ಜಿಲ್ಲೆ

ಪ್ರತ ಮನೆಯಲ್ಲೊಬ್ಬರು ಪದವೀಧರಕೆಎಸ್‌ಒಯು ಗುರಿ ಎಂದ ಕುಲಪತಿ ಶರಣಪ್ಪ ವಿ. ಹಲಸೆ

ಗಂಗಾಧರ ಬಿ ವಿ

ರಾಮನಗರ

ರಾಜ್ಯದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವುದು ಹಾಗೂ ಪ್ರತಿ ಮನೆಯಲ್ಲಿ ಒಬ್ಬರನ್ನು ಪದವೀಧರರನ್ನಾಗಿ ಮಾಡುವುದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು)ದ ಗುರಿಯಾಗಿದೆ ಎಂದು ಕುಲಪತಿ ಶರಣಪ್ಪ ವಿ. ಹಲಸೆ ತಿಳಿಸಿದರು.

ನಗರದಲ್ಲಿರುವ ವಿಶ್ವ ವಿದ್ಯಾಲಯದ ಪ್ರಾದೇಶಿಕ ಕಚೇರಿಯಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, .ರಾಜ್ಯದಲ್ಲಿ ಉನ್ನತ ಶಿಕ್ಷಣ ಎಲ್ಲರಿಗೂ ಎಲ್ಲೆಡೆ ಎಂಬ ಧ್ಯೇಯ ವಾಕ್ಯದೊಂದಿಗೆ ದೂರ ಶಿಕ್ಷಣದಲ್ಲಿ ಉನ್ನತ ಶಿಕ್ಷಣವನ್ನು 1996ರಿಂದಲೂ ನೀಡುತ್ತಾ ಬಂದಿದೆ. ಕರ್ನಾಟಕ ವಿಶ್ವವಿದ್ಯಾನಿಲಯ ಕಾಯ್ದೆ ಪ್ರಕಾರ ಪ್ರಾರಂಭವಾಗಿರುವ ಕೆಎಸ್‌ಒಯು ರೆಗ್ಯುಲರ್ ವಿಶ್ವವಿದ್ಯಾನಿಲಯಗಳ ಉನ್ನತ ಶಿಕ್ಷಣಕ್ಕೆ ಸರಿಸಮನಾಗಿ ಸ್ನಾತಕ, ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮನೆ ಬಾಗಿಲಿಗೆ ಒದಗಿಸುವ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ ಎಂದರು.

ರಾಜ್ಯದಲ್ಲಿ ಕೆಎಸ್‌ಒಯು ಹೊರತುಪಡಿಸಿ ಬೇರಾವುದೇ ಸಾಂಪ್ರದಾಯಿಕ ವಿವಿಗಳು ದೂರ ಮತ್ತು ಮುಕ್ತ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ರಾಜ್ಯ ಸರ್ಕಾರ 2020ರ ಡಿಸೆಂಬರ್ 13ರ ಕರ್ನಾಟಕ ರಾಜ್ಯ ಪತ್ರದಲ್ಲಿನ ಅಧಿಸೂಚನೆಯಲ್ಲಿ ಆದೇಶಿಸಿದೆ ಹಾಗೂ ಯುಜಿಸಿ ಮಾನ್ಯತೆ ಇರುತ್ತದೆ. ಕೆಎಸ್‌ಒಯು ದೂರ ಶಿಕ್ಷಣದ ಪದವಿ ಸಾಂಪ್ರದಾಯಿಕ ವಿವಿಗಳು ನೀಡುವ ಶಿಕ್ಷಣ ಕ್ರಮಗಳಿಗೆ ಸಮಾನವಾಗಿರುತ್ತದೆ ಎಂದು ತಿಳಿಸಿದರು.

ಯುಜಿಸಿ ಮಾನ್ಯತೆ ಪಡೆದಿರುವ 64 ಸ್ನಾತಕ/ಸ್ನಾತಕೋತ್ತರ ಪದವಿ, ಡಿಪ್ಲೊಮಾ ಶಿಕ್ಷಣ ಕ್ರಮಗಳಿಗೆ ಪ್ರವೇಶಾತಿ ನೀಡುತ್ತಿದ್ದು. ಇದರ ಜತೆಗೆ ಪ್ರಸಕ್ತ ಸಾಲಿನಿಂದ ಸಮಾಜ ಕಾರ್ಯ, ಪ್ರವಾಸೋದ್ಯಮ, ಭೂವಿಜ್ಞಾನ ಮತ್ತು ಇನ್ನಿತರ ಹೊಸ ಕೋರ್ಸ್‌ಗಳಿಗೆ ಪ್ರವೇಶಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಶರಣಪ್ಪ ವಿ. ಹಲಸೆ ತಿಳಿಸಿದರು. ಪ್ರಸ್ತುತ 2022-23ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರವೇಶಾತಿ ಪ್ರಕಟಣೆಯು 2023ರ ಜ.17ರಿಂದ ಪ್ರಾರಂಭಗೊಂಡಿದ್ದು, ಪ್ರವೇಶ ಪಡೆಯಲು ಮಾರ್ಚ್ 31ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು.

