???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಸಮಸ್ಯೆಗಳ ನಡುವೆಯೇ ಬದುಕು ಅಜ್ಜನಹಳ್ಳಿ, ಸಿದ್ದೇಶ್ವರ ಕಾಲನಿ, ಗುದ್ದಲಹಳ್ಳಿ ಜನರ ಸ್ಥಿತಿ

ಗಂಗಾಧರ ಬಿ ವಿ

ಎಂ.ಎಸ್. ಸಿದ್ದಲಿಂಗೇಶ್ವರ ಮಾಗಡಿ

ಗ್ರಾಮಗಳು ಅಭಿವೃದ್ಧಿಯಾದರೆ ದೇಶದ ಪ್ರಗತಿ ಎಂಬ ಮಾತಿದೆ. ಆದರೆ, ಗ್ರಾಮಗಳ ಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ.

ಮಾಗಡಿಯಿಂದ 13 ಕಿ.ಮೀ. ದೂರದಲ್ಲಿರುವ ಅಜ್ಜನಹಳ್ಳಿ, ಸಿದ್ದೇಶ್ವರ ಕಾಲನಿ, ಗುದ್ದಲಹಳ್ಳಿ ಜನರು ಸಮಸ್ಯೆಯ ನಡುವೆಯೇ ಬದುಕು ಸಾಗಿಸಬೇಕಾದ ದುಸ್ಥಿತಿ ಇದೆ. ಅಜ್ಜನಹಳ್ಳಿಯಲ್ಲಿ 7 ವರ್ಷಗಳ ಹಿಂದೆ ನಿರ್ಮಿಸಿದ್ದ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಯಿಲ್ಲದೆ ಫಿಲ್ಟರ್ ಆಗುತ್ತಿಲ್ಲ. ಅಶುದ್ಧ ನೀರನ್ನೇ ಕುಡಿಯುವಂತಾಗಿದೆ, ಕೆಲ ಚರಂಡಿಗಳು ಗಬ್ಬುವಾಸನೆ ಬೀರುತ್ತಿವೆ.

ಅಜ್ಜನಹಳ್ಳಿಯಿಂದ  ಗುದ್ದಲಹಳ್ಳಿಗೆ ತೆರಳುವ ಸುಮಾರು 400 ಬೋವಿ ಸಮುದಾಯ ಇರುವ ಎರಡು ಕಿಲೋಮೀಟರ್ ರಸ್ತೆ ಗುಂಡಿ ಬಿದ್ದು ಓಡಾಡುವುದೇ ಕಷ್ಟವಾಗಿದೆ. ಕೆರೆಯ ಬಳಿ ತಡೆಗೋಡೆಗಳಿಲ್ಲ ಹಾಗೂ ಕೆರೆ ರಸ್ತೆಯಲ್ಲಿ ದೀಪದ ವ್ಯವಸ್ಥೆ ಇಲ್ಲ. ಸ್ವಲ್ಪ ಎಚ್ಚರ ತಪ್ಪಿದರೂ ಕೆರೆಗೆ ಬೀಳುವುದು ತಪ್ಪಿದ್ದಲ್ಲ.

ಕಾಲನಿ ನಿವಾಸಿಗಳಿಗೆ ಹೆಚ್ಚಿದ ಆತಂಕ

ಮಾಗಡಿಯಿಂದ ಅಜ್ಜನಹಳ್ಳಿಗೆ ಹೋಗುವ ಮಾರ್ಗದಲ್ಲಿರುವ ಅಜ್ಜನಹಳ್ಳಿ ಸಿದ್ದೇಶ್ವರ ಕಾಲನಿಯ ಇರುಳಿಗರ ಸ್ಥಿತಿ ಹೇಳುವಂತಿಲ್ಲ. 22 ವರ್ಷಗಳ ಹಿಂದೆ ಎಚ್.ಎಂ. ರೇವಣ್ಣ ಶಾಸಕರಾಗಿದ್ದಾಗ ಪುಟ್ಟರಂಗಯ್ಯ ಎಂಬುವವರಿಂದ 1.10 ಎಕರೆ ಜಮೀನು ಖರೀದಿಸಿ ಸಿದ್ದೇಶ್ವರ ಕಾಲನಿ ನಿರ್ಮಿಸಿ ಇರುಳಿಗರಿಗೆ ನಿವೇಶನ ನೀಡಲಾಯಿತು. ಈ ನಡುವೆ ಅಜ್ಜನಹಳ್ಳಿ ಕಡೆ ಮನೆಗಳು ನಿರ್ಮಾಣವಾಗಿರುವ ಜಾಗ ನಮ್ಮದು ಎಂದು ಪುಟ್ಟರಂಗಯ್ಯ ಅವರ ಮಕ್ಕಳು ಹೇಳುತ್ತಿದ್ದು, ಮನೆ ಕಟ್ಟಿಕೊಂಡಿರುವವರ ಆತಂಕ ಹೆಚ್ಚಿಸಿದೆ.

