ಮಾಗಡಿ
ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಚರಂಡಿ ನೀರು ರಸ್ತೆಗೆ ಹರಿದು ಕೆರೆಯಂತಾಗಿ ಗಬ್ಬುನಾರುತ್ತಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಚರಂಡಿ ತುಂಬಿ ರಸ್ತೆಗೆ ಹರಿದು ಕೆರೆಯಂತಾಗಿದೆ. ರಸ್ತೆಬದಿ ತರಕಾರಿ, ಸೊಪ್ಪುಗಳು ಮಾರಾಟ ಮಾಡಲಾಗುತ್ತಿದ್ದು, ವಾಹನಗಳು ಸಂಚರಿಸಿದಾಗ ಚರಂಡಿಯ ನೀರು ತರಕಾರಿ, ಸೊಪ್ಪಿಗೆ ಚಿಮ್ಮುತ್ತಿದೆ. ಜತೆಗೆ ದುರ್ವಾಸನೆ ಬೀರುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಸೊಪ್ಪು, ತರಕಾರಿ ಖರೀದಿಸುವಂತಾಗಿದೆ.
ಇದೇ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಇದ್ದು, ಬ್ಯಾಂಕ್ನ ಬರುವವರು ವಾಹನಗಳನ್ನು ಪಾರ್ಕಿಂಗ್ ಮಾಡುವುದರಿಂದ ಇದು ವಾಹನ ನಿಲುಗಡೆಯ ತಾಣವಾಗಿದೆ. ಮಳೆ ಬಂದರೆ ರಸ್ತೆಯಲ್ಲಿ ನೀರು ತುಂಬಿ ಹೆಜ್ಜೆ ಇಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇದೇ ರಸ್ತೆಯಲ್ಲಿ ಪುರಸಭೆ ಅಧಿಕಾರಿಗಳು ಸಂಚರಿಸಿದರೂ ಚರಂಡಿ ಸ್ವಚ್ಛಗೊಳಿಸಲು ಮುಂದಾಗಿಲ್ಲ.
ಪಟ್ಟಣದ ಗೌರಮ್ಮನ ಕೆರೆ ಏರಿಯಿಂದ ಖಾಸಗಿ ಬಸ್ ನಿಲ್ದಾಣದವರೆಗೂ ರಸ್ತೆ ಗುಂಡಿಮಯವಾಗಿದ್ದು, ವಾಹನ ಸವಾರರು, ಸಾರ್ವಜನಿಕರು ಓಡಾಡಲು ತೊಂದರೆಯಾಗಿದೆ. ಪುರಸಭೆ ವತಿಯಿಂದ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಸಮಸ್ಯೆ ಗಮನಕ್ಕೆ ಬಂದಿಲ್ಲ. ಭಾನುವಾರ ಸ್ಥಳಕ್ಕೆ ಭೇಟಿ ನೀಡಿ ಚರಂಡಿ ಸ್ವಚ್ಛಗೊಳಿಸಿ ಸಮಸ್ಯೆ ಬಗೆಹರಿಸಲಾಗುವುದು.
ಶಿವರುದ್ರಯ್ಯ ಮುಖ್ಯಾಧಿಕಾರಿ
ರಸ್ತೆಯಲ್ಲಿ ಗುಂಡಿ ಬಿದ್ದು ಸೊಪ್ಪು , ತರಕಾರಿಗೆ ಧೂಳು ಆವರಿಸುತ್ತಿದೆ. ಮತ್ತೊಂದೆಡೆ ಚರಂಡಿ ನೀರು ತರಕಾರಿ, ಸೊಪ್ಪಿಗೆ ಸೇರುತ್ತಿದ್ದು, ಗ್ರಾಹಕರು ತರಕಾರಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಸುರೇಶ್, ತರಕಾರಿ ವ್ಯಾಪಾರಿ