ಹೋಮಗಳು ನೆರವೇರಲಿದೆ ಎಂದು ಭಕ್ತಮಂಡಳಿ ತಿಳಿಸಿದೆ.

ಮಾದಪ್ಪನಿಗೆ ಯೋಗ 

ಮಹದೇಶ್ವರ ದಯೆ ತೋರು ಎಂದು ಅಸಂಖ್ಯಾತ ಭಕ್ತಗಣ ಮಂಡಿಯೂರಿ ಬೇಡುತ್ತಿದ್ದ ದೇವಾಲಯ ನಿರ್ಮಾಣದ ಕಾರ್ಯ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಜಿಲ್ಲೆಯ ಪ್ರಸಿದ್ಧ ದೇವಾಲಯಗಳಲ್ಲಿ ಇದು ಒಂದಾಗಿದ್ದು, ದೇವಾಲಯಕ್ಕೆ ಅಸಂಖ್ಯಾತ ಭಕ್ತಗಣವಿದೆ. ದೇವಸ್ಥಾನ ಹಳೆಯದಾಗಿದ್ದ ಕಾರಣ ತೆರವುಗೊಳಿಸಿ ಹೊಸದಾಗಿ ದೇವಾಲಯ ನಿರ್ಮಾಣ ಆರಂಭಿಸಲಾಗಿತ್ತು. ಆದರೆ, ಹಲವು ವರ್ಷಗಳಿಂದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಅರ್ಧಕ್ಕೆ ನಿಂತಿದ್ದು ಭಕ್ತರ ಬೇಸರಕ್ಕೆ ಕಾರಣವಾಗಿತ್ತು. ಇದೀಗ, ದೇವಾಲಯ ಲೋಕಾರ್ಪಣೆಗೆ ಕಾಲ ಕೂಡಿ ಬಂದಿರುವುದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

ಬೃಹತ್ ದೇವಾಲಯ

ವಿಶಾಲವಾದ ಪ್ರದೇಶದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದ್ದು, ಗರ್ಭಗುಡಿ, ಮುಖಮಂಟಪ, ಸಭಾಮಂಟಪ, ಗರುಡಗಂಬ ಹಾಗೂ ದೇವಸ್ಥಾನದ ಎಡ ಹಾಗೂ ಬಲ ಭಾಗದಲ್ಲಿ ಗಣೇಶ ಮತ್ತು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಗಳನ್ನು ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಸುತ್ತಲಿನ ರಾಜಗೋಪುರ, ಪ್ರಾಂಗಣ, ಕಲ್ಯಾಣಿ ಇನ್ನಿತರ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಯೋಜನೆಯಿದೆ. ದೇವಸ್ಥಾನದ ನಿರ್ಮಾಣ ಕೆಲಸವನ್ನು ಸೃಷ್ಟಿ ಆರ್ಕಿಟೆಕ್ಟ್ ವಾಸ್ತುಶಿಲ್ಪಿ ಕೆ.ಪಿ.ಬೆಟ್ಟಸ್ವಾಮಿ ನಿರ್ವಹಿಸಿದ್ದಾರೆ. ಇಷ್ಟು ವರ್ಷ ಚಿಕ್ಕಗುಡಿಯಲ್ಲಿ ಪೂಜೆ ಸ್ವೀಕರಿಸುತ್ತಿದ್ದ ಮಾದಪ್ಪ ಚುನಾವಣೆ ಹೊಸ್ತಿಲಿನಲ್ಲಿ ಭವ್ಯ ದೇವಾಲಯದಲ್ಲಿ ಪ್ರತಿಷ್ಠಾಪನೆ ಆಗುತ್ತಿರುವುದು ವಿಶೇಷ.