35 ವರ್ಷಗಳಿಂದ ಇರುಳಿಗರು ಉಳುಮೆ ಮಾಡಿಕೊಂಡು ಬರುತ್ತಿದ್ದ ಹುಚ್ಚೆಳ್ಳು ಬಯಲನ್ನು ಅರಣ್ಯ ಇಲಾಖೆಯವರು ಏಕಾಏಕಿ ವಶಕ್ಕೆ ಪಡೆದಿರುವುದರಿಂದ 100ಕ್ಕೂ ಹೆಚ್ಚು ಮಂದಿಗೆ ಕೆಲಸವಿಲ್ಲದಂತಾಗಿದೆ. ಈಗ ದುಡಿಯಲು ಬೇರೆ ಗ್ರಾಮಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿದ್ಯುತ್ ಇಲ್ಲ

ಕಾಲನಿಯ ಬಹುತೇಕ ನಿವಾಸಿಗಳಿಗೆ ಹಕ್ಕುಪತ್ರ ನೀಡಿಲ್ಲ. ಕೆಲವರ ಹಕ್ಕುಪತ್ರಗಳು ಕಳೆದುಹೋಗಿವೆ. ನಿವೇಶನದ ದಾಖಲೆಗಳು ಸಮರ್ಪಕವಾಗಿಲ್ಲದ ಕಾರಣ ಮನೆ ಕಟ್ಟಿಕೊಳ್ಳಲು ಸಾಧ್ಯವಾಗದೆ ಗುಡಿಸಲುಗಳಲ್ಲೇ ಬದುಕುತ್ತಿದ್ದಾರೆ. ಶೌಚಗೃಹ, ಸ್ನಾನದ ಮನೆ ಇಲ್ಲದೆ ತೆಂಗಿನ ಗರಿಯಿಂದ ರಕ್ಷಣೆ ಪಡೆದಿದ್ದಾರೆ. ಇನ್ನು ವಿದ್ಯುತ್ ಸಂಪರ್ಕವಿಲ್ಲದೆ ವಿದ್ಯಾರ್ಥಿಗಳು ದೀಪದ ಬೆಳಕಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇದೆ.

ಎಲ್ಲದಕ್ಕೂ ಅಜ್ಜನಹಳ್ಳಿ ಮೇಲೆ ಅವಲಂಬಿತ

ಕಾಲನಿಯ 15 ಮಕ್ಕಳು ಅಜ್ಜನಹಳ್ಳಿ ಅಂಗನವಾಡಿಗೆ ಹೋಗುತ್ತಿದ್ದು, ಕಾಲನಿಯಲ್ಲೇ ಇರುವ ಪಶು ಚಿಕಿತ್ಸಾಲಯದ ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಕಾಲನಿ ನಿವಾಸಿಗಳು ಒತ್ತಾಯಿಸಿದ್ದಾರೆ. ಪಡಿತರ, ಶುದ್ಧ ನೀರು ಹೀಗೆ ಎಲ್ಲದಕ್ಕೂ ಅಜ್ಜನಹಳ್ಳಿಗೆ ಹೋಗಬೇಕಿದೆ. ಕಾಲನಿಯಲ್ಲಿಯೇ ಮೂಲಸೌಲಭ್ಯ ಒದಗಿಸಬೇಕೆಂಬುದು ನಿವಾಸಿಗಳ ಆಗ್ರಹವಾಗಿದೆ.

ಸಿಗದ ವೃದ್ಧಾಪ್ಯ ವೇತನ

ಸಿದ್ದೇಶ್ವರ ಕಾಲನಿಯಲ್ಲಿ 20ಕ್ಕೂ ಹೆಚ್ಚು ಮಂದಿ ವೃದ್ಧರಿದ್ದು, 8 ಮಂದಿಗೆ ಮಾತ್ರ ವೃದ್ಧಾಪ ವೇತನ ಸೌಲಭ್ಯ ಸಿಗುತ್ತಿದೆ. ಉಳಿದವರಿಗೆ ಸೌಲಭ್ಯ ಒದಗಿಸಲು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎನ್ನುತ್ತಾರೆ ಗ್ರಾಮದ ನಿವಾಸಿಗಳು. ಅಜ್ಜನಹಳ್ಳಿ, ಸಿದ್ದೇಶ್ವರ ಕಾಲನಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ ಹಾವಳಿ ಇದ್ದು, ಕುರಿ, ಮೇಕೆ, ಹಸುಗಳನ್ನು ಸಾಕಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

30 ವರ್ಷಗಳಿಂದ ವಾಸವಿದ್ದೇವೆ. ಹಕ್ಕುಪತ್ರ ನೀಡಿಲ್ಲ. ಇದರಿಂದ ಮನೆ ಕಟ್ಟಿಕೊಳ್ಳಲಾಗದೆ ಗುಡಿಸಲಿನಲ್ಲಿದ್ದೇವೆ. ಬೇಸಿಗೆ ಬಂದರೆ ಎಲ್ಲಿ ಬೆಂಕಿ ಬೀಳುತ್ತದೆಯೋ ಎಂಬ ಆತಂಕ. ಕೂಡಲೇ ಹಕ್ಕುಪತ್ರ ನೀಡಿ.

 ದೊಡ್ಡಬೈರಮ್ಮ, ಸಿದ್ದೇಶ್ವರ ಕಾಲನಿನ ಇವಾಸಿ

ಪೂರ್ವಿಕರ ಕಾಲದಿಂದ ಇಲ್ಲಿದ್ದೇವೆ. ನಮಗಿದ್ದ ಭೂಮಿಯನ್ನು ಅರಣ್ಯ ಇಲಾಖೆ ಕಿತ್ತುಕೊಂಡಿದೆ. ನಮಗೆ ವಯಸ್ಸಾಗಿದೆ. ಜೀವನ ಸಾಗಿಸಲು ಸರ್ಕಾರ ಭೂಮಿ ಕೊಡಬೇಕು.

ದೊಡ್ಡಮಾದಯ್ಯ. ಸಿದ್ದೇಶ್ವರ ಕಾಲನಿ ನಿವಾಸಿ