ಕೆಎಸ್‌ಒಯು ಸ್ನಾತಕ ಕೋರ್ಸ್‌ಗಳಾದ ಬಿಎ, ಬಿಕಾಂ, ಬಿಬಿಎ, ಬಿಎಸ್‌ಸಿ (ಸಾಮಾನ್ಯ), ಬಿಎಸ್ಸಿ ಹೋಂ ಸೈನ್ಸ್, ಐಟಿ, ಲೈಬ್ರರಿ ಸೈನ್ಸ್, ಬಿಎಡ್ (ಪ್ರವೇಶ ಪರೀಕ್ಷೆ ಮೂಲಕ) ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಎಂಎ, ಎಂಸಿಜೆ, ಎಂಕಾಂ, ಎಂಬಿಎ, ಎಂಎಸ್ಸಿ, ಎಂಲಿಬ್, ಪದವಿ ನಂತರದ ಡಿಪ್ಲೊಮಾ ಹಾಗೂ ಪಿಯುಸಿ ನಂತರದ ಸರ್ಟಿಫಿಕೇಟ್ ಕೋರ್ಸ್‌ಗಳ ಪ್ರವೇಶಾತಿ ಇರುತ್ತದೆ ಎಂದರು.

ರಿಯಾಯಿತಿ

ಪಜಾ/ಪ್ರಪ/ಒಬಿಸಿ ವಿದ್ಯಾರ್ಥಿಗಳು ಪೂರ್ಣ ಶುಲ್ಕವನ್ನು ಪಾವತಿಸಿ ಪ್ರವೇಶಾತಿ ಪಡೆದು, ನಂತರ ಸ್ಟೇಟ್ ಸ್ಕಾಲರ್‌ಷಿಷ್ ಪೋರ್ಟಲ್ ಮೂಲಕ ಸಮಾಜ ಕಲ್ಯಾಣ ಇಲಾಖೆಯಿಂದ ಶುಲ್ಕವನ್ನು ಮರುಭರಿಸಿಕೊಳ್ಳಬಹುದು. ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳು, ಮಿಲಿಟರಿ ಸೇವೆಯಲ್ಲಿರುವ/ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 15 ರಿಯಾಯಿತಿ ಇರಲಿದೆ. ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಕೋವಿಡ್‌ನಿಂದ ಮೃತಪಟ್ಟವರ ಮಕ್ಕಳಿಗೆ ಅಗತ್ಯ ಪ್ರಮಾಣ ಪತ್ರಗಳನ್ನು ಸಲ್ಲಿಸುವ ಷರತ್ತಿಗೊಳಪಟ್ಟು ಶುಲ್ಕ ವಿನಾಯಿತಿ ಇರುತ್ತದೆ. ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಪತ್ನಿ/ಮಕ್ಕಳಿಗೆ, ಕೆಎಸ್‌ಆರ್‌ಟಿಸಿ/ ಬಿಎಂಟಿಸಿ/ ರಸ್ತೆ ಸಾರಿಗೆ ಸಂಸ್ಥೆ ನೌಕರರಿಗೆ ಯುಜಿ ಮತ್ತು ಪಿಜಿ ಪದವಿ ಶಿಕ್ಷಣ ಕ್ರಮಗಳಿಗೆ ಬೋಧನಾ ಶುಲ್ಕದಲ್ಲಿ ಶೇ. 25ರಷ್ಟು, ಬೋಧನಾ ಸಾಮಗ್ರಿಗಳ ಸಾಫ್ಟ್ ಪ್ರತಿ ಪಡೆಯುವ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಮಾತ್ರ ಶೇ.15ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಶರಣಪ್ಪ ವಿ. ಹಲಸೆ ತಳಿಸಿದರು.

ಕುಲಸಚಿವ ಕೆ.ಎಲ್ ಎನ್ ಮೂರ್ತಿ , ಹಣಕಾಸು ಅಧಿಕಾರಿ ಡಾ.ಖಾದರ್ ಪಾಷಾ, ಡೀನ್ ರಾಮನಾಥನ್ ನಾಯ್ಡು, ಹಾಗೂ ಪ್ರಾದೇಶಿಕ ನಿರ್ದೇಶಕ ಕೆ. ನಂದಕುಮಾರಿ ಮುಂತಾದವರು ಹಾಜರಿದ್ದರು.