ಮಾಗಡಿ
ತಾಲೂಕಿನ ರೈತ ಸಮುದಾಯದಲ್ಲಿನ ಹಲವು ಸಮಸ್ಯೆಗಳನ್ನು ಬಗೆಹರಿಸಿ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತಸಂಘದ ಪದಾಧಿಕಾರಿಗಳು ಪಟ್ಟಣ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಬೆಂಗಳೂರಿನಿಂದ ತಾಳೇಕೆರೆಹ್ಯಾಡ್ ಪೊಸ್ಟ್‌ವರೆಗೆ ನಿರ್ಮಾಣವಾಗುತ್ತಿರುವ ಕೆಶಿಫ್ ರಸ್ತೆ ಅವೈಜ್ಞಾನಿಕವಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ದುರಸ್ತಿಗೆ ಬಂದು 6 ತಿಂಗಳಾಗಿದೆ, ಇದರಿಂದ ರೈತರು ಖಾಸಗಿ ಆಸ್ಪತ್ರೆಗಳಲ್ಲಿ ದುಪಟ್ಟು ಹಣ ನೀಡಿ ಸ್ಕ್ಯಾನಿಂಗ್ ಮಾಡಿಸುವ ಪರಿಸ್ಥಿತಿ ಎದುರಾಗಿದೆ. ರೆಕಾರ್ಡ್ ರೂಂ.ಆಹಾರ ಕಚೇರಿ ಬಾಗಿಲು ತೆಗೆದು ತಿಂಗಳು ಕಳೆದಿದ್ದು, ರೈತರು ಜಮೀನಿನ ಕೆಲಸ ಮಾಡಿಸಿಕೊಳ್ಳಲು ನಿತ್ಯ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಯಾರದ್ದೊ ಪಹಣಿಯನ್ನು ಮತ್ಯಾರೊ ಹೆಸರಿಗೆ ಮಾಡಿರುವುದರಿಂದ ಡಿಸಿ ಕಚೇರಿಗೆ ಅಲೆಯುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿ ಗ್ರಾಮದಲ್ಲೂ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಇದರಿಂದ ಕೂಲಿಕಾರ್ಮಿಕರು, ರೈತರು ಅಕ್ರಮ ಮದ್ಯ ಕುಡಿದು ಸಾಯುತ್ತಿದ್ದಾರೆ. ಜಮೀನಿಗೆ ಟಿಸಿ ಆಳವಡಿಸಿಕೊಳ್ಳಲು 2 ವರ್ಷಗಳ ಹಿಂದೆ ಹಣ ಕಟ್ಟಿದರು ಟಿಸಿ ಅಳವಡಿಸಿಲ್ಲ. ಪಟ್ಟಣದ ಕೊಳಚೆ ನೀರು ಭರ್ಗಾವತಿ ಕೆರೆಗೆ ಹರಿದು ಸುತ್ತಮುತ್ತಲ ರೈತರಿಗೆ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಕಲುಷಿತ ನೀರು ಕುಡಿಯುವಂತಾಗಿದೆ. ರೈತರು ಬೆಳೆ ಸಾಲ ಪಡೆಯಲು ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆದರು ಕೆಲಸವಾಗುತ್ತಿಲ್ಲ. ರಿಯಲ್‌ಎಸ್ಟೆಟ್ ಮತ್ತು ದಳ್ಳಾಳಿಗಳ ಕೆಲಸವಾಗುತ್ತಿದೆ ಆದರೆ, ರೈತರ ಬೆಳೆಬೆಳೆಯಲು ಸಾಲಪಡೆಯದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕರು ನಾಗರಿಕರಿಗೆ, ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ಸಂಪರ್ಕ ಕಲ್ಪಿಸದೆ ಖಾಸಗಿ ಬಸ್ ಮಾಲೀಕರೊಂದಿಗೆ ಶಾಮೀಲಾಗಿ ರೈತರ ಮಕ್ಕಳು ಕಾಲೇಜುಗಳಿಗೆ ಹೊಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ತಹಸೀಲ್ದಾರ್ ಸಂಬಂಧಪಟ್ಟ ಅಧಿಕಾರಿಗಳು ಮತ್ತು ರೈತರನ್ನು ಕರೆಸಿ ಸಭೆ ನಡೆಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪಹಣಿಯಲ್ಲಿ ತಪ್ಪು ಮಾಹಿತಿ
ಅಧಿಕಾರಿಗಳು ರಾಗಿ ಖರೀದಿಸದೆ ನಿರ್ಲಕ್ಷ್ಯಿಸುತ್ತಿರುವುದರಿಂದ ಸಾಲಗಾರರಿಗೆ ಸಾಲ ನೀಡಲಾಗದೆ ನಾಲ್ಕೈದು ಮಂದಿ ರೈತರು ವಿಷಕುಡಿಯುವಲ್ಲಿ ಮುಂದಾಗಿದ್ದಾರೆ. ಇದಕ್ಕೆ ತಹಸೀಲ್ದಾರ್, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು ಹೊಣೆಯಾಗುತ್ತಾರೆ. ಬೆಳೆ ಸಮೀಕ್ಷೆ ವೇಳೆ ಗ್ರಾಮ ಸೇವಕರು ಸ್ಥಳಿಯ ಚುನಾಯಿತ ಪ್ರತಿನಿಧಿಗಳು ಹೇಳುವ ಮಾಹಿತಿ ಆಧಾರದ ಮೇಲೆ ಪಹಣಿಯಲ್ಲಿ ಬೆಳೆ ಸಮೀಕ್ಷೆ ನಮೂದಿಸುತ್ತಿದ್ದಾರೆ. ನನ್ನ ಎರಡುವರೆ ಎಕರೆ ಅಡಿಕೆ ಮರವಿದ್ದು, ಬರಡು ಭೂಮಿ ಎಂದು ಪಹಣಿಯಲ್ಲಿ ನಮೂದಿಸಿದ್ದಾರೆ. ಇದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಕೂಡಲೇ ಎಡಿಎಲ್‌ಆರ್ ಅಧಿಕಾರಿಗಳು ಗ್ರಾಮ ಸೇವಕರನ್ನು ಬೆಳೆ ಸಮೀಕ್ಷೆ ಸರ್ವೆಗೆ ನೇಮಕ ಮಾಡಬಾರದು ಎಂದು ಹೊಸಪಾಳ್ಯ ಲೋಕೇಶ್ ಒತ್ತಾಯಿಸಿದರು. ರೈತ ಮುಖಂಡರಾದ ರಂಗಸ್ವಾಮಿ, ನಿಂಗಣ್ಣ, ಮಾಯಣ್ಣ, ಚನ್ನರಾಯಪ್ಪ, ರಾಮಣ್ಣ, ರಘು, ಜಯಣ್ಣ, ಗಂಗಣ್ಣ, ಬುಡಾನ್ ಸಾಬ್, ಶಂಕರಯ್ಯ, ಕೃಷ್ಣಪ್ಪ, ವೆಂಕಟೇಶ್ ಇತರರು ಇದ್ದರು.
ಶೀಘ್ರ ರೈತ ಮುಖಂಡರೊಂದಿಗೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸಲಾಗುವುದು. ರಾಗಿ ಖರೀದಿ ಕೇಂದ್ರದಲ್ಲಿ ಖರೀದಿ ಮಾಡಲು ವಿಳಂಬವಾಗುತ್ತಿದೆ ಎಂಬ ದೂರುಗಳು ಬಂದಿದ್ದು, ಮತ್ತಷ್ಟು ಸಿಬ್ಬಂದಿ ನೇಮಕ ಮಾಡಿ ಖರೀದಿಗೆ ಅನುವು ಮಾಡಿಕೊಡಲಾಗುವುದು.
ಜಿ.ಸುರೇಂದ್ರಮೂರ್ತಿ, ತಹಸೀಲ್ದಾರ್